ವಿಶ್ವವಿಖ್ಯಾತ ನಾಡಹಬ್ಬಕ್ಕೆ ವೈಭವದ ತೆರೆ

ಮೈಸೂರು, ಅ. 26: ಶರನ್ನವರಾತ್ರಿಯ 10ನೇ ದಿನ ಮೈಸೂರು ಅರಮನೆಯಲ್ಲಿ ವಿಜಯ ದಶಮಿಯನ್ನು ವಿಜಯಯಾತ್ರೆ ಮೂಲಕ ಯದುವೀರ್ ನೆರವೇರಿಸುವ ಮೂಲಕ 10 ದಿನದ ಶರನ್ನವರಾತ್ರಿ ಮುಕ್ತಾಯವಾಗಿರುವುದರ ಜತೆಗೆ ಸರಳ ಸಂಭ್ರಮದ ದಸರಾ ಆಚರಣೆಗೆ ತೆರೆ ಎಳೆಯಲಾಯಿತು.
ಬೆಳಗ್ಗೆ 9:30ಕ್ಕೆ ಪಟ್ಟದ ಕುದುರೆ, ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಒಂಟೆ ಆನೆ ಬಾಗಿಲಿಗೆ ಬಂದು ಪೂಜೆ ನಡೆಯಿತು.ಬೆಳಗ್ಗೆ 9:45ಕ್ಕೆ ಉತ್ತರ ಪೂಜೆ: ಖಾಸಾ ಆಯುಧಗಳಿಗೆ ಕಲ್ಯಾಣ ಮಂಟಪದಲ್ಲಿ ಪೂಜೆ ಸಲ್ಲಿಸಿ ನಂತರ 10:20 ದ 10:40ರವರೆಗೆ ರಾಜ ಆಯುಧಗಳಿಗೆ ಉತ್ತರ ಪೂಜೆ ನಡೆಯಲಿದೆ. ನಂತರ ಭುವನೇಶ್ವರಿ ದೇವಾಲಯದ ಬಳಿ ಆಯುಧಗಳನ್ನು ವಿಜಯ ಯಾತ್ರೆಯ ಮೂಲಕ ತಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಾಜ ಪೋಷಾಕ್​​ನಲ್ಲಿ ಶಮಿ ಮರದ ಹತ್ತಿರದ ವಿಜಯ ಯಾತ್ರೆ ಬಂದು ಶಮಿ ಪೂಜೆ ನೆರವೇರಿಸಿದರು. ನಂತರ ಶಮಿ ಪೂಜೆ ಮುಗಿದ ನಂತರ ಕನ್ನಡಿ ತೊಟ್ಟಿಯಲ್ಲಿರುವ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ವಿಜಯ ದಶಮಿ ಆಚರಿಸಿದರು.ಆ ಮೂಲಕ ವಿಜಯ ದಶಮಿ ದಿನ ರಾಜಮನೆತನದಲ್ಲಿ ನಡೆಯುವ ವಿಜಯ ದಶಮಿಯ ಪೂಜಾ ಕಾರ್ಯಕ್ರಮಗಳು ಅಂತ್ಯಗೊಂಡವು.

ಆನಂತರ ನಡೆದ ಜಂಬೂ ಸವಾರಿ ಅರಮನೆ ಆವರಣಕ್ಕೆ ಅಷ್ಟೇ ಸೀಮಿತವಾಗಿತ್ತು. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಿಎಂ ಯಡಿಯೂರಪ್ಪ ಅವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಿದರು. ಮೊದಲಿಗೆ ವಿಕ್ರಮ ಮತ್ತು ಗೋಪಿ ನಿಶಾನೆ ಆನೆಗಳಾಗಿ ಹೆಜ್ಜೆ ಹಾಕುವ ಮೂಲಕ ಮೆರವಣಿಗೆ ಆರಂಭಗೊಂಡಿತು.
ಇದರ ಬೆನ್ನಲ್ಲೇ ನಾದಸ್ವರ, ವೀರಗಾಸೆ ಸೇರಿದಂತೆ ಇನ್ನಿತರ ಕಲಾತಂಡಗಳ ಕಲಾವಿದರು ಹೆಜ್ಜೆಹಾಕಿದರು. ಕಲಾ ತಂಡಗಳ ನಡುವೆ ಸಾಗಿದ ಎರಡು ಸ್ತಬ್ಧಚಿತ್ರಗಳು ಮೆರವಣಿಗೆಯ ಆಕರ್ಷಣೆ ಹೆಚ್ಚಿಸಿತು. ಈ ಸಂಭ್ರಮದ ನಡುವೆ ವಿಜಯ, ಕಾವೇರಿ ಆನೆಯೊಂದಿಗೆ ಗಜ ಗಾಂಭೀರ್ಯದಿಂದ ಸಾಗಿ ಬಂದ ಅಭಿಮನ್ಯು, ಯಶಸ್ವಿಯಾಗಿ ಅಂಬಾರಿ ಹೊತ್ತು ಸಾಗುವ ಮೂಲಕ, 410ನೇ ದಸರಾ ಸಂಭ್ರಮ ಅಂತ್ಯಗೊಂಡಿತು.
ಕೊರೊನಾ ಆತಂಕದ ನಡುವೆ ನಡೆದ ಐತಿಹಾಸಿಕ ದಸರಾ ಮಹೋತ್ಸವಕ್ಕೆ ಇಂದು ಸಂಭ್ರಮದ ತೆರೆ ಎಳೆಯಲಾಯಿತು. ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಗಜ ಗಾಂಭೀರ್ಯದಿಂದ ಹೆಜ್ಜೆಹಾಕಿ ಎಲ್ಲರ ಗಮನ ಸೆಳೆದರು. ಕೋವಿಡ್ ಕಾರಣ ಜಂಬೂಸವಾರಿ ಮೆರವಣಿಗೆ ಅರಮನೆಯ ಒಳಗಷ್ಟೇ ಸೀಮಿತವಾಗಿತ್ತು. ಅಂಬಾರಿಯಲ್ಲಿ ಪ್ರತಿಷ್ಠಾಪಿಸಿದ್ದ ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿಗೆ ಯಡಿಯೂರಪ್ಪ ಹಾಗೂ ಇತರೆ ಗಣ್ಯರು, ಪುಷ್ಪಾರ್ಚನೆ ಮಾಡಿದರು.

Exit mobile version