ನೂತನ ಕೊರೋನಾ ಲಸಿಕಾ ನೀತಿಯ ಬದಲಾವಣೆಯಲ್ಲಿ ಕಂಡು ಬರುವ ಅಂಶಗಳೇನು? ಇಲ್ಲಿದೆ ಮಾಹಿತಿ…

ನವದೆಹಲಿ, ಜೂ. 8: ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೋನಾವನ್ನು ನಿಯಂತ್ರಿಸಲು ಅನೇಕ ದೇಶಗಳು ಲಸಿಕೆಗಳನ್ನು ಕಂಡುಹಿಡಿಯುತ್ತಿವೆ. ಈಗಾಗಲೇ ಭಾರತದ ಕೋವ್ಯಾಕ್ಸಿನ್, ಆಕ್ಸ್​ಫರ್ಡ್​ನ ಕೋವಿಶೀಲ್ಡ್​, ರಷ್ಯಾದ ಸ್ಪುಟ್ನಿಕ್ ವಿ ಸೇರಿದಂತೆ ಅನೇಕ ಲಸಿಕೆಗಳು ಚಾಲ್ತಿಯಲ್ಲಿವೆ. ನಿನ್ನೆ ದೇಶವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತದಲ್ಲಿ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡುವ ಘೋಷಣೆ ಮಾಡಿದ್ದಾರೆ. ಹಾಗಿದ್ದರೆ ಪ್ರಧಾನಿ ಮೋದಿ ಘೋಷಿಸಿರುವ ನೂತನ ಕೊರೋನಾ ಲಸಿಕೆ ನೀತಿಯಲ್ಲೇನಿದೆ? ಎಂಬುದನ್ನು ತಿಳಿದುಕೊಳ್ಳೋಣ…

ಜೂನ್ 21ರಿಂದ ಭಾರತದ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಉಚಿತವಾಗಿ ಕೊರೋನಾ ಲಸಿಕೆ ನೀಡಲಾಗುತ್ತದೆ. ಈ ಮೂಲಕ ರಾಜ್ಯ ಸರ್ಕಾರಗಳ ಮೇಲಿದ್ದ ಲಸಿಕೆಯ ಖರ್ಚಿನ ಹೊರೆಯನ್ನು ಕೇಂದ್ರ ಸರ್ಕಾರ ಇಳಿಸಿದೆ. ಜೂನ್ 21ರ ನಂತರ ಯಾವ ರಾಜ್ಯ ಸರ್ಕಾರವೂ ಕೊರೋನಾ ಲಸಿಕೆಗಾಗಿ ಖರ್ಚು ಮಾಡಬೇಕಾಗಿಲ್ಲ. ಈ ಮೊದಲು 45 ವರ್ಷ ಮೇಲ್ಪಟ್ಟವರು ಉಚಿತ ಲಸಿಕೆಗಳನ್ನು ಪಡೆಯುತ್ತಿದ್ದರು. ಇನ್ನು 18 ವರ್ಷ ಮೇಲ್ಪಟ್ಟವರಿಗೂ ಅದು ಅನ್ವಯವಾಗಲಿದೆ.

ಕೊರೋನಾ ವಿರುದ್ಧ ಹೋರಾಡಲು ಲಸಿಕೆಯೊಂದೇ ಮಾರ್ಗ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ದೇಶಾದ್ಯಂತ ಶೇ. 100ರಷ್ಟು ಲಸಿಕೆ ಪೂರೈಕೆಗೆ ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ. ಸದ್ಯದಲ್ಲೇ ದೇಶದಿಂದ ಕೊರೋನಾವನ್ನು ಹೊಡೆದೋಡಿಸುವ ಗುರಿ ಹೊಂದಿದ್ದೇವೆ. ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವಾದ್ದರಿಂದ ಅಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಕೊರೋನಾ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಿದ್ದೇವೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ನೂತನ ಕೊರೋನಾ ಲಸಿಕಾ ನೀತಿಯಲ್ಲಿ ಏನೆಲ್ಲ ಬದಲಾವಣೆಗಳ ಕುರಿತು ಇಲ್ಲಿದೆ ಮಾಹಿತಿ… ಮೇ 1ರಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಕೊರೋನಾ ಲಸಿಕಾ ನೀತಿಯ ಅನುಸಾರ ಶೇ. 50ರಷ್ಟು ಲಸಿಕೆಗಳನ್ನು ಕೇಂದ್ರ ಸರ್ಕಾರ ಖರೀದಿಸಿ ನೀಡುತ್ತಿತ್ತು. ಈ ಲಸಿಕೆಗಳನ್ನು 45 ವರ್ಷ ಮೇಲ್ಪಟ್ಟವರಿಗೆ, ಹೆಲ್ತ್​ ಕೇರ್, ಫ್ರಂಟ್​ಲೈನ್ ವರ್ಕರ್​ಗಳಿಗೆ ನೀಡಲಾಗುತ್ತಿತ್ತು. ಈ ವಲಯದವರು ಉಚಿತವಾಗಿ ಕೊರೋನಾ ಲಸಿಕೆ ಪಡೆಯಬಹುದಾಗಿತ್ತು. ಹಾಗೇ, ಉಳಿದ ಶೇ.50ರಷ್ಟು ಲಸಿಕೆಗಳಲ್ಲಿ ಶೇ. 25ರಷ್ಟು ಲಸಿಕೆಗಳನ್ನು ಉತ್ಪಾದನಾ ಸಂಸ್ಥೆಗಳು ನೇರವಾಗಿ ರಾಜ್ಯ ಸರ್ಕಾರಗಳಿಗೆ ಹಾಗೂ ಇನ್ನುಳಿದ ಶೇ. 25ರಷ್ಟು ಲಸಿಕೆಗಳನ್ನು ಖಾಸಗಿಯವರಿಗೆ ನೀಡಬಹುದಾಗಿತ್ತು. ಆದರೆ, ಹೊಸ ಲಸಿಕಾ ನೀತಿಯ ಪ್ರಕಾರ ಕೇಂದ್ರ ಸರ್ಕಾರವೇ ಇನ್ನುಮುಂದೆ ರಾಜ್ಯ ಸರ್ಕಾರಗಳಿಗೆ ಕೊರೋನಾ ಲಸಿಕೆಗಳನ್ನು ಪೂರೈಕೆ ಮಾಡಲಿದೆ. ಇದರಿಂದ ರಾಜ್ಯ ಸರ್ಕಾರಗಳ ಮೇಲಿನ ಲಸಿಕಾ ವೆಚ್ಚದ ಹೊರೆ ಇಳಿದಂತಾಗಿದೆ. ಜೊತೆಗೆ, ಶೇ. 25ರಷ್ಟು ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರವೇ ಪೂರೈಕೆ ಮಾಡುತ್ತದೆ. ಆ ಆಸ್ಪತ್ರೆಗಳು ನಿಗದಿತ ಹಣಕ್ಕಿಂತ ಹೆಚ್ಚು ದರವನ್ನು ಪಡೆಯುವಂತಿಲ್ಲ.

ಕೇಂದ್ರ ಸರ್ಕಾರವೇ ವೆಚ್ಚ ಭರಿಸಲಿದೆ: ಜೂನ್ 21ರಿಂದ 18 ವರ್ಷ ಮೇಲ್ಪಟ್ಟವರಿಗೆ ನೀಡಲಾಗುವ ಕೊರೋನಾ ಲಸಿಕೆಯ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ. ರಾಜ್ಯ ಸರ್ಕಾರಗಳು ಇನ್ನು ಲಸಿಕೆಗಾಗಿ ಖರ್ಚು ಮಾಡಬೇಕಾಗಿಲ್ಲ. ಈ ಲಸಿಕಾ ಯೋಜನೆ ದೀಪಾವಳಿಯವರೆಗೂ ಮುಂದುವರೆಯಲಿದೆ. ಅಷ್ಟರೊಳಗೆ ದೇಶದಲ್ಲಿನ 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆಗಳನ್ನು ಹಾಕಲಾಗುತ್ತದೆ. ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಹೊಸ ಲಸಿಕಾ ನೀತಿಯ ಪ್ರಕಾರ, ಭಾರತದ ಶೇ. 75ರಷ್ಟು ಜನರ ಕೊರೋನಾ ಲಸಿಕೆಗಳ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ವಹಿಸಿಕೊಳ್ಳಲಿದೆ. ಲಸಿಕೆ ಉತ್ಪಾದನಾ ಸಂಸ್ಥೆಗಳು ಉತ್ಪಾದಿಸುವ ಶೇ. 75ರಷ್ಟು ಲಸಿಕೆಗಳನ್ನು ಕೇಂದ್ರ ಸರ್ಕಾರವೇ ಖರೀದಿಸಿ ಅದನ್ನು ರಾಜ್ಯ ಸರ್ಕಾರಗಳಿಗೆ ಕಳುಹಿಸಲಿದೆ.

ಖಾಸಗಿ ಆಸ್ಪತ್ರೆಯಲ್ಲಿ 150 ರೂ.ಗೆ ಲಸಿಕೆ: ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಲಸಿಕೆಗಳನ್ನು ಹಾಕಿಸಿಕೊಳ್ಳುವ ಸಾಮರ್ಥ್ಯ ಇರುವವರಿಗೆಂದು ಖಾಸಗಿ ಆಸ್ಪತ್ರೆಗಳಿಗೂ ಶೇ. 25ರಷ್ಟು ಲಸಿಕೆಗಳನ್ನು ಪೂರೈಕೆ ಮಾಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಲಸಿಕೆಗೆ 150 ರೂ.ಗಿಂತ ಹೆಚ್ಚು ಹಣ ಪಡೆಯುವಂತಿಲ್ಲ. ಇದರಿಂದ ಎಲ್ಲ ವರ್ಗದವರಿಗೂ ಕೈಗೆಟುಕುವ ದರದಲ್ಲಿ ಲಸಿಕೆ ಸಿಗಲಿದೆ.

7 ಕಂಪನಿಗಳಿಂದ ಲಸಿಕೆ ತಯಾರಿಕೆ: ದೇಶದಲ್ಲಿ ಅತ್ಯಂತ ವೇಗವಾಗಿ ಲಸಿಕೆಗಳು ತಯಾರಾಗುತ್ತಿವೆ. ಈಗ ದೇಶದಲ್ಲಿ ಏಳು ಕಂಪನಿ ವಿಭಿನ್ನ ಪ್ರಕಾರದ ಲಸಿಕೆ ತಯಾರಿಸುತ್ತಿವೆ. 3 ಲಸಿಕೆ ಅಡ್ವಾನ್ಸ್ ಹಂತದಲ್ಲಿ ಪ್ರಯೋಗ ನಡೆಯುತ್ತಿದೆ. ನಮ್ಮ ದೇಶದ ಜನರಿಗೆ ಅಗತ್ಯವಿರುವಷ್ಟು ಲಸಿಕೆಗಳನ್ನು ಬೇರೆ ದೇಶಗಳಿಂದಲೂ ಖರೀದಿಸಲಾಗುತ್ತಿದೆ. ಈಗಾಗಲೇ ಕೊರೋನಾ ಲಸಿಕೆ ಉತ್ಪಾದನೆ ಶೇ. 90ರಷ್ಟು ಹೆಚ್ಚಾಗಿದೆ. ಶೀಘ್ರದಲ್ಲೇ ಇನ್ನೆರಡು ಲಸಿಕೆಗಳು ಸಿಗಲಿವೆ.

ಶೀಘ್ರದಲ್ಲೇ ಮಕ್ಕಳಿಗೂ ಲಸಿಕೆ: 18 ವರ್ಷ ಮೇಲ್ಪಟ್ಟವರಿಗೆ ಮಾತ್ರವಲ್ಲದೆ ಮಕ್ಕಳಿಗೂ ಕೊರೋನಾ ಲಸಿಕೆ ನೀಡಲು ಸಿದ್ಧತೆಗಳು ನಡೆಯುತ್ತಿವೆ. ನೇಸಲ್ ಲಸಿಕೆ ಕುರಿತು ಸಂಶೋಧನೆ ನಡೆಯುತ್ತಿದ್ದು, ಇದನ್ನು ಮೂಗಿನ ಮೂಲಕ ಸ್ಪ್ರೇ ಮಾಡಲಾಗುತ್ತದೆ. ಸದ್ಯದಲ್ಲೇ ಮಕ್ಕಳಿಗೂ ಕೊರೋನಾ ಲಸಿಕೆ ನೀಡುವ ಅಭಿಯಾನ ಶುರು ಮಾಡಲಾಗುವುದು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

Exit mobile version