47 ಭಾಷೆಗಳಲ್ಲಿ ಮಾತನಾಡುವ ದೇಸಿ ರೋಬೋಟ್ ಸಿದ್ಧಪಡಿಸಿದ ಉತ್ತರ ಪ್ರದೇಶದ ಶಿಕ್ಷಕ: ಎಲ್ಲೆಡೆ ಶ್ಲಾಘನೆ

ನವದೆಹಲಿ, ಮಾ. 13: ಉತ್ತರ ಪ್ರದೇಶದ ಶಿಕ್ಷಕರೊಬ್ಬರು ಸ್ವದೇಶಿ ರೋಬೋಟ್ ಅನ್ನು ಅಭಿವೃದ್ಧಿಪಡಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದರ ವಿಶೇಷತೆ ಏನು ಅಂದರೆ 9 ಸ್ಥಳೀಯ ಭಾಷೆಗಳು ಮತ್ತು 38 ವಿದೇಶಿ ಭಾಷೆಗಳು ಸೇರಿ 47 ಭಾಷೆಗಳಲ್ಲಿ ಮಾತನಾಡುತ್ತದೆ. ಅಲ್ಲದೆ, ಬಾಲಿವುಡ್‌ನ ಯಶಸ್ವಿ ಚಲನಚಿತ್ರ ‘ರೋಬೋಟ್’ನಿಂದ ಪ್ರೇರಿತರಾಗಿದ್ದಾಗಿಯೂ ಶಿಕ್ಷಕರು ಹೇಳಿದ್ದಾರೆ.

ಉತ್ತರ ಪ್ರದೇಶದ ಜೌನ್ಪುರ ಜಿಲ್ಲೆಯ ರಾಜ್‌ಮಲ್ಪುರ ಗ್ರಾಮದ ನಿವಾಸಿ ಮತ್ತು ಐಐಟಿ ಬಾಂಬೆಯ ಕೇಂದ್ರ ವಿಜ್ಞಾನ ಶಾಲೆಯಲ್ಲಿ ಕಂಪ್ಯೂಟರ್ ವಿಜ್ಞಾನ ಶಿಕ್ಷಕರಾದ ದಿನೇಶ್ ಪಟೇಲ್, 9 ಸ್ಥಳೀಯ ಭಾಷೆಗಳು ಮತ್ತು 38 ವಿದೇಶಿ ಭಾಷೆಗಳನ್ನು ಮಾತನಾಡುವ ‘ಶಾಲು’ ಎಂಬ ರೋಬೋಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಬಾಲಿವುಡ್ ಚಲನಚಿತ್ರ ‘ರೋಬೋಟ್’ ನಿಂದ ಪ್ರೇರಿತರಾದ ಪಟೇಲ್ ಅವರು ‘ಶಾಲು’ ಅನ್ನು ಅಭಿವೃದ್ಧಿಪಡಿಸಿದ್ದು, ಹಾಂಗ್ ಕಾಂಗ್‌ನ ಹ್ಯಾನ್ಸನ್ ರೊಬೊಟಿಕ್ಸ್ ಅಭಿವೃದ್ಧಿಪಡಿಸಿದ ‘ಸೋಫಿಯಾ’ ಎಂಬ ರೋಬೋಟ್ ಅನ್ನು ಇದು ಹೋಲುತ್ತದೆ.

“ಪ್ಲಾಸ್ಟಿಕ್, ರಟ್ಟಿನ, ಮರ, ಅಲ್ಯೂಮಿನಿಯಂ ಮುಂತಾದ ತ್ಯಾಜ್ಯ ವಸ್ತುಗಳನ್ನು ಬಳಸಿ ‘ಶಾಲು’ ರೋಬೋಟ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದಕ್ಕೆ ಮೂರು ವರ್ಷಗಳು ತಗುಲಿದ್ದು, ಸುಮಾರು 50,000 ರೂ. ಖರ್ಚಾಗಿದೆ ಎಂದೂ ಪಟೇಲ್‌ ತಿಳಿಸಿದ್ದಾರೆ.

ಇದು ಒಂದು ಪ್ರೋಟೋಟೈಪ್ ಅಥವಾ ಮೂಲಮಾದರಿಯಾಗಿದ್ದು, ‘ಶಾಲು’ ಯಾರನ್ನಾದರೂ ಗುರುತಿಸಬಹುದು, ಕಂಠಪಾಠ ಮಾಡಬಹುದು, ಸಾಮಾನ್ಯ ಜ್ಞಾನ, ಗಣಿತ ಇತ್ಯಾದಿ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಬಹುದು. ಅಲ್ಲದೆ, ಶಾಲು ಜನರನ್ನು ಸ್ವಾಗತಿಸಬಹುದು, ಭಾವನೆಗಳನ್ನು ಪ್ರದರ್ಶಿಸಬಹುದು, ಪತ್ರಿಕೆ ಓದಬಹುದು, ಪಾಕವಿಧಾನಗಳನ್ನು ಪಠಿಸಬಹುದು ಮತ್ತು ಇತರ ಅನೇಕ ಚಟುವಟಿಕೆಗಳನ್ನು ಮಾಡಬಹುದು. ಇದನ್ನು ಶಾಲೆಗಳಲ್ಲಿ ಶಿಕ್ಷಕಿಯಾಗಿ ಮತ್ತು ಕಚೇರಿಗಳಲ್ಲಿ ಸ್ವಾಗತಕಾರರಾಗಿಯೂ ಬಳಸಬಹುದು” ಎಂದು ಪಟೇಲ್ ತಿಳಿಸಿದ್ದಾರೆ.

ಸದ್ಯ, ಪ್ಲಾಸ್ಟರ್ ಆಫ್ ಪ್ಯಾರಿಸ್ ಅನ್ನು ಬಳಸಿ ರೋಬೋಟ್ ಅಭಿವೃದ್ಧಿಪಡಿಸಲಾಗಿದೆ. ಆದರೆ ಮಾಸ್ಕ್ ಸಹಾಯದಿಂದ ರೋಬೋಟ್ ಅನ್ನು ಸುಂದರಗೊಳಿಸಬಹುದು ಎಂದು ಪಟೇಲ್ ಹೇಳಿದರು. ಐಐಟಿ ಬಾಂಬೆಯ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಸುಪ್ರತಿಕ್ ಚಕ್ರವರ್ತಿ ರೋಬೋಟ್ ಅನ್ನು ಶ್ಲಾಘಿಸಿದ್ದಾರೆ.

Exit mobile version