ಜನಾಂಗೀಯ ಟೀಕೆ ಮಾಡಿದ ದಂಪತಿಗಳನ್ನು ಕಾರಿನಿಂದ ಇಳಿಸಿದ ಚಾಲಕ!‍

ಯುಎಸ್‌(US) : ಮಹಿಳೆಯೊಬ್ಬಳು ಜನಾಂಗೀಯ(Racist) ಹೇಳಿಕೆಗಳನ್ನು ಮಾಡಿದ ಬೆನ್ನಲ್ಲೇ ಕ್ಯಾಬ್ ಚಾಲಕನೊಬ್ಬ ಮಹಿಳೆ ಮತ್ತು ಆಕೆಯ ಪತಿ ಇಬ್ಬರನ್ನು ತನ್ನ ಕಾರಿನಿಂದ ಇಳಿಸಿರುವ ಘಟನೆಯ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

ವೀಡಿಯೋ ಹಿಂದಿರುವ ವ್ಯಕ್ತಿ ಕಾರು ಚಾಲಕ ಜೇಮ್ಸ್ ಬೋಡ್(James Bode). ಪೆನ್ಸಿಲ್ವೇನಿಯಾದ(Pennsylvania) ಫಾಸಿಲ್ಸ್ ಲಾಸ್ಟ್ ಸ್ಟ್ಯಾಂಡ್ ಬಾರ್ ಹೊರಗೆ ಈ ಘಟನೆ ನಡೆದಿದೆ. ಘಟನೆಯಲ್ಲಿ ಆರೋಪಿ ಸ್ಥಾನದಲ್ಲಿರುವ ದಂಪತಿಗಳು ಪ್ರಮುಖ ಬಾರ್‌ನ ಮಾಲೀಕರು.
ಲಿಫ್ಟ್ ಡ್ರೈವರ್ ಆಗಿರುವ ಬೋಡೆ ತನ್ನ ಪ್ರಯಾಣಿಕರನ್ನು ಸ್ವಾಗತಿಸುವುದರೊಂದಿಗೆ ವಿಡಿಯೋ ಪ್ರಾರಂಭವಾದರೆ, ಸ್ವಲ್ಪ ಸಮಯದ ನಂತರ, ಜಾಕಿ ಎಂಬ ಮಹಿಳೆ ಕ್ಯಾಬ್‌ಗೆ ಪ್ರವೇಶಿಸುತ್ತಾಳೆ. ಕಾರಿನೊಳಗೆ ಕುಳಿತುಕೊಳ್ಳುತ್ತಿದ್ದಂತೆ “ಅಯ್ಯೋ, ನೀವು ಬಿಳಿ ಹುಡುಗನಂತೆ ಇದ್ದೀರಿ” ಎಂದು ಮಹಿಳೆ ಹೇಳಿದ್ದಾಳೆ.

ಮಹಿಳೆಯ ಈ ಹೇಳಿಕೆಯಿಂದ ಅಚ್ಚರಿಗೊಂಡ ಚಾಲಕ ಬೋಡೆ, ಅದೇನು ಹೇಳಿದ್ರಿ?? ಯಾಕೆ ಆ ರೀತಿ ಹೇಳ್ತಿದ್ದೀರಾ? ಬೋಡೆ ಅಸಮಾಧಾನಗೊಂಡು ಪ್ರಶ್ನಿಸಿದ್ದಕ್ಕೆ ಮಹಿಳೆ ನಗುತಾ ಬೋಡೆ ಭುಜವನ್ನು ತಟ್ಟುವ ಮೂಲಕ ನಾನು ತಮಾಷೆ ಮಾಡಿದೆ ಎಂದು ಹೇಳಿ ವಿಷಯವನ್ನು ಅಲ್ಲಿಗೆ ನಿಲ್ಲಿಸಲು ಪ್ರಯತ್ನಿಸಿದ್ದಾಳೆ. ಆದ್ರೆ, ಬೋಡೆ ಇದಕ್ಕೆ ವಿರೋಧ ವ್ಯಕ್ತಿಪಡಿಸಿದ್ದು, ಕೂಡಲೇ ಮಹಿಳೆಯನ್ನು ಮತ್ತು ಆಕೆಯ ಪತಿಯನ್ನು ಕಾರಿನಿಂದ ಕೆಳಗೆ ಇಳಿಸಿದ್ದಾರೆ.

ಈ ಸೀಟ್ನಲ್ಲಿ ಯಾರಾದರೂ ಬಿಳಿಯಾಗಿದ್ದವರು ಕುಳಿತರೆ ವ್ಯತ್ಯಾಸವೇನು? ಎಂದು ಕೋಪದಿಂದ ಪ್ರಶ್ನಿಸಿದ್ದಾರೆ. ತದನಂತರ ಆಕೆಯ ಪತಿ ಬೋಡೆಯನ್ನು ನಿಂದಿಸಿ ಕೆಲ ಸಮಯ ಮಾತಿನ ಚಕಮಕಿ ನಡೆಸಿದ್ದಾರೆ. ಇದಾದ ಬಳಿಕ ಬೋಡೆ ತಮ್ಮ ಕಾರಿನಲ್ಲಿ ನಡೆದ ಘಟನೆಯ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪಲೋಡ್ ಮಾಡಿ ಬೇಸರವನ್ನು ಹೊರಹಾಕಿದ್ದು, ಈ ಕುರಿತು ಪೊಲೀಸ್ ಕಂಪ್ಲೇಟ್ ಕೊಟ್ಟಿದ್ದಾರೆ.

ಆದ್ರೆ, ತಮಗೆ ನ್ಯಾಯ ಸಿಗುತ್ತದೆಯೋ ಅಥವಾ ಪೊಲೀಸರು ಇದನ್ನು ಹೇಗೆ ಪರಿಗಣಿಸುತ್ತಾರೋ ನನಗೆ ತಿಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ವೀಡಿಯೋ ವೈರಲ್ ಆದ ಹಿನ್ನಲೆ ಸಾಮಾಜಿಕ ಜಾಲತಾಣದಲ್ಲಿ ಇದ್ದ ತಮ್ಮ ಬಾರ್ ಪೇಜ್ ಮತ್ತು ವೆಬ್‌ಸೈಟ್ ಅನ್ನು ದಂಪತಿಗಳು ನಿಷ್ಕ್ರಿಯಗೊಳಿಸಿದ್ದಾರೆ ಎನ್ನಲಾಗಿದೆ. ಬೋಡೆ ಅವರ ನಿಲುವನ್ನು ನೆಟ್ಟಿಗರು ಶ್ಲಾಘಿಸಿದ್ದು, ಅವರ ಧೈರ್ಯ, ಮಾನವೀಯತೆ, ವೃತ್ತಿ ನಿಲುವನ್ನು ಮೆಚ್ಚಿಕೊಂಡಿದ್ದಾರೆ.

Exit mobile version