ನವದೆಹಲಿ ಅ 21 : ಜಗತ್ತಿನಲ್ಲಿಯೇ 100 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಿರುವ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾದೆ. ಜಗತ್ತಿನ ಅತಿ ದೊಡ್ಡ ಲಸಿಕೀಕರಣ ಕಾರ್ಯಕ್ರಮವಾಗಿರುವ ಭಾರತದ ಈ ಸಾಧನೆಯನ್ನು ಸಂಭ್ರಮಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವೀಯಾ, ಈ ಸಾಧನೆ ಮಾಡಿರುವುದಕ್ಕೆ ದೇಶವನ್ನು ಅಭಿನಂದಿಸಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ನಾಯಕತ್ವದ ಫಲವಾಗಿದೆ ಎಂದಿದ್ದಾರೆ.
ಮಾಹಿತಿ ಪ್ರಕಾರ, ಬುಧವಾರ ದೇಶದ ಒಟ್ಟಾರೆ ಲಸಿಕೆ ಸಂಖ್ಯೆ 99.7 ಕೋಟಿ ದಾಟಿತ್ತು. ದೇಶದ ಶೇ 75ರಷ್ಟು ವಯಸ್ಕರು ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದರೆ, ಶೇ 31ರಷ್ಟು ಮಂದಿ ಎರಡೂ ಡೋಸ್ ಪಡೆದುಕೊಂಡಿದ್ದಾರೆ.
ದೇಶದ ಒಟ್ಟಾರೆ ಲಸಿಕೆ ನೀಡಿಕೆ ಸಂಖ್ಯೆ ಒಂದು ಬಿಲಿಯನ್ ಕ್ರಮಿಸಿದ ಬಳಿಕ ಕೆಂಪುಕೋಟೆಯಲ್ಲಿ ನಡೆಯಲಿರುವ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಗಾಯಕ ಕೈಲಾಶ್ ಖೇರ್ ಹಾಡಿರುವ ಹಾಡೊಂದನ್ನು ಬಿಡುಗಡೆ ಮಾಡಿ, ಜತೆಗೆ ಧ್ವನಿ-ದೃಶ್ಯ ಚಿತ್ರವೊಂದನ್ನು ಸಹ ಬಿಡುಗಡೆಗೊಳಿಸುವುದಾಗಿ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಹೇಳಿದ್ದಾರೆ. ಸುಮಾರು 1,400 ಕೆಜಿ ತೂಕವಿರುವ ವಿಶ್ವದ ಅತಿ ದೊಡ್ಡ ರಾಷ್ಟ್ರ ಧ್ವಜವನ್ನು ಕೂಡ ಕೆಂಪುಕೋಟೆಯಲ್ಲಿ ಪ್ರದರ್ಶಿಸುವ ನಿರೀಕ್ಷೆಯಿದೆ.
ಈ ಸಾಧನೆಯ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ರೈಲುಗಳು, ವಿಮಾನಗಳು ಮತ್ತು ಹಡಗುಗಳಲ್ಲಿ ಪ್ರಕಟಣೆಗಳನ್ನು ಕೂಡ ಹೊರಡಿಸಲು ಸರ್ಕಾರ ಯೋಜಿಸಿದೆ. ಶೇ 100ರಷ್ಟು ಲಸಿಕೀಕರಣ ಸಾಧಿಸಿರುವ ಗ್ರಾಮಗಳಲ್ಲಿ 100 ಕೋಟಿ ಡೋಸ್ ಲಸಿಕೆ ನೀಡಿರುವ ಸಾಧನೆಯ ಪೋಸ್ಟರ್ ಹಾಗೂ ಬ್ಯಾನರ್ಗಳನ್ನು ಹಾಕಬೇಕು. ಅದರಲ್ಲಿ ಈ ಸಾಧನೆಗೆ ಕಾರಣರಾದ ಆರೋಗ್ಯ ಕಾರ್ಯಕರ್ತರನ್ನು ಅಭಿನಂದಿಸಬೇಕು ಎಂದು ಹೇಳಿದೆ.
ಮೊದಲಿಗೆ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವುದರೊಂದಿಗೆ ಜನವರಿ 16 ರಿಂದ ದೇಶಾದ್ಯಂತ ಲಸಿಕೆ ಅಭಿಯಾನ ಆರಂಭವಾಗಿತ್ತು. ಫೆಬ್ರವರಿ 2 ರಿಂದ ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ, ಮಾರ್ಚ್ 1 ರಿಂದ 60 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 45 ವರ್ಷಕ್ಕೂ ಮೇಲ್ಪಟ್ಟ ದುರ್ಬಲ ವರ್ಗದವರಿಗೆ ಲಸಿಕೆ ನೀಡಿಕೆಯನ್ನು ಆರಂಭಿಸಲಾಗಿತ್ತು. ಏಪ್ರಿಲ್ 1 ರಿಂದ 45 ವರ್ಷದೊಳಗಿನ ಎಲ್ಲಾ ಜನರಿಗೂ ದೇಶಾದ್ಯಂತ ಲಸಿಕೆ ನೀಡಿಕೆ ಪ್ರಾರಂಭವಾಗಿತ್ತು. ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಜನರಿಗೂ ಲಸಿಕೆ ನೀಡುವಿಕೆಯನ್ನು ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು.
ದೇಶದಲ್ಲಿ 2-18 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲು ಅನುಮೋದನೆ ನೀಡಲಾಗಿದೆ. ಇದು ಶೀಘ್ರದಲ್ಲಿಯೇ ಜಾರಿಗೆ ಬರುವ ಸಾಧ್ಯತೆ ಇದೆ. 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಝೈಡಸ್ ಕ್ಯಾಡಿಲಾ ಲಸಿಕೆ ನೀಡಲು ಕೂಡ ಅನುಮೋದನೆ ಕೊಡಲಾಗಿದೆ. ಇವು ಜಾರಿಯಾದರೆ ಮತ್ತಷ್ಟು ಲಸಿಕೆ ಸಾಧನೆ ಸಾಧ್ಯವಾಗಲಿದೆ.
ಕೋವಿಡ್ 19 ವಿರುದ್ಧದ ಲಸಿಕೆ ಅಭಿಯಾನ ಆರಂಭಿಸಿ ಒಂಬತ್ತು ತಿಂಗಳ ಬಳಿಕ ಭಾರತ ಹೊಸ ಮೈಲುಗಲ್ಲು ಸಾಧಿಸಿದೆ.