ಆಂಧ್ರ ರಾಜ್ಯಪಾಲರಾಗಿ ಯಡಿಯೂರಪ್ಪ? ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಖಚಿತ!?

ಬೆಂಗಳೂರು,ಜೂ.19: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಇನ್ನೂ ಅಡ್ಡಗೋಡೆ ಮೇಲೆ ಇದ್ದಂತೆಯೇ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್‌ ದೆಹಲಿಗೆ ಮರಳಿದ್ದಾರೆ.

ಈ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ದೆಹಲಿಗೆ ಬರುವಂತೆ ಬಿಜೆಪಿ ಹೈಕಮಾಂಡ್‌ ಸೂಚನೆ ನೀಡಿದ್ದು, ಬಿಎಸ್‌ವೈ ಅವರನ್ನು ಸಿಎಂ ಸ್ಥಾನದಿಂದ ಇಳಿಸಿ, ಆಂಧ್ರಪ್ರದೇಶದ ರಾಜ್ಯಪಾಲರಾಗಿ ನೇಮಕ ಮಾಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಆಂಧ್ರ ಪ್ರದೇಶದ ಹಾಲಿ ರಾಜ್ಯಪಾಲರ ಅಧಿಕಾರಾವಧಿ ಜುಲೈಗೆ ಅಂತ್ಯವಾಗಲಿದೆ. ಆ ಸ್ಥಾನಕ್ಕೆ ಯಡಿಯೂರಪ್ಪರನ್ನು ನೇಮಿಸುವ ಸಾಧ್ಯತೆಗಳು ಕಾಣುತ್ತಿವೆ. ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರು ದೆಹಲಿಗೆ ಮರಳುತ್ತಿದ್ದಂತೆಯೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡ ಹಾಗೂ ಗೃಹ ಸಚಿವ ಅಮಿತ್ ಷಾ ಅವರು ದೆಹಲಿಗೆ ಬರುವಂತೆ ಯಡಿಯೂರಪ್ಪರಿಗೆ ಬುಲಾವ್‌ ನೀಡಿರುವುದಾಗಿ ತಿಳಿದು ಬಂದಿದೆ.

ಮೂರು ದಿನಗಳ ಕಾಲ ರಾಜ್ಯದಲ್ಲಿ ಬೀಡು ಬಿಟ್ಟಿದ್ದ ಅರುಣ್‌ ಸಿಂಗ್‌ ರಾಜ್ಯದ ಬಿಜೆಪಿ ಮುಖಂಡರು ಮತ್ತು ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಿದ್ದಾರೆ. ಎಂಎಲ್‌ಸಿ ಹೆಚ್‌ ವಿಶ್ವನಾಥ್‌ ಸೇರಿದಂತೆ ಹಲವು ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಹೇಳಿದ್ದಾರೆ. ಮತ್ತೂ ಕೆಲವರು ಬಿಎಸ್‌ವೈ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎಂದು ಹೇಳಿದರೆ, ಆರ್‌ಎಸ್‌ಎಸ್‌ ಹಿನ್ನೆಲೆಯಿಂದ ಬಂದ ಶಾಸಕರು ಹೈಕಮಾಂಡ್‌ ತೀರ್ಮಾನಕ್ಕೆ ಬದ್ದರಾಗಿರುತ್ತೇವೆ ಎಂದು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ, ನಾಯಕತ್ವ ಬದಲಿಸಿದರೆ ಮುಂದೆ ಅದು ಯಾವ ರೀತಿ ಪರಿಣಾಮಗಳನ್ನು ಬೀರಬಹುದು? ನಾಯಕತ್ವ ಬದಲಾವಣೆಯ ಅಗತ್ಯ ಇದೆಯೇ? ನಾಯಕತ್ವ ಬದಲಿಸುವುದಾದರೆ ಯಾರಿಗೆ ನಾಯಕತ್ವ ನೀಡಬಹುದು? ಆ ಸಾರ್ಮಥ್ಯ ಯಾರಿಗಿದೆ? ಎಂಬುದರ ಬಗ್ಗೆ ಅರುಣ್‌ ಸಿಂಗ್‌ ಮೇಲ್ವಿಚಾರಣೆ ನಡೆಸಿದ್ದಾರೆ.

ಅಲ್ಲದೆ, ಈಗ ನಾಯಕತ್ವ ಬದಲಾದರೆ, ಮುಂದಿನ 2023ರ ರಾಜ್ಯ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ನಾಯಕತ್ವ ನೀಡುವವರು ಯಾರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಸಾಮರ್ಥ್ಯ ಯಾರಿಗಿದೆ. ಈಗಿನ ನಾಯಕತ್ವ ಬದಲಾವಣೆ ಮುಂದಿನ ಚುನಾವಣೆಗಳ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದರ ಬಗ್ಗೆಯೂ ಬಿಜೆಪಿ ಹೈಕಮಾಂಡ್‌ ಚಿಂತಿಸಿದೆ.

ಹೀಗಾಗಿ, ಯಡಿಯೂರಪ್ಪರಿಗೆ ರಾಜ್ಯಪಾಲ ಹುದ್ದೆ ನೀಡಿದರೆ ಅವರು ತಣ್ಣಗಾಗಬಹುದು ಎಂಬ ಯೋಚನೆಯೂ ಬಿಜೆಪಿ ಹೈಕಮಾಂಡ್‌ನಲ್ಲಿದೆ. ಹೀಗಾಗಿ ಅವರನ್ನು ಆಂಧ್ರಕ್ಕೆ ರಾಜ್ಯಪಾಲರಾಗಿ ನೇಮಿಸುವ ತಯಾರಿಯಲ್ಲಿದೆ ಎಂದು ತಿಳಿದು ಬಂದಿದೆ. ಮುಂದಿನ ವಾರ ಸಿಎಂ ಯಡಿಯೂರಪ್ಪ ಅವರು ದೆಹಲಿಗೆ ಭೇಟಿ ನೀಡಲಿದ್ದು, ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Exit mobile version