ಟ್ರ್ಯಾಕ್ಟರ್ ಕಳ್ಳರ ಬಂಧನ: ಕೋಟ್ಯಾಂತರ ರೂ. ಮೌಲ್ಯದ ಟ್ರ್ಯಾಕ್ಟರ್ ಹಾಗೂ ಕಾರುಗಳ ವಶ

ಬೆಂಗಳೂರು, ಡಿ. 30: ನಗರದ ಪಶ್ಚಿಮ ವಿಭಾಗ, ವಿಜಯನಗರ ಉಪವಿಭಾಗದ ಕಾಮಾಕ್ಷಿಪಾಳ್ಯ ಪೊಲೀಸರ ತಂಡವು ಟ್ರ್ಯಾಕ್ಟರ್ ಕಳವು ಮಾಡಿದ್ದ ಪ್ರಕರಣವನ್ನು ಭೇಧಿಸಿ ಐವರನ್ನು ಬಂಧಿಸಿ, ಅಂದಾಜು 1.46 ಕೋಟಿ ರೂ. ಮೌಲ್ಯದ ಟ್ರ್ಯಾಕ್ಟರ್ ಗಳು, ಕಾರು ಮುಂತಾದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಸುಂಕದಕಟ್ಟೆಯಲ್ಲಿ ಟ್ರಾಕ್ಟರ್ ಕಳ್ಳತನವಾಗಿತ್ತು. ಇದರ ಜಾಡು ಹಿಡಿದು ತನಿಖೆ ನಡೆಸಿದ ಕಾಮಾಕ್ಷಿಪಾಳ್ಯ ಪೊಲೀಸರು ಇತ್ತೀಚೆಗೆ ಬೋರೇಗೌಡ ಎಂಬ ಆರೋಪಿಯನ್ನು ಬಂಧಿಸಿ ಹನ್ನೆರಡು ಟ್ರಾಕ್ಟರ್, ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದರು. ಈತ ಕಳ್ಳನಿಂದ ಕದ್ದ ಟ್ರಾಕ್ಟರ್ ಗಳನ್ನು ಖರೀದಿಸಿ ಅವನ್ನು ರೈತರಿಗೆ ಬಾಡಿಗೆಗೆ ನೀಡುತ್ತಿದ್ದ ಎಂಬ ಸಂಗತಿ ಬೆಳಕಿಗೆ ಬಂದಿತ್ತು. ಇದರ ತನಿಖೆ ನಡೆಸಿದ ಕಾಮಾಕ್ಷಿಪಾಳ್ಯ ಠಾಣೆ ಇನ್‌ಸ್ಪೆಕ್ಟರ್ ಪ್ರಶಾಂತ್ ಮತ್ತು ತಂಡ ಟ್ರಾಕ್ಟರ್ ಕದಿಯುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿ 1.46 ಕೋಟಿ ರೂಪಾಯಿ ಮೌಲ್ಯದ 26 ಟ್ರಾಕ್ಟರ್, ಐದು ಮಾರುತಿ ಓಮಿನಿ ಹಾಗೂ ಎಂಟು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಈ ನಡುವೆ ಲಂಚ ಕೊಟ್ಟರೆ, ಕದ್ದ ಹಳೇ ಟ್ರಾಕ್ಟರ್ ಗಳನ್ನೇ ಹೊಸ ಟ್ರಾಕ್ಟರ್ ಎಂದು ನೋಂದಣಿ ಮಾಡಿಸಿ ಆರ್‌ಟಿಓ ಅಧಿಕಾರಿಗಳು ಅಸಲಿ ದಾಖಲೆಗಳನ್ನು ಕೊಡುತ್ತಾರೆ ಎಂಬ ಮಾಹಿತಿ ಬಹಿರಂಗಗೊಂಡಿದೆ.

ಪ್ರಕರಣದಲ್ಲಿ ಬಂಧಿತನಾದ ಕಳ್ಳನ ವಿಚಾರಣೆ ನಡೆಸಿದ ವೇಳೆ, ಕದ್ದ ಟ್ರಾಕ್ಟರ್ ಗಳನ್ನು ಹೊಸದಾಗಿ ನೋಂದಣಿ ಮಾಡಿಸುವ
ಮೂಲಕ ಟ್ರಾಕ್ಟರ್ ಕಳ್ಳನೊಬ್ಬ ಎರಡು ಆರ್‌ಟಿಓ ಕಚೇರಿ ಅಧಿಕಾರಿಗಳ ಅಸಲಿತನವನ್ನು ಬೆತ್ತಲುಗೊಳಿಸಿದ್ದಾನೆ. ವಿಪರ್ಯಾಸವೆಂದರೆ ಒಂದೂವರೆ ಕೋಟಿ ಮೌಲ್ಯದ ಟ್ರಾಕ್ಟರ್ ಗಳನ್ನು ಕದ್ದಿದ್ದ ಕಳ್ಳ ಮತ್ತು ಆತನ ಸಹಚರರು ಕಾಮಾಕ್ಷಿಪಾಳ್ಯ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಈ ಭಯಾನಕ ಸಂಗತಿ ಹೊರ ಬಿದ್ದಿದೆ.

Exit mobile version