ಸಾವರ್ಕರ್ ಪೋಸ್ಟರ್ ಗಲಭೆ ; ಶಿವಮೊಗ್ಗದಲ್ಲಿ ಚೂರಿ ಇರಿದ ಆರೋಪದಡಿ ನಾಲ್ವರ ಬಂಧನ!

ಶಿವಮೊಗ್ಗ : ಶಿವಮೊಗ್ಗ(Shivmogga) ನಗರದಲ್ಲಿ ಸೋಮವಾರ ವ್ಯಕ್ತಿಯೊಬ್ಬರಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು(Shivmogga Police) ಇಂದು ಬೆಳಿಗ್ಗೆ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರನ್ನು ನದೀಮ್ (25), ಅಬ್ದುಲ್ ರೆಹಮಾನ್ (25) ಮತ್ತು ಜಬೀವುಲ್ಲಾ ಎಂದು ಗುರುತಿಸಲಾಗಿದೆ. ಇನ್ನು ಬಂಧನದ ಮೇಲೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಜಬೀವುಲ್ಲಾ ಕಾಲಿಗೆ ಗುಂಡು ಹಾರಿಸಲಾಗಿದೆ.

ಈ ಕುರಿತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಮಾತನಾಡಿ, ಈ ಹಿಂದೆ ಶಿವಮೊಗ್ಗದಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದಿದ್ದ ಕೋಮು ಘರ್ಷಣೆಯಲ್ಲಿ ನದೀಮ್ ಭಾಗಿಯಾಗಿದ್ದು, ಈತನ ಮೇಲೆ ಈಗಾಗಲೇ ಅನೇಕ ಪ್ರಕರಣಗಳಿವೆ. ಇನ್ನು ಬಂಧಿತ ಆರೋಪಿಗಳು ಯಾವುದಾದರೂ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆಯೇ? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಈ ಘಟನೆ ಪೂರ್ವನಿಯೋಜಿತ ಎಂಬಂತೆ ಮೇಲ್ನೋಟಕ್ಕೆ ತೋರುತ್ತಿದೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.

ಇನ್ನು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್(Veera Savarkar) ಮತ್ತು ಟಿಪ್ಪು ಸುಲ್ತಾನ್(Tippu Sulthan) ಫ್ಲೆಕ್ಸ್ ಅಳವಡಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಸೋಮವಾರ ಘರ್ಷಣೆ ನಡೆದಿದೆ. ಈ ವೇಳೆ ಶಿವಮೊಗ್ಗದ ಗಾಂಧಿ ಬಜಾರ್ ನಲ್ಲಿ ಪ್ರೇಮ್ ಸಿಂಗ್ ಎಂಬ ವ್ಯಕ್ತಿಗೆ ಚಾಕುವಿನಿಂದ ಇರಿಯಲಾಗಿತ್ತು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದು, ಬಂಧಿತ ನಾಲ್ವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಘಟನೆ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ಮತ್ತು ಭದ್ರಾವತಿ ಪಟ್ಟಣ ವ್ಯಾಪ್ತಿಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ಎರಡು ಸ್ಥಳಗಳಲ್ಲಿ ಆಗಸ್ಟ್ 18 ರವರೆಗೆ ನಿಷೇಧಾಜ್ಞೆ(Curfew) ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Exit mobile version