ಪ್ರಧಾನಿ ಮೋದಿ ಪ್ರಶ್ನಿಸಿದ್ದ ಅಮೆರಿಕ ಪತ್ರಕರ್ತೆಗೆ ಸಾಮಾಜಿಕ ಜಾಲತಾಣದಲ್ಲಿ ಕಿರುಕುಳ – ಪತ್ರಿಕಾ ಸ್ವಾತಂತ್ರ್ಯಕ್ಕೆ ನಾವು ಬದ್ಧರಾಗಿದ್ದೇವೆ ಎಂದು ವೈಟ್‍ಹೌಸ್ ಪ್ರತಿಕ್ರಿಯೆ

ವಾಷಿಂಗ್ಟನ್: ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರಕರ್ತೆಯೊಬ್ಬರು ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಪ್ರಶ್ನಿಸಿದ್ದರು ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಆ ಪತ್ರಕರ್ತೆಗೆ ಕಿರುಕುಳ ನೀಡುತ್ತಿರುವ ಬಗ್ಗೆ ವೈಟ್‍ಹೌಸ್ ಪ್ರತಿಕ್ರಿಯೆ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಪತ್ರಕರ್ತೆಗೆ ಕಿರುಕುಳ ನೀಡುತ್ತಿದ್ದಾರೆ. ಶ್ವೇತಭವನವು ಇದನ್ನು ಬಲವಾಗಿ ಖಂಡಿಸುತ್ತದೆ. ಪ್ರಜಾಪ್ರಭುತ್ವ ನೀತಿಗಳಿಗೆ ಸಹ ಇದು ವಿರುದ್ಧವಾಗಿದೆ ಎಂದು ಶ್ವೇತಭವನದ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ.

ಪ್ರಧಾನ ಮಂತ್ರಿ ಮೋದಿಯವರು ಇತ್ತೀಚೆಗೆ ತೆರಳಿದ್ದ ಅಮೇರಿಕ ಪ್ರವಾಸದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದರು. ಈ ಸಮಯದಲ್ಲಿ ಪ್ರಧಾನಿ ಮೋದಿಯವರಿಗೆ ಪತ್ರಕರ್ತೆ ಸಬ್ರಿನಾ ಸಿದ್ದಿಕಿ (Sabrina Siddiqui) ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಪ್ರಶ್ನಿಸಿದ್ದರು.

ಇದನ್ನೂ ಓದಿ : ರಾಜ್ಯದಲ್ಲಿ ಕಾಫಿ, ಟೀ, ತಿಂಡಿ, ಊಟದ ದರ ಹೆಚ್ಚಳ : ಅಕ್ಕಿ ಮತ್ತು ಹಾಲಿನ ದರ ಹೆಚ್ಚಳ ಬಗ್ಗೆಯೂ ಸಿಕ್ಕಿದೆ ಸುಳಿವು

ಈ ಪ್ರಶ್ನೆಗೆ ಮೋದಿಯವರು ಪ್ರಜಾಸತ್ತಾತ್ಮಕ ಮೌಲ್ಯಗಳು ಭಾರತದಲ್ಲಿ ಬಲವಾಗಿವೆ. ಇದರಿಂದ ಜಾತಿ, ವಯಸ್ಸು, ಧರ್ಮ, ಅಥವಾ ಯಾವುದೇ ರೀತಿಯ ಭೌಗೋಳಿಕ ಸ್ಥಳದ ಆಧಾರದಲ್ಲಿ ಯಾವುದೇ ರೀತಿಯ ತಾರತಮ್ಯ ನಡೆಯುತ್ತಿಲ್ಲ. ಪ್ರಜಾಪ್ರಭುತ್ವ ಎನ್ನುವುದು ನಮ್ಮ ರಕ್ತದಲ್ಲೇ ಸೇರಿಕೊಂಡಿದೆ ಎಂದಿದ್ದರು.

ಇದಾದ ಬಳಿಕ ಆ ಪತ್ರಕರ್ತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಅನೇಕ ಜನರು ನಿಂದಿಸಿದ್ದಾರೆ. ಅಲ್ಲದೇ ಮಾನಸಿಕವಾಗಿ ಹಿಂಸೆಯಾಗುವಂತಹ ಕೆಲವು ಕೆಟ್ಟ ಪದಗಳ ಬಳಕೆ ಮಾಡಿದ್ದಾರೆ ಎನ್ನುವ ಆರೋಪ ಇದೀಗ ಕೇಳಿ ಬಂದಿದೆ. ಅಮೆರಿಕ ದೇಶವು ಇದಕ್ಕೆ ಪ್ರತಿಕ್ರಿಯಿಸಿದ್ದು, ಪತ್ರಿಕಾ ಸ್ವಾತಂತ್ರ್ಯಕ್ಕೆ ನಾವು ಬದ್ಧರಾಗಿದ್ದೇವೆ. ಪತ್ರಕರ್ತರಿಗೆ ಕಿರುಕುಳ ನೀಡುವ ಪ್ರಯತ್ನವನ್ನು ನಾವು ಖಂಡಿಸುತ್ತೇವೆ ಎಂದಿದೆ.

ರಶ್ಮಿತಾ ಅನೀಶ್

Exit mobile version