ಇಸ್ಲಾಮಾಬಾದ್ : ಪಾಕಿಸ್ತಾನದ(Pakistan) ಕರಾಚಿಯಲ್ಲಿ(Karachi) ಭದ್ರತಾ ಸಿಬ್ಬಂದಿಯೊಬ್ಬ ಗರ್ಭಿಣಿ ಮಹಿಳೆಗೆ ಹೊಡೆದಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇದೊಂದು ನಾಚಿಕೆಗೇಡಿನ ಕೃತ್ಯ, ಹೀಗಾಗಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ನೋಮನ್ ಗ್ರ್ಯಾಂಡ್ ಸಿಟಿ ಅಪಾರ್ಟ್ಮೆಂಟ್ ಕಟ್ಟಡದ ಹೊರಗೆ ಭದ್ರತಾ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ಥಳಿಸಿದ್ದಾರೆ ಎಂದು ಪಾಕ್ ಮೂಲದ ಜಿಯೋ ನ್ಯೂಸ್ ವರದಿ ಮಾಡಿದೆ.
ಗರ್ಭಿಣಿಯನ್ನು ಥಳಿಸುತ್ತಿರುವ ವಿಡಿಯೋ(Video Footage) ದೃಶ್ಯಾವಳಿಯನ್ನು ಸಾಮಾಜಿಕ ಜಾಲತಾಣದಲ್ಲಿ(Social Media) ಹಂಚಿಕೊಳ್ಳಲಾಗಿದೆ. ಇದೀಗ ಈ ವಿಡಿಯೋ ಎಲ್ಲೆಡೆ ಭಾರೀ ವೈರಲ್(Viral) ಆಗಿದೆ. ಈ ವಿಡಿಯೋದಲ್ಲಿ ಭದ್ರತಾ ಸಿಬ್ಬಂದಿ ಮಹಿಳೆಯೊಂದಿಗೆ ಜಗಳವಾಡುತ್ತಿರುವುದು, ನಂತರ ಅವನು ಅವಳಿಗೆ ಕಪಾಳಮೋಕ್ಷ ಮಾಡಿದ್ದಾನೆ. ಮಹಿಳೆ ನೆಲಕ್ಕೆ ಬಿದ್ದು ಮೇಲೇಳಲು ಯತ್ನಿಸುತ್ತಿದ್ದಂತೆ, ಆ ವ್ಯಕ್ತಿ ಮತ್ತೆ ಆಕೆಯ ಮುಖಕ್ಕೆ ಒದ್ದಿದ್ದಾನೆ.
ಇನ್ನು ವರದಿಗಳ ಪ್ರಕಾರ, ಗುಲಿಸ್ತಾನ್-ಎ-ಜೌಹರ್ ಎಂಬ ಮಹಿಳೆ ನೋಮನ್ ಗ್ರ್ಯಾಂಡ್ ಸಿಟಿ ಅಪಾರ್ಟ್ಮೆಂಟ್ನಲ್ಲಿ ಮನೆ ಸಹಾಯಕಿಯಾಗಿ ಕೆಲಸ ಮಾಡುವ ಮಹಿಳೆಯಾಗಿದ್ದು, ಆಕೆಯ ಮಗನಿಗೆ ಅಪಾರ್ಟ್ಮೆಂಟ್ನ ಆವರಣವನ್ನು ಪ್ರವೇಶಿಸದಂತೆ ಅಬ್ದುಲ್ ನಾಸಿರ್, ಆದಿಲ್ ಖಾನ್ ಮತ್ತು ಮಹಮೂದ್ ಖಲೀಲ್ ತಡೆದಿದ್ದರು. ಈ ಕುರಿತು ವಿಚಾರಿಸಲು ಆಕೆ ಬಂದಾಗ, ಆದಿಲ್ ಕೋಪಗೊಂಡು ಆಕೆಯನ್ನು ನಿಂದಿಸಲು ಪ್ರಾರಂಭಿಸಿದನು. ನಂತರ ಸೆಕ್ಯೂರಿಟಿ ಗಾರ್ಡ್ಗೆ ಆಕೆಯನ್ನು ಹೊಡೆಯುವಂತೆ ಹೇಳಿದ್ದಾನೆ. ಹೀಗಾಗಿ ಭದ್ರತಾ ಸಿಬ್ಬಂದಿ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
“ನನ್ನ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ಮಾಡಿದ್ದು, ನಾನು 6 ತಿಂಗಳ ಗರ್ಭಿಣಿಯಾಗಿದ್ದೇನೆ. ಅವನು ನನ್ನನ್ನು ಹೊಡೆದಾಗ, ನೋವಿನಿಂದ ನಾನು ಪ್ರಜ್ಞಾಹೀನಳಾದೆ, ಎಂದು ಗುಲಿಸ್ತಾನ್-ಎ-ಜೌಹರ್ ಹೇಳಿದ್ದಾಳೆ.