ಬಾಂಗ್ಲಾದೇಶ ಸೇರಿದಂತೆ ಭಾರತದ ೩ ರಾಜ್ಯಗಳಲ್ಲಿ ೬೩ವರ್ಷಗಳಿಂದಿದ್ದ ’ವಾಯ್ಸ್‌ ಆಫ್‌ ಅಮೆರಿಕ’ ಸ್ಥಗಿತ

ವಾಷಿಂಗ್ಟನ್‌, ಜು. 14: ಬಾಂಗ್ಲಾದೇಶ ಸೇರಿದಂತೆ ಭಾರತದ ಮೂರು ರಾಜ್ಯಗಳಲ್ಲಿ 63 ವರ್ಷಗಳಿಂದ ’ಬಾನುಲಿ ಸೇವೆ’ ಸಲ್ಲಿಸುತ್ತಿದ್ದ ’ವಾಯ್ಸ್‌ ಆಫ್‌ ಅಮೆರಿಕ’ (ವಿಒಎ) ಜುಲೈ 17ರಿಂದ ತನ್ನ ಸೇವೆಯನ್ನು ಸ್ಥಗಿತಗೊಳಿಸುತ್ತಿರುವುದಾಗಿ ಪ್ರಕಟಿಸಿದೆ.

ಎಫ್‌.ಎಂ. ಮತ್ತು ಶಾರ್ಟ್‌ವೇವ್ ಮೂಲಕ ಬಾಂಗ್ಲಾದೇಶ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರಾ ರಾಜ್ಯಗಳಲ್ಲಿ ಆರು ದಶಕಗಳಿಗೂ ಹೆಚ್ಚು ಕಾಲ ರೇಡಿಯೊ ಪ್ರಸಾರ ಮಾಡುತ್ತಿದ್ದ ವಾಯ್ಸ್‌ ಆಫ್ ಅಮೆರಿಕ, ಜುಲೈ 17ರಿಂದ ಅಧಿಕೃತವಾಗಿ ತನ್ನ ಸೇವೆಯನ್ನು ಸ್ಥಗಿತಗೊಳಿಸಲಿದೆ ಎಂದು ಮಾಧ್ಯಮ ಪ್ರಕಟಣೆ ತಿಳಿಸಿದೆ.

ಇದೇ ವೇಳೆ ವಿಒಎ, ದೂರದರ್ಶನ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡುತ್ತಿರುವ ಮಾಹಿತಿಯನ್ನು ಹೆಚ್ಚಿಸುವ ಮೂಲಕ, ಪ್ರತಿ ವಾರ 1.6 ಕೋಟಿ ಪ್ರೇಕ್ಷಕರನ್ನು ಹೊಂದಿರುವ ಡಿಜಿಟಲ್ ವೇದಿಕೆಯನ್ನು ಬಲವರ್ಧನೆಗೊಳಿಸಲು ಮುಂದಾಗಿದೆ.

ಬಾಂಗ್ಲಾದೇಶದಲ್ಲಿ ’ವಾಯ್ಸ್‌ ಆಫ್‌ ಅಮೆರಿಕ’ ರೇಡಿಯೊ ಪ್ರಸಾರ ಆರಂಭವಾಗಿದ್ದು ಜನವರಿ 1958ರಲ್ಲಿ. ಆಗ ಬಾಂಗ್ಲಾದೇಶ ‘ಪೂರ್ವ ಪಾಕಿಸ್ತಾನ’ವಾಗಿತ್ತು. ಆ ಸಂದರ್ಭದಲ್ಲಿ ಇಲ್ಲಿ ಯಾವುದೇ ದೂರದರ್ಶನ ಮತ್ತು ಖಾಸಗಿ ರೇಡಿಯೊ ಸ್ಟೇಷನ್‌ ಇರಲಿಲ್ಲ’ ಎಂದು ವಿಒಎ ಉಸ್ತುವಾರಿ ಕಾರ್ಯಕ್ರಮ ನಿರ್ದೇಶಕ ಜಾನ್‌ ಲಿಪ್ಪಮ್ಯಾನ್ ತಿಳಿಸಿದ್ದಾರೆ.

Exit mobile version