ವಿನಯ್ ಕುಲಕರ್ಣಿಗೆ ಷರತ್ತು ಬದ್ಧ ಜಾಮೀನು

ಧಾರವಾಡ, ಆ. 11: ಯೋಗೀಶ್ ಗೌಡ ಹತ್ಯೆ ಹಿನ್ನಲೆಯಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಷರತ್ತು ಬದ್ದ ಜಾಮೀನು ನೀಡಿದೆ.

ಧಾರವಾಡ ಜಿ.ಪಂ. ಸದಸ್ಯ ಹಾಗೂ ಸ್ಥಳೀಯ ಬಿಜೆಪಿ ನಾಯಕರಾಗಿದ್ದ ಯೋಗೇಶ್ ಗೌಡ ಅವರನ್ನು 2016, ಜೂನ್ 15ರಂದು ಸಪ್ತಾಪುರದಲ್ಲಿ ಹತ್ಯೆ ಮಾಡಲಾಗಿತ್ತು. ಅವರ ಜಿಮ್​ನ ಹೊರಗೆ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ ಎಸಗಿ ಕೊಲೆ ಮಾಡಲಾಗಿತ್ತು. ಬೈಕ್​ನಲ್ಲಿ ಬಂದಿದ್ದ ಸುಪಾರಿ ಹಂತಕರು ಈ ಕೃತ್ಯ ಎಸಗಿದ್ದರು. ಆ ಘಟನೆ ಬಳಿಕ ಪೊಲೀಸರು ಧಾರವಾಡದ ಆರು ಮಂದಿ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಿದ್ದರು. 2019, ಸೆಪ್ಟೆಂಬರ್​ನಲ್ಲಿ ಈ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಲಾಯಿತು. ಈ ಸಂಬಂಧ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದು ನಂತರ ಜೈಲಿಗೆ ಕಳುಹಿಸಲಾಗಿತ್ತು. ಈ ಹಿನ್ನಲೆಯಲ್ಲಿ ವಿನಯ್ ಕುಲಕರ್ಣಿ ಸುಪ್ರೀಂ ಕೋರ್ಟನ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟನ ನ್ಯಾಯಮೂರ್ತಿಗಳಾದ ಯು. ಲಲಿತ್ ಮತ್ತು ಅಜಯ ರಸ್ತೋಗಿ ಅವರನ್ನೊಳಗೊಂಡ ಪೀಠ ವಿನಯ್ ಗೆ ಷರತ್ತು ಬದ್ದ ಜಾಮೀನು ನೀಡಿದೆ. ಆದರೆ ಬೆಂಗಳೂರು ನ್ಯಾಯಲಯದಲ್ಲಿ ಸಾಕ್ಷನಾಶ ಪ್ರಕರಣದ ಅರ್ಜಿ ವಿಚಾರಣಾ ಹಂತದಲ್ಲಿರುವುದರಿಂದ ವಿನಯ್ ಗೆ ಜಾಮೀನು ದೊರೆತರೂ ಕೂಡ ಬಿಡುಗಡೆಯ ಭಾಗ್ಯ ಇಲ್ಲದಂತಾಗಿದೆ.

Exit mobile version