Newdelhi: ಅನೂರ್ಜಿತ ವಿವಾಹದಿಂದ ಜನಿಸಿದ ಮಕ್ಕಳು ಕೂಡಾ ತಮ್ಮ ಪೋಷಕರ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರುರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ (Supreme Court) ಮಹತ್ವದ ತೀರ್ಪು ನೀಡಿದೆ. ಇನ್ನು ಈ ತೀರ್ಪು ಹಿಂದೂ ಮಿತಾಕ್ಷರ ಕಾನೂನಿನಿಂದ ನಿಯಂತ್ರಿಸಲ್ಪಡುವ ಹಿಂದೂ ಅವಿಭಕ್ತ ಕುಟುಂಬದ ಆಸ್ತಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ (D.Y Chandrachud) ನೇತೃತ್ವದ ತ್ರಿಸದಸ್ಯ ಪೀಠವು ರೇವಣಸಿದ್ದಪ್ಪ ವರ್ಸಸ್ ಮಲ್ಲಿಕಾರ್ಜುನ್ ಪ್ರಕರಣದ ದ್ವಿಸದಸ್ಯ ಪೀಠದ ತೀರ್ಪನ್ನು ಉಲ್ಲೇಖಿಸಿ ತೀರ್ಪು ನೀಡಿದ್ದು, ಅನೂರ್ಜಿತ ವಿವಾಹಗಳಿಂದ ಜನಿಸಿದ ಮಕ್ಕಳು ಪೋಷಕರ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರಾಗಿರುತ್ತಾರೆ ಎಂದು ಆದೇಶ ನೀಡಿದೆ.
ಹಿಂದೂ ವಿವಾಹ ಕಾಯಿದೆ 1955 ರ ಸೆಕ್ಷನ್ 16(3) ರ ವ್ಯಾಖ್ಯಾನದ ಪ್ರಕಾರ ಅಮಾನ್ಯ ವಿವಾಹಗಳಿಂದ ಜನಿಸಿದ ಮಕ್ಕಳಿಗೆ ನ್ಯಾಯಸಮ್ಮತತೆಯನ್ನು ನೀಡಲಾಗುತ್ತದೆ. ಆದರೆ ಸೆಕ್ಷನ್ (Section) 16(3) ಹೇಳುವಂತೆ ಅಂತಹ ಮಕ್ಕಳು ತಮ್ಮ ಪೋಷಕರ ಆಸ್ತಿಯನ್ನು ಮಾತ್ರ ಪಡೆದುಕೊಳ್ಳುತ್ತಾರೆ ಮತ್ತು ಇತರ ಕಾಪರ್ಸೆನರಿ ಷೇರುಗಳ ಮೇಲೆ ಯಾವುದೇ ಹಕ್ಕನ್ನು ಹೊಂದಿರುವುದಿಲ್ಲ. ಹಿಂದೂ ಉತ್ತರಾಧಿಕಾರ ಕಾಯಿದೆಯ ಸೆಕ್ಷನ್ 6ರ ಪ್ರಕಾರ, ಆಸ್ತಿಯ ವಿಭಜನೆಯು ತಕ್ಷಣವೇ ನಡೆದಿದ್ದರೆ ಅವರಿಗೆ ಹಂಚಿಕೆಯಾಗುವ ಆಸ್ತಿಯ ಪಾಲು ಎಂದು ವ್ಯಾಖ್ಯಾನಿಸಲಾಗಿದೆ ಎಂದು ಪೀಠವು ವಿವರಿಸಿದೆ.
2011 ರ ತೀರ್ಪು ಏನು ಹೇಳಿದೆ?
ಇಂತಹ ಸಂದರ್ಭದಲ್ಲಿ ಮಗುವಿನ ಜನನವನ್ನು ಪೋಷಕರ ಸಂಬಂಧದಿಂದ ಸ್ವತಂತ್ರವಾಗಿ ನೋಡಬೇಕು. ಅಂತಹ ಸಂಬಂಧದಲ್ಲಿ ಜನಿಸಿದ ಮಗು ಮುಗ್ಧ ಮತ್ತು ಮಾನ್ಯ ಮದುವೆಯಲ್ಲಿ ಜನಿಸಿದ ಇತರ ಮಕ್ಕಳಿಗೆ ನೀಡಲಾಗುವ ಎಲ್ಲಾ ಹಕ್ಕುಗಳಿಗೆ ಅರ್ಹವಾಗಿದೆ ಎಂದು ನ್ಯಾಯಮೂರ್ತಿ ಜಿಎಸ್ ಸಿಂಘ್ವಿ (G S Singhvi) ಮತ್ತು ಎಕೆ ಗಂಗೂಲಿ (A K Ganguli) ಅವರ ವಿಭಾಗೀಯ ಪೀಠವು 2011 ರಲ್ಲಿ ತೀರ್ಪು ನೀಡಿತ್ತು.