ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ನ್ಯಾಯಾಲಯದ ಮೊರೆ ಹೋದ 6 ಜನ ಸಚಿವರು

ಬೆಂಗಳೂರು, ಮಾ. 06: ರಾಜ್ಯ ರಾಜಕೀಯದಲ್ಲಿ ತಲ್ಲಣ ಮೂಡಿಸಿದ ಮಾಜಿ ಸಚಿವರೊಬ್ಬರ ರಾಸಲೀಲೆ ಸಿಡಿ ಹೊರ ಬರುತ್ತಿದ್ದಂತೆ ಭೀತಿ ಶುರುವಾಗಿದ್ದು, ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ 6 ಜನ ಸಚಿವರು ಕೋರ್ಟ್ ಮೆಟ್ಟಿಲೇರಿದ್ದಾರೆ.

ರಾಜ್ಯ ಸರ್ಕಾರದಲ್ಲಿ ವಿವಿಧ ಖಾತೆಗಳನ್ನು ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿರುವ ಆರು ಸಚಿವರುಗಳು ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿಯನ್ನು ಪ್ರಸಾರ ಮಾಡದಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸಚಿವರಾದ ಶಿವರಾಮ್‌ ಹೆಬ್ಬಾರ್, ಕೆ ಸುಧಾಕರ್, ಎಸ್‌ ಟಿ ಸೋಮಶೇಖರ್, ಬಿ ಸಿ ಪಾಟೀಲ್‌, ಭೈರತಿ ಬಸವರಾಜು, ನಾರಾಯಣ ಗೌಡ ಅವರು ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ ಈ ಸಂಬಂಧ ಅರ್ಜಿ ಸಲ್ಲಿಸಿದ್ದಾರೆ.

ಅಲ್ಲದೇ, 26ನೇ ಹೆಚ್ಚುವರಿ ಸೆಷನ್ಸ್‌ ಅಂಡ್‌ ಸಿವಿಲ್‌ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದ್ದು, 68 ವಿವಿಧ ಮಾಧ್ಯಮಗಳನ್ನು ಪ್ರತಿವಾದಿಗಳನ್ನಾಗಿಸಲಾಗಿದೆ.

ಆದರೆ, ಲೈಂಗಿಕ ಸಿಡಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವರೊಬ್ಬರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಪತನದಲ್ಲಿ ಪ್ರಮುಖ ಪಾತ್ರವಹಿಸಿ ಜೊತೆಯಾಗಿ ಮುಂಬೈನಲ್ಲಿ ತಂಗಿದ್ದ ಈ ಆರು ಸಚಿವರು ಮಾನಹಾನಿಕರ ಸುದ್ದಿ ಪ್ರಸಾರ ತಡೆ ಕೋರಿ ಅರ್ಜಿ ಸಲ್ಲಿಸಿರುವುದು ಕುತೂಹಲ ಹುಟ್ಟಿಸಿದೆ.

Exit mobile version