ಪ್ರಧಾನಿ ನರೇಂದ್ರ ಮೋದಿ 28 ಪೈಸೆ ಪಿಎಂ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್‌ .

Chennai: ಸದಾ ಒಂದಲ್ಲ ಒಂದು ಹೇಳಿಕೆ ನೀಡಿ ಹಲವರ ಕೆಂಗಣ್ಣಿಗೆ ಗುರಿಯಾಗುವ ತಮಿಳುನಾಡು ಮುಖ್ಯಮಂತ್ರಿ ಪುತ್ರ ಉದಯನಿಧಿ ಸ್ಟಾಲಿನ್ (Udayanidhi Stalin) ಅವರು ಇದೀಗ ಮತ್ತೊಂದು ವಿವಾದ ಮೈಗೆಳೆದುಕೊಂಡಿದ್ದಾರೆ.ಈ ಹಿಂದೆ ಸನಾತನ ಧರ್ಮ ನಾಶ ಮಾಡಬೇಕು ಎಂಬ ವಿವಾದಾತ್ಮಕ ಹೇಳಿಕೆ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದರು . ಇದೀಗ ತಮಿಳುನಾಡಿಗೆ ಕೇಂದ್ರ ಸರ್ಕಾರ ಸರಿಯಾದ ಪ್ರಮಾಣದಲ್ಲಿ ಅನುದಾನ ಹಂಚಿಕೆ ಮಾಡುತ್ತಿಲ್ಲ.

ತಮಿಳುನಾಡು (Tamilnadu) ಕಟ್ಟುವ 1 ರೂಪಾಯಿಯಲ್ಲಿ 28 ಪೈಸೆ ಮಾತ್ರ ಕೇಂದ್ರ ಸರ್ಕಾರ ನಮಗೆ ನೀಡುತ್ತಿದೆ. ಹೀಗಾಗಿ ಅವರನ್ನು 28 ಪೈಸೆ ಪಿಎಂ ಎಂದು ಕರೆಯಬೇಕು ಎಂದು ಲೇವಡಿ ಮಾಡಿದ್ದಾರೆ. ರಾಮನಾಥಪುರಂ ಹಾಗೂ ಥೇಣಿಯಲ್ಲಿ ಶನಿವಾರ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಉದಯನಿಧಿ ಸ್ಟಾಲಿನ್‌ ಅವರು ತೆರಿಗೆ ಪಾಲಿನ ವಿಚಾರದಲ್ಲಿ ಕೇಂದ್ರದಿಂದ ತಮಿಳುನಾಡಿಗೆ ಅನ್ಯಾಯವಾಗುತ್ತಿದೆ ಎಂದು ಟೀಕಿಸಿದ್ದಾರೆ. ಕೇಂದ್ರ ಸರಕಾರವು, ತಮಿಳುನಾಡಿಗೆ ಸಿಗಬೇಕಾದ ನ್ಯಾಯಯುತ ಪ್ರಮಾಣದಲ್ಲಿ ಅನುದಾನ ಹಂಚಿಕೆ ಮಾಡುತ್ತಿಲ್ಲ.

ತಮಿಳುನಾಡು ಕಟ್ಟುವ ಪ್ರತಿ 1 ರೂಪಾಯಿ ತೆರಿಗೆಯಲ್ಲಿ ಕೇವಲ 28 ಪೈಸೆಯನ್ನು ಮಾತ್ರವೇ ಕೇಂದ್ರ ಸರಕಾರ ನಮಗೆ ನೀಡುತ್ತಿದೆ. ಬಿಜೆಪಿ (BJP) ಅಧಿಕಾರದಲ್ಲಿರುವ ರಾಜ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಪಡೆಯುತ್ತಿವೆ. ಇನ್ನು ಮುಂದೆ ನಾವು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು 28 ಪೈಸೆ ಪಿಎಂ ಎಂದೇ ಕರೆಯೋಣ ಆಗಲಾದರೂ ಮನಸ್ಸು ಬದಲಿಸಿ ಹೆಚ್ಚು ನೀಡಬಹುದು ಎಂದು ಕುಟುಕಿದ್ದಾರೆ.

ತಮಿಳುನಾಡಿಗೆ ಎಲ್ಲ ವಿಚಾರದಲ್ಲೂ ತಾರತಮ್ಯ ಮಾಡುತ್ತಿದ್ದಾರೆ.ತಮಿಳುನಾಡಿನ ಜನರ ಭವಿಷ್ಯವನ್ನು ಹಾಳುಗೆಡವಲು ಕೇಂದ್ರ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿ (NEP)ಯನ್ನು ಜಾರಿಗೆ ತಂದಿದೆ. ಅನುದಾನ ಹಂಚಿಕೆ, ಅಭಿವೃದ್ಧಿ ಯೋಜನೆಗಳು ಮತ್ತು ನೀಟ್‌ (NEET) ವಿಚಾರದಲ್ಲಿ ಕೇಂದ್ರವು ತಮಿಳುನಾಡಿಗೆ ತಾರತಮ್ಯ ಮಾಡಿದೆ ಎಂದು ಆರೋಪಿಸಿದ್ದಾರೆ.

ಚುನಾವಣೆ ಹತ್ತಿರವಿರುವ ಸಂದರ್ಭದಲ್ಲಿ ಮಾತ್ರ ಪ್ರಧಾನಿ ತಮಿಳುನಾಡಿಗೆ ಭೇಟಿ ನೀಡುತ್ತಾರೆ.ಜನರ ಮನದಲ್ಲಿ ದ್ವೇಷದ ಕಿಡಿ ಹೊತ್ತಿಸಿ ಹೋಗುತ್ತಾರೆ.ತಮಿಳುನಾಡಿನ ಅಸ್ಮಿತೆ ಮುಂದೆ ಬಿಜೆಪಿಯ ಆಟ ನಡೆಯದು ಎಂದಿದ್ದಾರೆ.

Exit mobile version