ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ: 10 ಮಂದಿ ಸಾವು

ವಾಷಿಂಗ್ಟನ್, ಮಾ. 23: ಅಮೆರಿಕದ ಕೊಲರಾಡೋ ರಾಜ್ಯದದಲ್ಲಿ ಶೂಟೌಟ್ ನಡೆದಿದ್ದು ಒಬ್ಬ ಪೊಲೀಸ್ ಅಧಿಕಾರಿ ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಕೊಲರಾಡೋ ರಾಜ್ಯದ ರಾಜಧಾನಿ ಡೆನ್ವರ್ ನಗರ ಸಮೀಪದ ಬೌಲ್ಡರ್ ಕೌಂಟಿಯ ಸೂಪರ್ ಮಾರ್ಕೆಟ್​ನಲ್ಲಿ ಈ ದುರ್ಘಟನೆ ನಡೆದಿದೆ. ಪೊಲೀಸರು ಒಬ್ಬ ಶಂಕಿತ ಆರೋಪಿಯನ್ನು ಬಂಧಿಸಿರುವುದು ತಿಳಿದುಬಂದಿದೆ. ಈ ಮೂಲಕ ಅಮೆರಿಕಾದಲ್ಲಿ ಹತ್ಯಾಕಾಂಡ ಮುಂದುವರಿದಂತಾಗಿದೆ.

ಘಟನೆ ನಡೆದ ಸ್ಥಳವು ರಾಜಧಾನಿ ಡೆನ್ವರ್ ನಗರದಿಂದ 24 ಕಿಮೀ ದೂರದಲ್ಲಿದೆ. ಘಟನೆ ನಡೆದ ಕೆಲವೇ ಹೊತ್ತಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಈ ಕಾರ್ಯಾಚರಣೆಯಲ್ಲಿ ಶಂಕಿತ ಆರೋಪಿ ಗಾಯಗೊಂಡು ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ. ಆತನ ವಿಚಾರಣೆ ನಡೆಯುತ್ತಿದೆ ಎನ್ನಲಾಗಿದೆ.

ಘಟನೆ ನಡೆಯುವ ಕೆಲ ಹೊತ್ತಿನ ಮೊದಲು ಬೌಲ್ಡರ್ ಕೌಂಟಿ ಪೊಲೀಸರು ಒಬ್ಬ ಅಪಾಯಕಾರಿ ಗನ್ ಧಾರಿ ವ್ಯಕ್ತಿಯ ಬಗ್ಗೆ ಸಾರ್ವಜನಿಕರನ್ನ ಎಚ್ಚರಿಸಿದ್ದರು. ಘಟನಾ ಸ್ಥಳದಿಂದ ಐದು ಕಿಮೀ ದೂರದ ಸ್ಥಳದಲ್ಲಿ ಶಸ್ತ್ರಧಾರಿ ವ್ಯಕ್ತಿ ಚಲಿಸುತ್ತಿದ್ದು, ಜನರು ಹುಷಾರಾಗಿ ಇರಬೇಕೆಂದು ಎಚ್ಚರಿಸಿದ್ದರು. ಬಳಿಕ ಆ ಎಚ್ಚರಿಕೆಯನ್ನು ಹಿಂಪಡೆದು ಹೋಗಿದ್ದರು. ಅದಾದ ಬಳಿಕ ಸೂಪರ್ ಮಾರ್ಕೆಟ್​ನಲ್ಲಿ ಶೂಟೌಟ್ ನಡೆದಿದೆ. ಅದೇ ಗನ್​ಧಾರಿ ವ್ಯಕ್ತಿಯಿಂದಲೇ ಈ ಕೃತ್ಯ ನಡೆದಿದೆಯಾ ಎಂಬುದು ತಿಳಿದುಬಂದಿಲ್ಲ.

ಮಾರ್ಚ್ 16ರಂದು ಅಟ್ಲಾಂಟಾ ರಾಜ್ಯದ ಜಾರ್ಜಿಯಾ ನಗರದ ಮೂರು ಬ್ಯೂಟಿ ಪಾರ್ಲರ್​ಗಳ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದರು. ಆ ಘಟನೆಯಲ್ಲಿ ಎಂಟು ಮಂದಿ ಬಲಿಯಾಗಿದ್ದರು.

Exit mobile version