ಸೀರೆಯಿಂದ ಹಗ್ಗ ತಯಾರಿಕೆ!

ಬೆಳಗಾವಿ, ನ. 12: ಇಲ್ಲಿ ಹಳ್ಳಿ ಹಳ್ಳಿಗೆ ಸುತ್ತಿ ಹಳೆ ಸೀರೆಯಲ್ಲಿ ಹಗ್ಗ ತಯಾರಿಸಿ ಕೊಡುವ ಅಲೆಮಾರಿ ಕುಟುಂಬದವರು ಪ್ರದರ್ಶಿಸುವ ‘ಕಸದಿಂದ ರಸ’ ತೆಗೆಯುವ ಕಲೆ’ ಗಮನಸೆಳೆಯುತ್ತದೆ. ಪ್ಲಾಸ್ಟಿಕ್ ಹಗ್ಗ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಂತೆಯೇ ಹಗ್ಗ ತಯಾರಿಸುವ ಗುಡಿ ಕೈಗಾರಿಕೆಗಳು ಮೂಲೆಗುಂಪಾಗಿವೆ. ಈ ಮೊದಲು ನಿಸರ್ಗದತ್ತವಾದ ವಸ್ತುಗಳಿಂದ ಹಗ್ಗ ಸಿದ್ಧಪಡಿಸುವ ಕೆಲಸಕ್ಕೆ ಹೆಚ್ಚಿನ ಪ್ರಮಾಣದ ಒತ್ತಡ ಮತ್ತು ಸಮಯ ಬೇಕಾಗುತ್ತಿತ್ತು. ಆದರೆ ಇದೀಗ  ರೈತರ ಈ ಅಗತ್ಯವನ್ನು ತಿಳಿದುಕೊಂಡ ಕೆಲವು ಅಲೆಮಾರಿ ಜನಾಂಗದ ಕುಟುಂಬಗಳು ಕೆಲವೇ ನಿಮಿಷಗಳಲ್ಲಿ, ಹಳೆ ಸೀರೆಗಳನ್ನು ಉಪಯೋಗಿಸಿ  ಹಗ್ಗ ತಯಾರಿಸಿ ಕೊಡುತ್ತವೆ.

ಹಳೆ ಸೀರೆಯನ್ನು ಉದ್ದವಾಗಿ 6 ಭಾಗವಾಗಿ ಕತ್ತರಿಸುತ್ತಾರೆ. ತಮ್ಮಲ್ಲಿನ ಒಂದು ಸ್ಟ್ಯಾಂಡ್‍ಗೆ ಹಾಕಿದ ಕಬ್ಬಿಣದ ಮೂರು ಕೊಂಡಿಗಳಿಗೆ ಕತ್ತರಿಸಿದ ಸೀರೆಯ ತುಂಡಗಳನ್ನು ಹಾಕಿ ತಿರುಗಿಸಿ ತಕ್ಷಣ ಕೆಲವೇ ಕೆಲವು ನಿಮಿಷಗಳಲ್ಲಿ ಹಗ್ಗ ತಯಾರಿಸುತ್ತಾರೆ. ಈ ಅಲೆಮಾರಿ ಕುಟುಂಬದವರು ಮನೆ ಮನೆಗಳಿಗೆ ಹೋಗಿ, ಹಳೆ ಸೀರೆ ಪಡೆದು ಅಗತ್ಯವಿರುವವರಿಗೆ ಹಗ್ಗ ತಯಾರಿಸಿಕೊಟ್ಟರು. ಒಂದು ಸೀರೆಗೆ ರೂ  20 ಪಡೆದು ಒಂದು ಸೀರೆಯಲ್ಲಿ ಎರಡು ಮಾರುದ್ದದ ಎರಡು ಹಗ್ಗ ಸಿದ್ಧಪಡಿಸಿಕೊಟ್ಟರು. ‘ಈ ಹಗ್ಗ ಗಟ್ಟಿಯಾಗಿಯೂ ಇರುತ್ತದೆ. ಕೇವಲ  20ಕ್ಕೆ, ಅದರಲ್ಲೂ ಉಪಯೋಗಕ್ಕೆ ಬಾರದ ಸೀರೆಯಿಂದ ಎರಡು ಹಗ್ಗ ಸಿಕ್ಕಂತಾಗುತ್ತದೆ.

‘ಗಂಡ-ಹೆಂಡತಿ ಸೇರಿ ದಿನಕ್ಕೆ ಸರಾಸರಿ 1ಸಾವಿರ ಸಂಪಾದಿಸುತ್ತೇವೆ. ಇದರಲ್ಲಿ ಜೀವನ ನಿರ್ವಹಿಸುತ್ತೇವೆ’ ಎಂದು ರಾಯಚೂರು ಜಿಲ್ಲೆಯ ಮುದಗಲ್ ಗ್ರಾಮದ ನಿವಾಸಿಗಳಾದ ಪ್ರಭುದೇವ ತಿಳಿಸಿದರು. ’12 ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದೇವೆ. ಬೈಕ್‌ನಲ್ಲಿ ಗ್ರಾಮಗಳನ್ನು ಸುತ್ತುತ್ತೇವೆ. ವರ್ಷದಲ್ಲಿ ಕೇವಲ 2 ತಿಂಗಳು ಮಾತ್ರ ನಮ್ಮೂರಲ್ಲಿರುತ್ತೇವೆ. ಕರ್ನಾಟಕದ ಜೊತೆಗೆ ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ, ತಮಿಳುನಾಡು ಮೊದಲಾದ ಕಡೆಗಳಿಗೂ ಹೋಗುತ್ತೇವೆ. ಇಡೀ ಗ್ರಾಮವೇ ಈ ಕಸುಬು ಅವಲಂಬಿಸಿದೆ. ಹೀಗಾಗಿ, ಅಲೆಮಾರಿ ಜೀವನ ಅನಿವಾರ್ಯ’ ಎಂದು ಈ ಅಲೆಮಾರಿ ಜನಾಂಗದ ಕುಟುಂಬದ ಸದಸ್ಯರು ಹೇಳುತ್ತಾರೆ. ಊರೂರು ಸುತ್ತುವುದರಿಂದ ಮಕ್ಕಳಿಗೆ ಶಿಕ್ಷಣ ಕೊಡಲಾಗುವುದಿಲ್ಲ. ಆದರೂ ಹೊಟ್ಟೆ ಹೊರೆಯಲು ಊರೂರು ಅಲೆಯಲೇ ಬೇಕು  ಇದೇ ನಮ್ಮ ಕಸುಬಾಗಿದೆ ಎಂದು ಅವರು ಹೇಳುತ್ತಾರೆ.

Exit mobile version