ವಿಶ್ವ ಆಹಾರ ಸುರಕ್ಷತಾ ದಿನ: ಆರೋಗ್ಯಭಾಗ್ಯ ಬೇಕಾದರೆ ಆಹಾರ ಸುರಕ್ಷತೆ ಅತೀ ಮುಖ್ಯ

‘ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ’ ಎಂಬ ಮಾತಿದೆ. ಇದರರ್ಥ ಒಬ್ಬ ವ್ಯಕ್ತಿಗೆ ತನ್ನ ಆರೋಗ್ಯ ಕಾಪಾಡಲು ಆಹಾರವನ್ನು ಎಷ್ಟು? ಹೇಗೆ ಸೇವಿಸಬೇಕು? ಎಂದು ತಿಳಿದವನು ರೋಗದಿಂದ ದೂರವಿರುತ್ತಾನೆ. ಎಲ್ಲಿ ಹೇಗೆ ಮಾತನಾಡಬೇಕು ಎಂಬ ಅರಿವಿದ್ದವನು ಜಗಳ ಮಾಡಿಕೊಳ್ಳುವುದಿಲ್ಲ ಎಂಬುದು. ಇಂದು ನಾವು ಹೇಳಹೊರಟಿರುವುದು ಮಾತಿನ ಬಗ್ಗೆ ಅಲ್ಲ, ಮಾತಾಡಲು ಶಕ್ತಿ ನೀಡುವ ಆಹಾರದ ಬಗ್ಗೆ.

ಇಂದು ವಿಶ್ವ ಆಹಾರ ಸುರಕ್ಷತಾ ದಿನ. ಜೂನ್ 7ರಂದು ಆಚರಿಸಲಾಗುವ ಈ ದಿನವು ಆಹಾರ ಭದ್ರತೆ, ಆರೋಗ್ಯ ಮತ್ತು ಸುಸ್ಥಿರ ಅಭಿವೃದ್ಧಿಯ ನಡುವಣ ಸಂಬಂಧವನ್ನು ನೆನಪಿಸುವ ದಿನವಾಗಿದೆ. ಆಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗುರುತಿಸಿ, ತಡೆಯುವ ಮತ್ತು ನಿರ್ವಹಿಸುವ ಬಗ್ಗೆ ದಿನ ಗಮನ ಸೆಳೆಯುತ್ತದೆ.

ಆಹಾರ ಸುರಕ್ಷತೆ ಎಂದರೇನು?:
ಆಹಾರ ಸುರಕ್ಷತೆ ಅಂದರೆ, ಆಹಾರ ಸೇವನೆಯಿಂದ ಆರೋಗ್ಯಕ್ಕೆ ಹಾನಿಮಾಡದಂತೆ ತಡೆಯುವ ಎಲ್ಲಾ ಹಂತವನ್ನ ಒಳಗೊಂಡಿದ್ದು, ಆಹಾರ ತಯಾರಿ, ನಿರ್ವಹಣೆ ಹಾಗೂ ಸಂಗ್ರಹಣೆಯ ವಿಚಾರವನ್ನ ಹೊಂದಿದೆ. ಅನಾರೋಗ್ಯಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ರಾಸಾಯನಿಕಗಳು ಆಹಾರ ಮಾಲಿನ್ಯ ಅಥವಾ ಅಸುರಕ್ಷತೆಗೆ ಕಾರಣವಾಗಬಹುದು. ಆಹಾರ ಮಾಲಿನ್ಯವು ಅದರ ಉತ್ಪಾದನೆ, ಸಂಸ್ಕರಣೆ, ವಿತರಣೆ, ಸಂಗ್ರಹಣೆ ಮತ್ತು ತಯಾರಿಕೆಯ ಯಾವುದೇ ಹಂತದಲ್ಲಿ ಸಂಭವಿಸಬಹುದು. ಆದ್ದರಿಂದ ಅದನ್ನು ಸುರಕ್ಷಿತವಾಗಿರಿಸುವುದು ಮುಖ್ಯ.

ಆಹಾರ ಸುರಕ್ಷತೆಯ ಮಹತ್ವ:
ಆಹಾರ ಸುರಕ್ಷತೆಯು ಕೇವಲ ರೆಸ್ಟೋರೆಂಟ್ಗಳು ಮತ್ತು ಹೋಟೆಲ್ ಗೆ ಮಾತ್ರ ಎಂದು ಯೋಚಿಸುತ್ತಿದ್ದರೆ, ನಿಮ್ಮ ಊಹೆ ತಪ್ಪು. ಮನೆಯಲ್ಲಿ ಆಹಾರವನ್ನು ಸುರಕ್ಷಿತವಾಗಿ ಮತ್ತು ಆರೋಗ್ಯಕರವಾಗಿ ಹೇಗೆ ತಯಾರಿಸಬೇಕೆಂದು ತಿಳಿಯುವುದು ಸಹ ಮುಖ್ಯವಾಗಿದೆ. ಬ್ಯಾಕ್ಟೀರಿಯಾ, ವೈರಸ್‌ಗಳು ಆಹಾರವನ್ನು ಕಲುಷಿತಗೊಳಿಸುತ್ತವೆ. ಇದು ಗ್ಯಾಸ್ಟ್ರೋಎಂಟರೈಟಿಸ್ ಮತ್ತು ನಿರ್ಜಲೀಕರಣ ಜೊತೆಗೆ ಮೂತ್ರಪಿಂಡ ವೈಫಲ್ಯದಂತಹ ಗಂಭೀರ ಅನಾರೋಗ್ಯಕ್ಕೆ ಕಾರಣವಾಗಬಹುದು. ಆದ್ದರಿಂದ ಉತ್ತಮ ಹಾಗೂ ಸುರಕ್ಷಿತವಾದ ಆಹಾರ ತಯಾರಿ ಹಾಗೂ ಸೇವನೆ ಬಹಳ ಮುಖ್ಯ. ಇದು ಮಕ್ಕಳು, ವೃದ್ಧರು, ಗರ್ಭಿಣಿಯರು ಸೇರಿದಂತೆ ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೊಂದಿರುವವರು ಅನಾರೋಗ್ಯಕ್ಕೆ ತುತ್ತಾಗುವುದು ಕಡಿಮೆಯಾಗುವುದು.

ವಿಶ್ವ ಆಹಾರ ಸುರಕ್ಷತಾ ದಿನದ ಇತಿಹಾಸ:
ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್ಒ) ವಿವಿಧ ವಯೋಮಾನದವರಲ್ಲಿ ಮುಖ್ಯವಾಗಿ ೫ ವರ್ಷಕ್ಕಿಂತ ಕೆಳಗಿರುವವರಲ್ಲಿ ಕಂಡುಬರುವ ಆಹಾರಕ್ಕೆ ಸಂಬಂಧಿಸಿದ ರೋಗಳನ್ನು ಗಮನಿಸಿ ಅದರ ಬಗ್ಗೆ ಜಾಗೃತಿ ಮೂಡಿಸಲು ಆಹಾರ ಸುರಕ್ಷಾ ದಿನದ ಪರಿಕಲ್ಪನೆಯನ್ನು ಜಾರಿಗೆ ತಂದಿತು. 2018ರಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತಿವರ್ಷ ಜೂನ್ 7ರಂದು ಆಹಾರ ಸುರಕ್ಷಾ ದಿನ ಆಚರಿಸಲು ನಿರ್ಧರಿಸಲಾಯಿತು. ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವಸಂಸ್ಥೆಯ ಅಧೀನದಲ್ಲಿರುವ ಆಹಾರ ಮತ್ತು ಕೃಷಿ ಸಂಸ್ಥೆಗಳು ಜಂಟಿಯಾಗಿ ಈ ದಿನವನ್ನು ಆಚರಿಸಲು ಶ್ರಮ ವಹಿಸುತ್ತವೆ.

2021ರ ವಿಶ್ವ ಆಹಾರ ಸುರಕ್ಷತಾ ದಿನದ ಥೀಮ್:
ಇದು ಆಹಾರ ಸುರಕ್ಷಾ ದಿನದ 3ನೇ ವರ್ಷಾಚರಣೆಯಾಗಿದೆ. ಪ್ರತಿವರ್ಷ ವಿಭಿನ್ನ ಪರಿಕಲ್ಪನೆಯೊಂದಿಗೆ ಆಚರಿಸುವ ಈ ವರ್ಷದ ಥೀಮ್ ‘ಆರೋಗ್ಯಕರ ನಾಳೆಗೆ ಇಂದು ಸುರಕ್ಷಿತ ಆಹಾರ’. ಇದು ಸುರಕ್ಷಿತ ಆಹಾರವನ್ನು ಉತ್ಪಾದಿಸುವ ಮತ್ತು ಸೇವಿಸುವತ್ತ ಗಮನಹರಿಸುತ್ತದೆ. ಸುರಕ್ಷಿತ ಆಹಾರವನ್ನ ಸೇವಿಸುವುದು ಜನರಿಗೆ, ಆರ್ಥಿಕತೆಗೆ ದೀರ್ಘಕಾಲೀನ ಪ್ರಯೋಜನವನ್ನು ನೀಡುತ್ತದೆ. ಇದು ಜನರ ಆರೋಗ್ಯ, ಪ್ರಾಣಿಗಳು, ಸಸ್ಯಗಳು, ಪರಿಸರ ಮತ್ತು ಆರ್ಥಿಕತೆಯ ನಡುವೆ ವ್ಯವಸ್ಥಿತ ಸಂಪರ್ಕವನ್ನು ರೂಪಿಸುತ್ತದೆ ಜೊತೆಗೆ ಭವಿಷ್ಯದ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ.

ವಿಶ್ವ ಆಹಾರ ಸುರಕ್ಷತಾ ದಿನದ ಕೋಟ್ಸ್ ಗಳು:
“ಜಗತ್ತಿನಲ್ಲಿ ದೇವರು ಹಸಿದವರಿಗೆ ರೊಟ್ಟಿಯ ರೂಪದಲ್ಲಿ ಕಾಣಸಿಗುತ್ತಾನೆಯೇ ಹೊರತು ಬೇರಾವುದೇ ರೂಪದಲ್ಲೂ ಕಾಣಸಿಗಲಾರ” – ಮಹಾತ್ಮ ಗಾಂಧಿ.

“ನಿಮ್ಮ ಆಹಾರವು ನಿಮ್ಮ ಔಷಧಿಯಾಗಲಿ, ಮತ್ತು ನಿಮ್ಮ ಔಷಧವು ನಿಮ್ಮ ಆಹಾರವಾಗಲಿ” -ಹಿಪ್ಪೊಕ್ರೇಟ್ಸ್
“ಆಹಾರ ಸುರಕ್ಷತೆಯು ಆಹಾರ ಸರಪಳಿಯಲ್ಲಿರುವ ಪ್ರತಿಯೊಬ್ಬರನ್ನು ಒಳಗೊಂಡಿರುತ್ತದೆ” -ಮೈಕ್, ಜೋಹಾನ್ಸ್

Exit mobile version