ಕೊರೊನಾ ವಿರುದ್ಧದ ಹೋರಾಟದಲ್ಲಿ ಯೋಗ ಎಂಬುದು ಭರವಸೆಯ ಕಿರಣವಾಗಿದೆ: ಪ್ರಧಾನಿ ಮೋದಿ

ಹೊಸದಿಲ್ಲಿ,ಜೂ.21: ವಿಶ್ವವೇ ಕೊರೊನಾ‌ ಸಂಕಷ್ಟಕ್ಕೆ ಸಿಲುಕಿರುವ ಪ್ರಸ್ತುತ ಸಂದರ್ಭದಲ್ಲಿ ಯೋಗ ಭರವಸೆ ಕಿರಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

7ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಇಂದು ಇಡೀ ಜಗತ್ತು ಕೋವಿಡ್-19 ವಿರುದ್ಧ ಹೋರಾಡುತ್ತಿದ್ದು, ಯೋಗ ಭರವಸೆಯ ಕಿರಣವಾಗಿ ಪರಿಣಮಿಸಿದೆ. ಕಳೆದ ಎರಡು ವರ್ಷಗಳಲ್ಲಿ ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಯಾವುದೇ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸದಿದ್ದರು, ಯೋಗದ ಮೇಲಿನ ಉತ್ಸಾಹ ಕೊಂಚವು ಕಡಿಮೆಯಾಗಿಲ್ಲ.

ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ “ಮನೆಯಲ್ಲೇ ಯೋಗ, ಕುಟುಂಬದೊಂದಿಗೆ ಯೋಗ” ಎಂಬ ಥೀಮ್ ನೊಂದಿಗೆ ವಿಶ್ವ ಯೋಗದಿನವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ. ವಿಶ್ವದ 190 ದೇಶಗಳಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಈ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ‘ಯೋಗ ಫಾರ್ ವೆಲ್ನೆಸ್’ ವಿಷಯವು ಜನರನ್ನು ಯೋಗ ಮಾಡಲು ಇನ್ನಷ್ಟು ಪ್ರೋತ್ಸಾಹಿಸಿದೆ. ಪ್ರತಿಯೊಂದು ದೇಶ, ಪ್ರದೇಶ ಮತ್ತು ಜನರು ಆರೋಗ್ಯವಾಗಿರಲು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.

ಇಂದು ಇಂದು, ವೈದ್ಯಕೀಯ ವಿಜ್ಞಾನವು ಚಿಕಿತ್ಸೆಯ ಜೊತೆಗೆ ಖಾಯಿಲೆ ಗುಣಪಡಿಸುವ ಪ್ರಕ್ರಿಯೆಗೆ ಒತ್ತು ನೀಡಲಿದ್ದು, ಈ ಗುಣಪಡಿಸುವ ಪ್ರಕ್ರಿಯೆಯಲ್ಲಿ ಯೋಗ ಸಹಾಯ ಮಾಡುತ್ತದೆ. ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಯೋಗವನ್ನು ರಕ್ಷಾಕವಚವಾಗಿ ಬಳಸಿದ್ದಾರೆ. ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ದಾದಿಯರು ಯೋಗವನ್ನು ಕಲಿಸುತ್ತಿದ್ದು ಉಸಿರಾಟದ ವ್ಯಾಯಾಮ ಮಾಡುತ್ತಾರೆ. ಈ ವ್ಯಾಯಾಮಗಳು ಉಸಿರಾಟದ ವ್ಯವಸ್ಥೆಯನ್ನು ಯೋಗದಿಂದ ಬಲಪಡಿಸುತ್ತವೆ ಎಂದು ತಜ್ಞರು ಹೇಳಿದ್ದಾರೆ ಎಂದು ಮೋದಿ ಹೇಳಿದರು.

Exit mobile version