Bengaluru: ಬೆಂಗಳೂರಿನಲ್ಲಿ (Bengaluru) ರಾತ್ರಿ ಸಮಯದಲ್ಲಿ ಓಡಾಡುವ ಹೆಣ್ಣುಮಕ್ಕಳ ರಕ್ಷಣೆಗಾಗಿ ಪೊಲೀಸ್ ಇಲಾಖೆ ಸಖತ್ ಪ್ಲಾನ್ ಮಾಡಿದ್ದು, ಮಧ್ಯರಾತ್ರಿ ಬಾಲ ಬಿಚ್ಚೋ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಲು ಯುಪಿಸ್ ನಂಬರ್ (UPS Number) ನೀಡಲಾಗಿದೆ.
ಮುಖ್ಯಾಂಶಗಳು:
- ರಾತ್ರಿವೇಳೆ ಬಾಲ ಬಿಚ್ಚೋ ಆಟೋ ಚಾಲಕರೇ ಎಚ್ಚರ!
- ಹೆಣ್ಣುಮಕ್ಕಳ ರಕ್ಷಣೆಗೆ ಪೊಲೀಸ್ ಇಲಾಖೆ ಮಾಸ್ಟರ್ ಪ್ಲಾನ್!
- ಯುಪಿಎಸ್ ಅಸ್ತ್ರ ಪ್ರಯೋಗಿಸಿದ ಪೊಲೀಸರು!
ಹೆಣ್ಣು ಮಕ್ಕಳು ರಾತ್ರಿಯ ಹೊತ್ತು ಮೆಜೆಸ್ಟಿಕ್ (Majestic) ಸುತ್ತ ಮುತ್ತ ಆಟೋದಲ್ಲಿ ಓಡಾಡೋಕೆ ಭಯ ಪಡುತ್ತಿದ್ದು, ಮಧ್ಯರಾತ್ರಿಯಲ್ಲಿ ಆಟೋದಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಕೆಲ ಆಟೋ ಚಾಲಕರು ಲೈಂಗಿಕ ಕಿರುಕುಳ, ಒಡವೆ ಕಸಿಯೋದು ಸೇರಿದಂತೆ ಹಲವು ರೀತಿಯಲ್ಲಿ ತೊಂದರೆ ಕೊಡುತ್ತಿದ್ದರು. ಆದರೆ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಡಿಪಾರ್ಟ್ಮೆಂಟ್ ಕೂಡ ಹೆಣಗಾಡಿತ್ತು. ಯಾವ ಆಟೋ ಚಾಲಕ (Auto Drivers) ತೊಂದರೆ ಕೊಟ್ಟ ಅನ್ನೋದನ್ನ ಪತ್ತೆ ಹಚ್ಚೋದೆ ಪೊಲೀಸರಿಗೆ ತಲೆನೋವು ಆಗಿತ್ತು.
ಮೆಜೆಸ್ಟಿಕ್ ಸುತ್ತಮುತ್ತ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ (KSRTC Bus Stand), ಬಿಎಂಟಿಸಿ ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣ (Metro Station), ರೈಲ್ವೇ ಸ್ಟೇಷನ್ ಮತ್ತು ಆಟೋ ಸ್ಟ್ಯಾಂಡ್ ನಲ್ಲಿ ಹೈ ಅಲರ್ಟ್ ಮಾಡಲಾಗಿದೆ. ಆಟೋ ನಂಬರನ್ನ ಪ್ರಯಾಣಿಕರು ಕರೆಕ್ಟಾಗಿ ನೆನೆಪಿಟ್ಟುಕೊಳ್ಳುವಲ್ಲಿ ಎಡವುತ್ತಿದ್ದರು. ಕತ್ತಲಲ್ಲಿ ತೊಂದ್ರೆ ಕೊಟ್ಟ ಆಟೋ ಚಾಲಕರು ಎಸ್ಕೇಪ್ ಆಗುತ್ತಿದ್ರು. ಇದೀಗ ಅವುಗಳಿಗೆ ಬ್ರೇಕ್ (Break) ಹಾಕಲು ಪೊಲೀಸರು ಯುಪಿಎಸ್ ಅಸ್ತ್ರ ಪ್ರಯೋಗಿಸಿದ್ದಾರೆ. ಒಂದು ವೇಳೆ ಮಹಿಳೆಯರಿಗೆ ತೊಂದರೆ ಕೊಟ್ರೆ ಹೆಡೆಮುರಿಕಟ್ಟುವುದಾಗಿ ಎಚ್ಚರಿಸಿದ್ದಾರೆ.
ಈ ಯುಪಿಎಸ್ ಯಾವರೀತಿ ಕಾರ್ಯನಿರ್ವಹಿಸುತ್ತೆ?
ಕೆಂಪೇಗೌಡ ಬಸ್ ನಿಲ್ದಾಣದ (Kempegowda Bus Stand) ಸುತ್ತ ಮುತ್ತಲ ಆಟೋ ಡ್ರೈವರ್ ಗಳಿಗೆ ಯುಪಿಎಸ್ ನಂಬರ್ ನೀಡಲಾಗಿದ್ದು, ಸ್ಥಳೀಯ ಠಾಣೆಯಲ್ಲಿ ಆಟೋ ಚಾಲಕರ ಸಂಪೂರ್ಣ ಮಾಹಿತಿ ಪಡೆದುಕೊಂಡು ನಂತರ ಅಂತಹ ಆಟೋ ಚಾಲಕರಿಗೆ ಯುಪಿಎಸ್ ನಂಬರ್ ಕೊಡಲಾಗಿದೆ. ಆ ಯುಪಿಎಸ್ ನಂಬರನ್ನ ಪ್ರಯಾಣಿಕರಿಗೆ ಕಾಣುವಂತೆ ಚಾಲಕರು ಹಾಕಬೇಕು. ಆಟೋದ ಮುಂಭಾಗ ಹಾಗೂ ಹಿಂಭಾಗದಲ್ಲಿ ಹಾಕಬೇಕು. ಯುಪಿಎಸ್ ನಂಬರ್ 2-3 ಡಿಜಿಟ್ ಇರೋದರಿಂದ ನೆನೆಪಿಟ್ಟುಕೊಳ್ಳೋದು ಸುಲಭವಾಗಿದೆ.
ಮಹಿಳೆಯರು ಗಮನಿಸಬೇಕಾದ ಅಂಶ;
ಮಹಿಳೆಯರು ರಾತ್ರಿ ಹೊತ್ತು ಮೆಜೆಸ್ಟಿಕ್ ನಲ್ಲಿ ಇಂತಹ ಯುಪಿಎಸ್ ನಂಬರ್ ಇರೋ ಆಟೋ ಹತ್ತುವುದು ಸುರಕ್ಷಿತ. ಪ್ರಯಾಣದ ವೇಳೆ ತೊಂದರೆಯಾದರೆ ಪೊಲೀಸರಿಗೆ ಈ ಯುಪಿಎಸ್ ನಂಬರ್ ಹೇಳಿದರೆ ಸಾಕು. ಕ್ಷಣಮಾತ್ರದಲ್ಲಿಯೇ ಆ ಆಟೋ ಚಾಲಕನ ಸಂಪೂರ್ಣ ಜಾತಕ ತೆರೆದುಕೊಳ್ಳುವುದು ಮಾತ್ರವಲ್ಲದೆ, ಕಿಡಿಗೇಡಿತನ ಪ್ರದರ್ಶನ ಮಾಡಿದ ಆಟೋ ಚಾಲಕರನ್ನ ಪತ್ತೆ ಹಚ್ಚೋದು ಪೊಲೀಸರಿಗೆ ಸುಲಭವಾಗಲಿದೆ.
ಭವ್ಯಶ್ರೀ ಆರ್ ಜೆ