ಪಂಜಾಬ್ ಫಲಿತಾಂಶ : ಸಿದ್ದು- ಡಿಕೆಶಿಗೆ ನೇರ ಎಚ್ಚರಿಕೆ!

upelections

ಪಂಚರಾಜ್ಯಗಳ ಚುನಾಣೆಯ ಫಲಿತಾಂಶ ಪ್ರಕಟಗೊಂಡಿದೆ. ನಾಲ್ಕು ರಾಜ್ಯಗಳಲ್ಲಿ ಮತ್ತೇ ಅಧಿಕಾರ ಉಳಿಸಿಕೊಳ್ಳುವಲ್ಲಿ ಕಮಲ ಕಲಿಗಳು ಯಶಸ್ವಿಯಾಗಿದ್ದರೆ, ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಪ್ರಾದೇಶಿಕವಾಗಿ ಮತ್ತಷ್ಟು ಕುಗ್ಗಿದೆ. ಉತ್ತರಪ್ರದೇಶದಲ್ಲಿ ಪ್ರಿಯಾಂಕಾ ವಾದ್ರಾ ಮ್ಯಾಜಿಕ್ ಮಾಡಬಹುದು ಎಂಬ ಆಸೆಯೂ ಕಮರಿ ಹೋಗಿದೆ. ಒಂದು ಕಾಲದಲ್ಲಿ ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ತನ್ನ ನೆಲೆಯನ್ನೇ ಕಳೆದುಕೊಂಡು, 2-3 ಸ್ಥಾನಗಳಿಗೆ ಮಾತ್ರ ಸೀಮಿತವಾಗಿದೆ. ಆ ಸ್ಥಾನಗಳು ಕೂಡಾ ಅಭ್ಯರ್ಥಿಗಳು ತಮ್ಮ ಸ್ವಂತ ವರ್ಚಸ್ಸಿನಿಂದ ಗೆದ್ದ ಕ್ಷೇತ್ರಗಳಾಗಿವೆ.

ಅನೇಕ ದೃಷ್ಟಿಕೋನಗಳಿಂದ ನೋಡಿದರೆ, ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಂಡಿದೆ. ಇನ್ನೊಂದೆಡೆ ಪಂಜಾಬ್ ಫಲಿತಾಂಶ ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿದೆ. ತಾನೇ ಮಾಡಿಕೊಂಡ ಸ್ವಯಂಕೃತ ತಪ್ಪುಗಳಿಂದ ಕಾಂಗ್ರೆಸ್ ಪಂಜಾಬ್‍ನಲ್ಲಿ ಭಾರೀ ಹಿನ್ನಡೆ ಅನುಭವಿಸಿದೆ. ಪಂಜಾಬ್‍ನಲ್ಲಿ ಸುಮಾರು 14 ಕಾಂಗ್ರೆಸ್ ಸಚಿವರು ಸೋಲನ್ನನುಭವಿಸಿದ್ದಾರೆ.

ಮುಖ್ಯಮಂತ್ರಿಯಾಗಿದ್ದ ಚರಣ್‍ಜಿತ್ ಸಿಂಗ್ ಚೆನ್ನಿ ಕೂಡಾ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು, ಎರಡು ಕ್ಷೇತ್ರಗಳಲ್ಲಿ ಸೋಲುವ ಭೀತಿ ಎದುರಿಸುತ್ತಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಕೂಡಾ ಸೋಲುವ ಭೀತಿಯಲ್ಲಿದ್ದಾರೆ. ಪಂಜಾಬ್‍ನಲ್ಲಿ ಕಾಂಗ್ರೆಸ್‍ನ ಘಟಾನುಘಟಿ ನಾಯಕರೇ ಸೋಲನ್ನು ಅನುಭವಿಸಿದ್ದು, ರಾಜಕೀಯವಾಗಿ ಕಾಂಗ್ರೆಸ್‍ನ ಸಂಘಟನಾ ಶಕ್ತಿಯನ್ನು ಕುಂದಿಸಿದೆ.

ಇನ್ನು ಪಂಜಾಬ್‍ನಲ್ಲಿನ ಫಲಿತಾಂಶ ಪರೋಕ್ಷವಾಗಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆಯಾಗಿದೆ. ಪಂಜಾಬ್‍ನಲ್ಲಿ ಆಂತರಿಕ ಕಚ್ಚಾಟ, ಬಣ ರಾಜಕೀಯ, ವೈಯಕ್ತಿಕ ವರ್ಚಸ್ಸು ವೃದ್ದಿಸಿಕೊಳ್ಳಲು ಪ್ರಯತ್ನ, ಸ್ವಪಕ್ಷೀಯರನ್ನೆ ತುಳಿಯುವ ಕುತಂತ್ರಗಳು, ಸಂಘಟನೆಗೆ ಒತ್ತು ನೀಡದಿರುವುದು, ಹಿರಿಯ ನಾಯಕರನ್ನು ಕಡೆಗಣಿಸಿದ್ದು ಕಾಂಗ್ರೆಸ್ ಹಿನ್ನಡೆಗೆ ಪ್ರಮುಖ ಕಾರಣಗಳಾಗಿವೆ. ಸದ್ಯ ಪಂಜಾಬ್ ಪರಿಸ್ಥಿತಿಯೇ ರಾಜ್ಯ ಕಾಂಗ್ರೆಸ್‍ನಲ್ಲಿಯೂ ಇದೆ. ಸಿದ್ದು-ಡಿಕೆಶಿ ನಡುವೆ ಆಂತರಿಕ ಕಚ್ಚಾಟ ಜೋರಾಗಿದೆ. ಇಬ್ಬರು ನಾಯಕರು ವೈಯಕ್ತಿಕ ವರ್ಚಸ್ಸು ವೃದ್ದಿಸಿಕೊಳ್ಳಲು ಭಾರೀ ಪ್ರಯತ್ನಗಳನ್ನೇ ನಡೆಸಿದ್ದಾರೆ.

ಈ ರೀತಿಯ ಪ್ರಯತ್ನಗಳು ಪಕ್ಷ ಸಂಘಟನೆಗೆ ಹಾನಿಯನ್ನುಂಟು ಮಾಡಲಿವೆ. ರಾಜ್ಯ ಕಾಂಗ್ರೆಸ್‍ನಲ್ಲಿ ಪಕ್ಷದ ಅನೇಕ ಹಿರಿಯ ನಾಯಕರು ಪಕ್ಷದಿಂದ ದೂರಸರಿದಿದ್ದಾರೆ. ಎಸ್.ಆರ್.ಪಾಟೀಲ್, ಆರ್.ವಿ. ದೇಶಪಾಂಡೆ, ಸಿಎಂ ಇಬ್ರಾಹಿಂ, ಕೆ.ಎಚ್. ಮುನಿಯಪ್ಪ, ಎಚ್.ಕೆ ಪಾಟೀಲ್, ಬಿ.ಕೆ. ಕೋಳಿವಾಡ್ ಸೇರಿದಂತೆ ಅನೇಕ ಹಿರಿಯ ನಾಯಕರು ರಾಜ್ಯ ನಾಯಕತ್ವದ ವಿರುದ್ದ ಬೇಸತ್ತಿದ್ದಾರೆ. ಇದರ ಪರಿಣಾಮ ಮುಂಬರುವ ವಿಧಾನಸಭಾ ಚುನಾವಣೆಯ ಮೇಲಾಗಲಿದೆ.

ಇನ್ನು ಕರ್ನಾಟಕ ವಿಧಾನಸಭಾ ಚುನಾವಣೆ ಮುಂದಿನ ವರ್ಷ ಮೇನಲ್ಲಿ ನಡೆಯಲಿದೆ. ಹೀಗಾಗಿ ಈಗಿನಿಂದಲೇ ಆಂತರಿಕ ಕಚ್ಚಾಟಗಳಿಗೆ ಬ್ರೇಕ್ ಹಾಕಿ, ಪಕ್ಷ ಸಂಘಟನೆಯತ್ತ ಸಿದ್ದು-ಡಿಕೆಶಿ ಗಮನ ಹರಿಸಬೇಕಿದೆ. ವೈಯಕ್ತಿಕ ವರ್ಚಸ್ಸಿಗಿಂತ ಪಕ್ಷದ ವರ್ಚಸ್ಸು ವೃದ್ದಿಸಲು ಶ್ರಮವಹಿಸಬೇಕಿದೆ. ಹೀಗಾದಲ್ಲಿ ಮಾತ್ರ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪೈಪೋಟಿ ನೀಡಲು ಸಾಧ್ಯ. ಇಲ್ಲವಾದಲ್ಲಿ ಪಂಜಾಬ್‍ನಲ್ಲಾದಂತೆ ರಾಜ್ಯದಲ್ಲಿಯೂ ಕಾಂಗ್ರೆಸ್ ನೆಲಕಚ್ಚಲಿದೆ.

Exit mobile version