ಸಿಎಂ ಕೈ ಮುಗಿದು ಕೇಳಿದರೂ, ವಲಸೆ ಹೋಗುತ್ತಿರುವ ದೆಹಲಿ ಕಾರ್ಮಿಕರು

ನವದೆಹಲಿ, ಏ. 20: ದೇಶದ ರಾಜಧಾನಿ ದೆಹಲಿಯಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ ಬೆನ್ನಲ್ಲೇ ಸಾವಿರಾರು ಕಾರ್ಮಿಕರು ಅಲ್ಲಿಂದ ನಿರ್ಗಮಿಸುತ್ತಿದ್ದಾರೆ. ಎಲ್ಲೂ ಹೋಗಬೇಡಿ, ನಾನಿದ್ದೇನೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಪದೇ ಪದೇ ಮನವಿ ಮಾಡಿದರೂ ಕಾರ್ಮಿಕರು ನಿಲ್ಲುತ್ತಿಲ್ಲ. ಆನಂದ್ ವಿಹಾರ್ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಇವತ್ತು ಮಂಗಳವಾರ ಸರಿಸುಮಾರು 5 ಸಾವಿರ ಮಂದಿ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಹೋಗಲು ಆಗಮಿಸಿದ್ದು ಕಂಡುಬಂದಿದೆ.

“ನೀವೆಲ್ಲೂ ಹೋಗಬೇಡಿ. ಸರ್ಕಾರ ನಿಮ್ಮ ಯೋಗಕ್ಷೇಮದ ಜವಾಬ್ದಾರಿ ಹೊರುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನನ್ನ ಮೇಲೆ ವಿಶ್ವಾಸ ಇಡಿ” ಎಂದು ಒಂದು ವಾರ ಕಾಲ ಲಾಕ್ ಡೌನ್ ಘೋಷಣೆ ಮಾಡುವ ಸಂದರ್ಭದಲ್ಲೂ ಅರವಿಂದ್ ಕೇಜ್ರಿವಾಲ್ ಅವರು ಕಾರ್ಮಿಕರಿಗೆ ಕೈಮುಗಿದು ಕೇಳಿಕೊಂಡಿದ್ದರು. ಆದರೆ, ಕಳೆದ ವರ್ಷದ ಕೇಂದ್ರ ಸರ್ಕಾರ ಘೋಷಿಸಿದ್ದ ಮೂರು ವಾರಗಳ ಲಾಕ್ ಡೌನ್ ಇನ್ನಷ್ಟು ಕಾಲ ಮುಂದುವರಿದ ಉದಾಹರಣೆ ಕಣ್ಮುಂದೆ ಇದ್ದ ಕಾರಣ ದೆಹಲಿಯಲ್ಲಿ ಕರ್ಫ್ಯೂ ಹೆಚ್ಚು ಅವಧಿಯವರೆಗೆ ಮುಂದುವರಿಯಬಹುದು ಎಂಬ ಭಯ ಇಲ್ಲಿಯ ಕಾರ್ಮಿಕರದ್ದು. ಮೇಲಾಗಿ, ಕೋವಿಡ್ ಪ್ರಕರಣಗಳು ಹಿಂದೆಂದಿಗಿಂತಲೂ ಎಗ್ಗಿಲ್ಲದೇ ಏರಿಕೆ ಕಾಣುತ್ತಿರುವುದರಿಂದ ಸದ್ಯಕ್ಕಂತೂ ಕೋವಿಡ್ ಮತ್ತು ಲಾಕ್ ಡೌನ್​ನಿಂದ ಮುಕ್ತಿ ಸಿಗುವ ಸಾಧ್ಯತೆ ಇಲ್ಲ ಎಂಬ ಎಣಿಕೆ ವಲಸೆ ಕಾರ್ಮಿಕರದ್ದು.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಆನ್​ಲೈನ್​ನಲ್ಲಿ ಮತ್ತೊಮ್ಮೆ ಮನವಿ ಮಾಡಿದ್ದಾರೆ. “ಇದು ಆರು ದಿನಗಳ ಕಾಲ ಮಾತ್ರ ಇರುವ ಲಾಕ್ ಡೌನ್ ಆಗಿದೆ. ವಲಸೆ ಕಾರ್ಮಿಕರೇ ದೆಹಲಿ ಬಿಟ್ಟು ಹೋಗಬೇಡಿ. ನೀವು ಸುಮ್ಮನೆ ಸಮಯ, ಹಣ ಮತ್ತು ಶಕ್ತಿ ವ್ಯಯ ಮಾಡಿಕೊಳ್ಳುತ್ತೀರಿ. ದೆಹಲಿಯಲ್ಲೇ ಉಳಿಯಿರಿ… ಲಾಕ್ ಡೌನ್ ವೇಳೆ ಅದೆಷ್ಟು ಜನರು ಕೆಲಸ ಮತ್ತು ಕೂಲಿ ಕಳೆದುಕೊಳ್ಳುತ್ತಾರೆಂಬುದು ನಂಗೆ ಗೊತ್ತು. ಅದರಲ್ಲೂ ಬಡ ಜನರು ಮತ್ತು ದಿನಗೂಲಿ ಕಾರ್ಮಿಕರಿಗೆ ಇದು ಬಹಳ ಕಠಿಣ ಪರಿಸ್ಥಿತಿ ಆಗಿದೆ” ಎಂದು ಕೇಜ್ರಿವಾಲ್ ಕೇಳಿಕೊಂಡಿದ್ದಾರೆ.

Exit mobile version