ಮರು ಮೈತ್ರಿಯತ್ತ ಬಿಜೆಪಿ-ಅಕಾಲಿಕದಳ, ನೇಪತ್ಯಕ್ಕೆ ಕಾಂಗ್ರೆಸ್!

up elections - bjp

‘ಸಿಖ್ಖರನಾಡು’ ಪಂಬಾಬ್‍ನಲ್ಲಿ ರಾಜಕೀಯ ಬದಲಾವಣೆಯ ಬಹುದೊಡ್ಡ ಪರ್ವ ಶುರುವಾಗಿದೆ! ಇಷ್ಟು ದಿನ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷ ಇದೀಗ ನೇಪತ್ಯಕ್ಕೆ ಸರಿಯುವ ಲಕ್ಷಣಗಳು ಗೋಚರಿಸುತ್ತಿವೆ.

ಕಾಂಗ್ರೆಸ್ ತನ್ನ ಶಕ್ತಿಯನ್ನು ಕಳೆದುಕೊಂಡಿದ್ದು, ಭಗವಂತ್ ಮಾನ್ ನೇತೃತ್ವದ ಆಮ್ ಆದ್ಮಿ ಪಕ್ಷ ಹೊಸ ಶಕ್ತಿಯಾಗಿ ರೂಪುಗೊಂಡಿದೆ.

ಎಎಪಿ ಪಕ್ಷ ಇದೀಗ ಪಂಜಾಬ್‍ನಲ್ಲಿ ಅಧಿಕಾರಕ್ಕೇರುವ ಮಟ್ಟಕ್ಕೆ ತನ್ನ ರಾಜಕೀಯ ಮತ್ತು ಸಂಘಟನಾತ್ಮಕ ಶಕ್ತಿ ಬೆಳೆಸಿಕೊಂಡಿದ್ದು, ಕಾಂಗ್ರೆಸ್, ಬಿಜೆಪಿ ಮತ್ತು ಶಿರೋಮಣಿ ಅಕಾಲಿಕದಳ ಪಕ್ಷಗಳಿಗೆ ಇದೊಂದು ಹೊಸ ಸವಾಲಾಗಿದೆ.

ಎಎಪಿಯನ್ನು ರಾಜಕೀಯವಾಗಿ ಕಟ್ಟಿಹಾಕಬೇಕಾದರೆ, ಬಿಜೆಪಿ-ಶಿರೋಮಣಿ ಅಕಾಲಿದಳ ಒಂದಾಗಬೇಕು. ಇಲ್ಲವಾದರೆ ಎಎಪಿ ರಾಜಕೀಯವಾಗಿ ಮತ್ತಷ್ಟು ಪ್ರಬಲ ಶಕ್ತಿಯಾಗಿ ಬೆಳೆಯಲಿದೆ ಎಂದು ರಾಜಕೀಯ ತಜ್ಞರು ಭವಿಷ್ಯ ನುಡಿದಿದ್ದಾರೆ. ಈ ಕುರಿತು ಗಂಭೀರ ಚಿಂತನೆ ನಡೆಸಿರುವ ಅಕಾಲಿಕದಳ, ಬಿಜೆಪಿಯೊಂದಿಗೆ ಮರುಮೈತ್ರಿ ಮಾಡಿಕೊಳ್ಳಬೇಕೆಂದು ಚಿಂತನೆ ನಡೆಸಿದೆ. ಈಗಾಗಲೇ ಪಂಜಾಬ್‍ನಲ್ಲಿ ವಿಧಾನಸಭಾ ಚುನಾವಣೆ ಮುಗಿದಿದ್ದು, ನಾಳೆ ಫಲಿತಾಂಶ ಲಭ್ಯವಾಗಲಿದೆ.

ಬಹುತೇಕ ಸಮೀಕ್ಷೆಗಳು ಎಎಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವರದಿ ಮಾಡಿವೆ. ಆದರೆ ಎಎಪಿಗೆ ಸ್ಪಷ್ಟ ಬಹುಮತ ದೊರೆಯದಿದ್ದರೆ, ಅಕಾಲಿಕದಳ ಮತ್ತು ಬಿಜೆಪಿ ಮೈತ್ರಿಮಾಡಿಕೊಂಡು ಸರ್ಕಾರ ರಚನೆ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ. ಆದರೆ ಬಿಜೆಪಿ ನಾಯಕರು ಮಾತ್ರ ಸದ್ಯದ ಪರಿಸ್ಥಿತಿಯಲ್ಲಿ ನಾವು ಯಾವುದೇ ಮೈತ್ರಿಗೆ ಮುಂದಾಗುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಬಿಜೆಪಿ ನಾಯಕರ ಈ ನಡೆ ಅನೇಕ ರಾಜಕೀಯ ಲೆಕ್ಕಾಚಾರಗಳನ್ನು ಹೊಂದಿದೆ. ಶಿರೋಮಣಿ ಅಕಾಲಿಕದಳಕ್ಕೆ ಕಡಿವಾಣ ಹಾಕಬೇಕಾದರೆ, ಮರುಮೈತ್ರಿಗೆ ಅನೇಕ ಷರತ್ತುಗಳನ್ನು ಹಾಕಬೇಕೆಂದು ಬಿಜೆಪಿ ತಂತ್ರ ರೂಪಿಸಿದೆ.

ಹೀಗಾಗಿ ಬಿಜೆಪಿ ಅಕಾಲಿಕದಳದೊಂದಿದೆ ಮೈತ್ರಿ ಮಾಡಿಕೊಂಡರು, ತನ್ನ ಹಿತಾಸಕ್ತಿಗಳಿಗೆ ಪೂರಕವಾಗಿಯೇ ಮೈತ್ರಿಮಾಡಿಕೊಳ್ಳಲಿದೆ. ಇನ್ನು ಭಗವಂತ್ ಮಾನ್ ನೇತೃತ್ವದಲ್ಲಿ ಎಎಪಿ ಅಧಿಕಾರಕ್ಕೇರಿದರೆ, ಬಿಜೆಪಿ- ಅಕಾಲಿಕದಳ ‘ಮರುಮೈತ್ರಿ’ ಮಾಡಿಕೊಂಡು ಮುಂದಿನ ಲೋಕಸಭಾ ಚುನಾವಣೆಯತ್ತ ಚಿತ್ತ ಹರಿಸುವ ಯೋಜನೆಯನ್ನು ಹೊಂದಿವೆ. ಪಂಜಾಬ್‍ನಲ್ಲಿ ಸದ್ಯ ಅಕಾಲಿಕದಳ ಮತ್ತು ಬಿಎಸ್‍ಪಿ ಪಕ್ಷಗಳು ಮೈತ್ರಿಮಾಡಿಕೊಂಡು, ವಿಧಾನಸಭಾ ಚುನಾವಣೆ ಎದುರಿಸಿವೆ. ಆದರೆ ಇದು ನಿರೀಕ್ಷಿತ ಫಲಿತಾಂಶ ನೀಡುವ ಸಾಧ್ಯತೆ ಕಡಿಮೆ ಎಂದು ಅಕಾಲಿಕದಳದ ಹಿರಿಯ ನಾಯಕ ಪ್ರೇಮ ಸಿಂಗ್ ಹೇಳಿಕೊಂಡಿದ್ದಾರೆ. ಈ ಎಲ್ಲ ರಾಜಕೀಯ ಸ್ಥಿತ್ಯಂತರಗಳಿಂದ ಪಂಜಾಬ್‍ನಲ್ಲಿ ಹೊಸ ರಾಜಕೀಯ ಪರ್ವ ಶುರುವಾಗಿದೆ. 
ಇನ್ನು ಕಾಂಗ್ರೆಸ್ ಪಕ್ಷ ರಾಜ್ಯ ನಾಯಕರ ಒಳಜಗಳದಿಂದ ನೇಪತ್ಯಕ್ಕೆ ಸರಿದಿದೆ. ಚರಣ್‍ಜಿತ್ ಸಿಂಗ್ ಚೆನ್ನಿ ಮತ್ತು ನವಜೋತ್ ಸಿಂಗ್ ಸಿಧು ನಡುವಿನ ಭಿನ್ನಾಭಿಪ್ರಾಯಗಳಿಂದ ಕಾಂಗ್ರೆಸ್ ತನ್ನ ಸಂಘಟನಾತ್ಮಕ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಇನ್ನೊಂದು ಕಡೆ ಕಾಂಗ್ರೆಸ್‍ನಿಂದ ಹೊರಬಂದಿರುವ ಕ್ಯಾಪ್ಟನ್ ಅಮರಿಂದರ್ ಸಿಂಗ್ ಬಿಜೆಪಿಯೊಂದಿಗೆ ಮೈತ್ರಿಮಾಡಿಕೊಂಡು ರಾಜಕೀಯ ನೆಲೆ ಕಂಡುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
Exit mobile version