ಸುಪ್ರಿಂ ಕೋರ್ಟ್(Supremecourt) ಕೋವಿಡ್ ವೈರಸ್ ಅಂಗವಾಗಿ ಯಾವುದೇ ವ್ಯಕ್ತಿಯನ್ನು ಯಾವುದೇ ರೀತಿಯ ವ್ಯಾಕ್ಸಿನೇಷನ್ ತೆಗೆದುಕೊಳ್ಳಲು ಒತ್ತಾಯಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ಆದ್ರೆ ಸಮುದಾಯದ ಹಿತಾಸಕ್ತಿಗಾಗಿ ಆಯಾ ಸರ್ಕಾರವು ಅಲ್ಲಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸಬಹುದು ಎಂದು ಸೂಚಿಸಿದೆ. ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಬಿ.ಆರ್ ಗವಾಯಿ ಅವರ ಪೀಠವು ಕಡ್ಡಾಯ ಕೋವಿಡ್ -19 ಲಸಿಕೆ ಆದೇಶಗಳನ್ನು ಅಸಂವಿಧಾನಿಕ ಎಂದು ಪ್ರಶ್ನಿಸುವ ಮನವಿಯ ಮೇಲೆ ತೀರ್ಪು ನೀಡಿದೆ. ದೇಹದ ಸ್ವಾಯತ್ತತೆಯನ್ನು ಪರಿಗಣಿಸಿ, ದೈಹಿಕ ಸಮಗ್ರತೆಯನ್ನು ಆರ್ಟಿಕಲ್ 21ರ ಅಡಿಯಲ್ಲಿ ರಕ್ಷಿಸಲಾಗಿದೆ. ಲಸಿಕೆ ಹಾಕಿಸಿಕೊಳ್ಳಲು ಯಾರನ್ನೂ ಒತ್ತಾಯಿಸುವಂತಿಲ್ಲ ಎಂದು ಹೇಳಿದೆ.
ಸಾರ್ವಜನಿಕ ಸ್ಥಳಗಳಿಗೆ ಲಸಿಕೆ ಹಾಕದ ಜನರ ಪ್ರವೇಶವನ್ನು ನಿರ್ಬಂಧಿಸಲು ಕೆಲವು ರಾಜ್ಯ ಸರ್ಕಾರಗಳು ವಿಧಿಸಿರುವ ಷರತ್ತು ಅನಿಯಂತ್ರಿತವಾಗಿದೆ ಮತ್ತು ಕೋವಿಡ್ ನಿಯಂತ್ರಿತ ಪ್ರದೇಶದಲ್ಲಿ ಇಂಥ ಹೇರಿಕೆ ನಿಲ್ಲಬೇಕು ಎಂದು ಹೇಳಿದೆ. ಕೋವಿಡ್ ಸಂಖ್ಯೆಗಳು ಕಡಿಮೆ ಇರುವವರೆಗೆ, ಸಾರ್ವಜನಿಕ ಪ್ರದೇಶಗಳಿಗೆ ಪ್ರವೇಶಿಸಲು ವ್ಯಕ್ತಿಗಳ ಮೇಲೆ ಯಾವುದೇ ನಿರ್ಬಂಧವನ್ನು ಹಾಕಬಾರದು ಮತ್ತು ಅಂತಹ ನಿರ್ಬಂಧಗಳು ಜಾರಿಯಲ್ಲಿದ್ದರೆ ಅದನ್ನು ಶೀಘ್ರವೇ ಹಿಂಪಡೆಯಬೇಕು ಎಂದು ಪೀಠವು ತೀರ್ಪು ನೀಡಿದೆ.

ಕೇಂದ್ರದ ಪ್ರಸ್ತುತ ಕೋವಿಡ್ -19 ಲಸಿಕೆ ನೀತಿಯು ಸ್ಪಷ್ಟವಾಗಿ ಅನಿಯಂತ್ರಿತ ಮತ್ತು ಅಸಮಂಜಸವಾಗಿದೆ ಎಂದು ಹೇಳಲಾಗುವುದಿಲ್ಲ ಎಂದು ನ್ಯಾಯಾಲಯವು ತಿಳಿಸಿದೆ. “ನಾವು ರಿಟ್ ಅರ್ಜಿಯ ನಿರ್ವಹಣೆಗೆ ಯಾವುದೇ ಸವಾಲನ್ನು ಸ್ವೀಕರಿಸಲು ಒಲವು ಹೊಂದಿಲ್ಲ. ವೈಯಕ್ತಿಕ ಸ್ವಾಯತ್ತತೆ ಮತ್ತು ದೈಹಿಕ ಸಮಗ್ರತೆಯ ಉಲ್ಲಂಘನೆಗೆ ಸಂಬಂಧಿಸಿದಂತೆ ಪ್ರಶ್ನಾರ್ಹ ನೀತಿಯನ್ನು ಪರಿಶೀಲಿಸಲು ನ್ಯಾಯಾಲಯಕ್ಕೆ ಅಧಿಕಾರವಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.