ಸಂಚಾರ ನಿಲ್ಲಿಸಿದ ಸಂಚಾರಿಯ ಅಂತಿಮಯಾತ್ರೆ; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಸಂಚಾರಿ ವಿಜಯ್​… ಇಹಲೋಕ ತ್ಯಜಿಸಿ ಬಾರದ ಲೋಕಕ್ಕೆ ಸಂಚಾರ ಬೆಳೆಸಿದ ಕಲಾವಿದ. ರಾಷ್ಟ್ರ ಪ್ರಶಸ್ತಿ ವಿಜೇತ ದೇಸಿ ಪ್ರತಿಭೆ ಅಗಲಿಕೆಗೆ ಕನ್ನಡ ಸಿನಿಪ್ರೇಮಿಗಳು ಕಣ್ಣೀರಿಟ್ಟಿದ್ದಾರೆ. ಹೌದು, ಶನಿವಾರ ನಡೆದ ಅಪಘಾತದಿಂದ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಸಂಚಾರಿ ವಿಜಯ್​ ಅವರು ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ನಿನ್ನೆ ಬೆಳಿಗ್ಗೆಯೇ ಅವರ ತಲೆಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ನಂತರ ಅವರ ತಲೆಗೆ ಸ್ಟ್ರೋಕ್​ ಹೊಡೆದಿದೆ. ಇದಾದ ನಂತರ ಮೆದುಳು ನಿಷ್ಕ್ರಿಯಗೊಂಡಿದೆ. ನಂತರ ಪ್ರಜ್ಞೆ ಬರಲು ನೀಡಿದ ಯಾವ ಚಿಕಿತ್ಸೆಯೂ ಕೆಲಸ ಮಾಡಲಿಲ್ಲ. ಉಳಿದಂತೆ ಅವರ ದೇಹದಲ್ಲಿ ಬೇರೆಲ್ಲ ಚಟುವಟಿಕೆಗಳು ನಡೆಯುತ್ತಿದ್ದವು. ಸಂಜೆ ಹೊತ್ತಿಗೆ ವಿಜಯ್​ ಅವರ ಮೆದುಳು ಡೆಡ್​ ಆಗಿದೆಯಾ ಎಂದು ತಿಳಿದುಕೊಳ್ಳಲು ಹಲವಾರು ರೀತಿಯ ಪರೀಕ್ಷೆಗಳನ್ನು ಮಾಡಲಾಯಿತು. ಕಡೆ್ಗೆ ವಿಜಯ್ ಅವರ ಬ್ರೈನ್​ ಡೆಡ್​ ಆಗಿದೆ ಎಂದು ಘೋಷಿಸಿದ ವೈದ್ಯರು ಅಂಗಾಂಗ ದಾನ ಪ್ರಕ್ರಿಯೆಗೆ ಅಗತ್ಯವಾದ ವ್ಯವಸ್ಥೆ ಮಾಡಿಕೊಳ್ಳಲು ಆರಂಭಿಸಿದ್ದರು. ಇದಾದ  ನಂತರ  ಅಂದರೆ ಇಂದು ಬೆಳಿಗ್ಗೆ 3.34ಕ್ಕೆ ವಿಜಯ್​ ಅವರು ಇಹಲೋಕ ತ್ಯಜಿಸಿದ್ದಾರೆ ಎಂದು ಆಸ್ಪತ್ರೆಯವರು ಅಧಿಕೃತವಾಗಿ ಘೋಷಿಸಿದ್ದಾರೆ.

ಇಂದು ಬೆಳಿಗ್ಗೆ 8 ರಿಂದ 10 ಗಂಟೆವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ವಿಜಯ್​ ಅವರ ಪಾರ್ಥೀವ ಶರೀರವನ್ನು ರವೀಂದ್ರ ಕಲಾಕ್ಷೇತ್ರಕ್ಕೆ ತಂದು ಇರಿಸಲಾಗುವುದು ಎಂದು ನಿನ್ನೆಯೇ ತಿಳಿಸಲಾಗಿತ್ತು. ಈಗಾಗಲೇ ಅಂತಿಮ ದರ್ಶನ ಅಂತ್ಯವಾಗಿದ್ದು ತಮ್ಮ ಹುಟ್ಟೂರಾದ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಪಂಚನಹಳ್ಳಿಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಅಲ್ಲಿ ಇಂದು ಸಂಜೆ ಹೊತ್ತಿಗೆ ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.

ವಿಜಯ್​ ಅವರು ರಾಷ್ಟ್ರ ಪ್ರಶಸ್ತಿ ವಿಜೇತರು. ಅವರಿಗೆ ಸಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಯಬೇಕೆಂದು ಜೆಡಿಎಸ್ ಮುಖಂಡ ವೈವಿಎಸ್​ ದತ್ತ ಅವರು ಒತ್ತಾಯಿಸಿದ್ದಾರೆ. ಇನ್ನು ನಿನ್ನೆಯೇ ನಿರ್ದೇಶಕ ಹಾಗೂ ವಿಜಯ್​ ಅವರ ಆಪ್ತ ಗೆಳೆಯ ಮನ್ಸೋರೆ ತಮ್ಮ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದು, ಅಂತಿಮ ದರ್ಶನದ ನಂತರ ಪಾರ್ಥೀವ ಶರೀರವನ್ನು ವಿಜಯ್​ ಅವರ ಹುಟ್ಟೂರಿಗೆ ತೆಗೆದುಕೊಂಡು ಹೋಗಲಾಗುವುದು ಎಂದಿದ್ದಾರೆ. ಅಲ್ಲದೆ ಅದೇ ದಿನ ಸಂಜೆ ಅಂತಿಮ ವಿಧಿವಿದಾನಗಳನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಹುಟ್ಟೂರಾದ ಪಂಚನಹಳ್ಳಿಯಲ್ಲಿ ನೆರವೇರಿಸಲಾಗುವುದು ಎಂದೂ ಬರೆದುಕೊಂಡಿದ್ದಾರೆ.

ವಿಜಯ್ಮಾಡಿದ ಒಂದು ತಪ್ಪು

ಶನಿವಾರ ಸಂಚಾರಿ ವಿಜಯ್​ ಹಾಗೂ ಅವರ ಸ್ನೇಹಿತ ನವೀನ್​ ಅವರು ಸಂಜೆ ಬೈಕ್​ನಲ್ಲಿ ಹೊರಗಡೆ ಹೋಗಿದ್ದಾಗ ಅಪಘಾತ ನಡೆದಿದೆ. ತುಂತುರು ಮಳೆ ಇದ್ದ ಕಾರಣದಿಂದ ಬೈಕ್​ ಸ್ಕಿಡ್​ ಆಗಿ ಬಿದ್ದಿದ್ದಾರೆ. ಈ ಅಪಘಾತದಲ್ಲಿ ವಿಜಯ್​ ಹಾಗೂ ನವೀನ್​ ಅವರಿಗೆ ತೀವ್ರವಾಗಿ ಪೆಟ್ಟಾಗಿತ್ತು. ಲಾಕ್​ಡೌನ್​ ಇದ್ದ ಕಾರಣದಿಂದಾಗಿ ಹೆಚ್ಚಾಗಿ ವಾಹನ ಸಂಚಾರವೂ ಇರಲಿಲ್ಲ, ಬೇರೆ ಯಾವ ಗಾಡಿಯಿಂದಲೂ ಇವರ ಸಂಚಾರಕ್ಕೆ ಅಡ್ಡಿಯಾಗಿಲ್ಲ. ಕೇವಲ ಮಳೆಯಿಂದಲೇ ವಾಹನ ಸ್ಕಿಡ್​​ ಆಯಿತೇ ಎಂದು ಚರ್ಚಿಸಲಾಗುತ್ತಿದೆ.

ಅದೇನೇ ಇರಲಿ, ಅಪಘಾತ ಸಂಭವಿಸಿದಾಗ ನಟ ಸಂಚಾರಿ ವಿಜಯ್​ ಹೆಲ್ಮೆಟ್​ ಧರಿಸದೆ ಇದ್ದಿದ್ದು ಸ್ಪಷ್ಟ. ಒಂದೇ ಒಂದು ನಿರ್ಲಕ್ಷ್ಯ ಮತ್ತೆಂದೂ ತಿದ್ದಿಕೊಳ್ಳಲು ಸಾಧ್ಯವಾಗದಂತ ದೊಡ್ಡ ತಪ್ಪಾಗಿದೆ. ಇದಕ್ಕಾಗಿಯೇ ಸರ್ಕಾರ ಬೈಕ್​​ ಸವಾರರಿಗೆ, ಹಿಂಬದಿ ಸವಾರರಿಗೆ ಹೆಲ್ಮೆಟ್​ ಕಡ್ಡಾಯ ಮಾಡಿರುವುದು. ಇಷ್ಟೊಂದು ಸಾವುಗಳ ಬಳಿಕವಾದರೂ ಎಲ್ಲರೂ ಸಂಚಾರಿ ನಿಯಮಗಳನ್ನು ಪಾಲಿಸಬೇಕಿದೆ. ಇದು ಪ್ರತಿಯೊಬ್ಬರಿಗೂ ಮತ್ತೊಂದು ಎಚ್ಚರಿಕೆಯ ಗಂಟೆ ಎಂದರೆ ತಪ್ಪಾಗಲಾರದು.

Exit mobile version