ಪಶ್ಚಿಮ ಬಂಗಾಳ ಚುನಾವಣೆ: ನಂದಿ ಗ್ರಾಮದಲ್ಲಿ ಸಿಎಂ ಮಮತಾ ಬ್ಯಾನರ್ಜಿ- ಅಮಿತ್ ಶಾ ರೋಡ್ ಶೋ

ಕೊಲ್ಕತ್ತಾ, ಮಾ. 30: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಪ್ರಚಾರ ಜೋರಾಗಿದ್ದು, ನಂದಿಗ್ರಾಮದಲ್ಲಿ ಟಿಎಂಸಿ ಅಭ್ಯರ್ಥಿಯಾಗಿರುವ ಸಿಎಂ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ಅಭ್ಯರ್ಥಿ ಪರ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಪ್ರಚಾರ ನಡೆಸಲಿದ್ದಾರೆ. ಅಮಿತ್ ಶಾ ಮತ್ತು ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ಇಂದು ರೋಡ್ ಶೋ ನಡೆಸುವ ಮೂಲಕ ಮತಯಾಚನೆ ಮಾಡಲಿದ್ದಾರೆ.

ಈ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಮಮತಾ ಬ್ಯಾನರ್ಜಿ ಕಣಕ್ಕಿಳಿದಿದ್ದು, ಚುನಾವಣೆ ಘೋಷಣೆಯಾಗುವ ಸಂದರ್ಭದಲ್ಲೇ ಟಿಎಂಸಿಗೆ ರಾಜೀನಾಮೆ ನೀಡಿ, ಬಿಜೆಪಿಗೆ ಸೇರ್ಪಡೆಯಾಗಿರುವ ಸುವೇಂದು ಅಧಿಕಾರಿ ಮಮತಾ ಬ್ಯಾನರ್ಜಿ ಅವರ ಎದುರಾಳಿಯಾಗಿ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ.

ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಹಲ್ಲೆಗೊಳಗಾಗಿದ್ದ ಸಿಎಂ ಮಮತಾ ಬ್ಯಾನರ್ಜಿ ನಿನ್ನೆ ಕೂಡ ವೀಲ್​ಚೇರ್​ನಲ್ಲಿಯೇ ಕುಳಿತು ನಂದಿಗ್ರಾಮದಲ್ಲಿ ಚುನಾವಣಾ ರ್ಯಾಲಿ ನಡೆಸಿದ್ದರು. ತಮ್ಮ ಅನಾರೋಗ್ಯದ ನಡುವೆಯೂ ಚುನಾವಣಾ ಅಖಾಡಕ್ಕೆ ಇಳಿದಿರುವ ಮಮತಾ ಬ್ಯಾನರ್ಜಿ ತಮ್ಮದೇ ಪಕ್ಷದಿಂದ ವಲಸೆ ಹೋಗಿರುವ ಸುವೇಂದು ಅಧಿಕಾರಿ ವಿರುದ್ಧ ಗೆಲುವು ಸಾಧಿಸುವ ಶಪಥ ಮಾಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27ರಿಂದ ಮೊದಲ ಹಂತದ ಚುನಾವಣೆ ಆರಂಭವಾಗಿದ್ದು, ಒಟ್ಟು 8 ಹಂತಗಳಲ್ಲಿ ಮತದಾನ ನಡೆಯಲಿದೆ. ಎರಡನೇ ಹಂತದ ಮತದಾನ ಏಪ್ರಿಲ್ 1ರಂದು ನಡೆಯಲಿದೆ. ಹೀಗಾಗಿ, ನಂದಿಗ್ರಾಮದಲ್ಲಿ ಇಂದು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದೆ. ಏಪ್ರಿಲ್ 29ರಂದು ಮತದಾನ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಮೇ 2ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.

Exit mobile version