ಇದೇ ಏಪ್ರಿಲ್ 25ನೇ ತಾರೀಕಿನಿಂದ 10 ದಿನಗಳ ಕಾಲ ದುಬೈ ಮತ್ತು ಭಾರತದ ಮಧ್ಯೆ ವಿಮಾನ ಹಾರಾಟವನ್ನು ಅಮಾನತು ಮಾಡಿರುವುದಾಗಿ ಗುರುವಾರ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆ ಎಮಿರೇಟ್ಸ್ ತಿಳಿಸಿದೆ. ಭಾರತದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಲಾಗಿದೆ ಎಂದು ವರದಿ ಆಗಿದೆ. ಅಂದ ಹಾಗೆ ವಿಶ್ವದಾದ್ಯಂತ ಹಲವು ರಾಷ್ಟ್ರಗಳು ತಮ್ಮ ಪ್ರಯಾಣ ನಿರ್ಬಂಧ ಪಟ್ಟಿಯಲ್ಲಿ ಭಾರತವನ್ನು ಸೇರಿಸಿವೆ. ಅಮೆರಿಕ, ಹಾಂಕಾಂಗ್, ಯುನೈಟೆಡ್ ಕಿಂಗ್ಡಮ್ ಈಗಾಗಲೇ ತಮ್ಮ ನಾಗರಿಕರಿಗೆ ಹೊಸದಾಗಿ ಎಚ್ಚರಿಕೆಯನ್ನು ನೀಡಿವೆ. ಭಾರತಕ್ಕೆ ತೆರಳುವುದನ್ನು ಮತ್ತು ಇಲ್ಲಿಂದ ಪ್ರಯಾಣಿಸುವುದನ್ನು ನಿಲ್ಲಿಸುವಂತೆ ಸೂಚಿಸಿದೆ.
ಈಗಿನ ಪ್ರಯಾಣ ನಿರ್ಬಂಧವು ಏಪ್ರಿಲ್ 24ರ ಶನಿವಾರ ರಾತ್ರಿ 11.59ರಿಂದ ಜಾರಿಗೆ ಬರಲಿದೆ. 10 ದಿನಗಳ ನಂತರ ಮತ್ತೊಮ್ಮೆ ಪರಿಸ್ಥಿತಿಯ ಅವಲೋಕನ ಮಾಡಲಾಗುತ್ತದೆ ಎಂದು ಗಲ್ಫ್ ನ್ಯೂಸ್ ಸುದ್ದಿಯನ್ನು ಆಧರಿಸಿ, ಪಿಟಿಐ ವರದಿ ಮಾಡಿದೆ. ಇನ್ನು ಕಳೆದ 14 ದಿನಗಳಲ್ಲಿ ಭಾರತದಿಂದ ತೆರಳಿರುವ ಯಾವುದೇ ಪ್ರಯಾಣಿಕರಿಗೂ ಎಲ್ಲಿಂದಲೂ ಯುಎಇಗೆ ಪ್ರವೇಶ ಇಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ ಯುಎಇಯಿಂದ ಹೊರಡುವುದು ಹಾಗೂ ಸರಕು ಸಾಗಣೆ ವಿಮಾನಗಳು ಅಲ್ಲಿಂದ ಭಾರತಕ್ಕೆ ಬರುವುದು ಮುಂದುವರಿಯಲಿದೆ. ಯುಎಇ ನಾಗರಿಕರು, ರಾಜತಾಂತ್ರಿಕ ನಿಯೋಗ, ಅಧಿಕೃತ ನಿಯೋಗಗಳು ಮತ್ತು ಉದ್ಯಮಿಗಳ ವಿಮಾನಗಳಿಗೆ ಈ ನಿರ್ಬಂಧದಿಂದ ವಿನಾಯಿತಿ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ವರದಿಯ ಅನ್ವಯ, ಈ ಮೇಲಿನ ಪ್ರಯಾಣಿಕರಿಗೆ 10 ದಿನಗಳ ಕ್ವಾರಂಟೈನ್ ಕಡ್ಡಾಯ ಆಗಿರುತ್ತದೆ. ಅವರು ಅಲ್ಲಿಗೆ ತೆರಳುವ ದಿನ ಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಲೇಬೇಕು. ಅದರ ಜತೆಗೆ ನಾಲ್ಕು ಹಾಗೂ ಎಂಟನೇ ದಿನ ಕೂಡ ಪರೀಕ್ಷೆ ಆಗಲೇಬೇಕು. ಇನ್ನು ಯುಎಇಯಿಂದ ಹೊರಡುವ ಮೊದಲು ಈ ಹಿಂದೆ ಇದ್ದ 72 ಗಂಟೆಗಳ ಮುಂಚಿನ ಪರೀಕ್ಷೆಯನ್ನು 48 ಗಂಟೆಗೆ ಇಳಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಧಿಕೃತ ಲ್ಯಾಬ್ಗಳ ಪರೀಕ್ಷೆ ಫಲಿತಾಂಶವನ್ನು ಮಾತ್ರ ಸ್ವೀಕರಿಸಲಾಗುತ್ತದೆ. ಅವುಗಳು ಕ್ಯೂಆರ್ ಕೋಡ್ ಜನರೇಟ್ ಮಾಡಿರುತ್ತವೆ.
ಖಲೀಜಾ ಟೈಮ್ಸ್ ವರದಿ ಪ್ರಕಾರ, ಏಪ್ರಿಲ್ 24ರ ನಂತರ ಭಾರತದ ಯಾವುದೇ ಸ್ಥಳಗಳಿಗೆ ವಿಮಾನ ಬುಕ್ ಮಾಡುವುದನ್ನು ಎಮಿರೇಟ್ಸ್, ಎಥಿಹಾದ್. ಫ್ಲೈದುಬೈ ಮತ್ತು ಏರ್ ಅರೇಬಿಯಾ ವೆಬ್ಸೈಟ್ಗಳು ನಿರ್ಬಂಧಿಸಿವೆ.