ದೇಶದ 95% ಜನರಿಗೆ ಪೆಟ್ರೋಲ್, ಡೀಸೆಲ್ ಅವಶ್ಯಕತೆ ಇಲ್ಲ – ಉಪೇಂದ್ರ ತಿವಾರಿ

ಲಕ್ನೋ ಅ 22 : ದೇಶದ ಶೇ.5ರಷ್ಟು ಜನರು ಮಾತ್ರ ಕಾರು ಬಳಸುತ್ತಿದ್ದು, ಶೇ.95ರಷ್ಟು ಜನರು ಪೆಟ್ರೋಲ್ ಹಾಗೂ ಡೀಸೆಲ್ ಬಳಕೆ ಮಾಡುವುದಿಲ್ಲ ಎಂದು ಉತ್ತರ ಪ್ರದೇಶ ಸಚಿವ ಉಪೇಂದ್ರ ತಿವಾರಿ ಹೇಳಿದ್ದಾರೆ. ಪೆಟ್ರೋಲ್ ಮತ್ತು ಇಂಧನ ಬೆಲೆಗಳು ಸತತ ಎರಡನೇ ದಿನ ಏರಿಕೆಯಾಗಿ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿರುವ ಹೊತ್ತಲ್ಲಿಯೇ ಸಚಿವರು ಈ ರೀತಿ ಬೇಜವಾಬ್ದಾರಿ ಹೇಳಿಕೆ ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪಶ್ಚಿಮ ಉತ್ತರ ಪ್ರದೇಶದ ಜಲೌನ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯ ಸಚಿವ ಉಪೇಂದ್ರ ತಿವಾರಿ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಕುರಿತು ಕೇಳಲಾದ ಪ್ರಶ್ನೆಗೆ ತುಸು ಗರಂ ಆಗಿದ್ದರು, ಈ ದೇಶದಲ್ಲಿ ಕೇವಲ ಶೇ.5ರಷ್ಟು ಜನರು ಮಾತ್ರ ಕಾರು ಬಳಸುತ್ತಾರೆ. ಅವರಿಗೆ ಮಾತ್ರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಸಂಬಂಧಪಟ್ಟಿರುತ್ತದೆ. ಆದರೆ ಈ ದೇಶದ ಶೇ.95ರಷ್ಟು ಜನ ಸ್ವಂತ ವಾಹನ ಬಳಸದೇ ಇರುವುದರಿಂದ ಅವರಿಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಸಂಬಂಧವೇ ಇರುವುದಿಲ್ಲ ಎಂದಿದ್ದಾರೆ.

ಅಲ್ಲದೆ, ೨೦೧೪ ರಲ್ಲಿದ್ದ ದೇಶದ ಜನರ ತಲಾ ಆದಾಯಕ್ಕೆ ಹೋಲಿಸಿದರೆ, ಮೋದಿಜಿ ಮತ್ತು ಯೋಗಿಜಿ ಸರ್ಕಾರಗಳು ರಚನೆಯಾದ ನಂತರ ತಲಾ ಆದಾಯವು ದ್ವಿಗುಣಗೊಂಡಿದೆ” ಎಂದು ಹೇಳಿದ್ದಾರೆ. ವಾಸ್ತವದಲ್ಲಿ ಇಂಧನ ದರ ಅಷ್ಟೇನು ಏರಿಕೆಯಾಗಿಲ್ಲ ಎಂದು ತಿಳಿಯುತ್ತದೆ ಎಂಬುವುದಾಗಿ ತಿವಾರಿ ಪ್ರತಿಪಾದಿಸಿದ್ದಾರೆ. ಹಾಗೆಯೇ ಕಳೆದ ಏಳು ವರ್ಷಗಳಲ್ಲಿ ಪೆಟ್ರೋಲ್ ದರ ಗರಿಷ್ಠ ಪಟ್ಟ ತಲುಪಿದೆ ಎಂಬ ಬಾಲಿಶ ಹೇಳಿಕೆಯನ್ನು ವಿಪಕ್ಷಗಳು ಜನರ ಬಳಿ ಹಬ್ಬಿಸಬಾರದು ಎಂದು ತಿಳಿಸಿದ್ದಾರೆ

Exit mobile version