ಮನುಷ್ಯನಾಗುವುದು ತನ್ನ ಗುಣದಿಂದ.. ಹುಟ್ಟಿನಿಂದಲೊ ಜುಟ್ಟಿನಿಂದಲೊ ಅಲ್ಲ –ನಟ ಕಿಶೋರ್

ಇತಿಹಾಸವನ್ನು ಮರೆತವರಿಂದ ಇತಿಹಾಸ ಸೃಷ್ಟಿ ಸಾಧ್ಯವಿಲ್ಲ – ಡಾ. ಬಿ.ಆರ್. ಅಂಬೇಡ್ಕರ್ (Dr. B.R.Ambedkar) ಮನುಷ್ಯ ಉತ್ತಮನಾ/ಳಾಗುವುದು ತನ್ನ ಗುಣದಿಂದ .. ಹುಟ್ಟಿನಿಂದಲೊ ಜುಟ್ಟಿನಿಂದಲೊ ಅಲ್ಲ. ಪೆರಿಯಾರ್ ರನ್ನು ಆದರ್ಶವಾಗಿಟ್ಟುಕೊಂಡ, ನಿಂತ ನೀರಾಗದೇ ಸಂಗೀತದಲ್ಲಿ ಹೊಸ ಪ್ರಯೋಗಗಳನ್ನು ಮಾಡಹೊರಟ ಟಿ.ಎಂ.ಕೃಷ್ಣನ್ ಗೆ ಪ್ರಶಸ್ತಿ ಕೊಟ್ಟರೆ ವೈದಿಕ ಹಾಡುಗಾರರಿಂದೇಕೆ ಈ ಪಾಟಿ ವಿರೋಧ?? ಎಂದು ನಟ ಕಿಶೋರ್ (Actor Kishore) ಅವರು ಗಾಯಕ ಟಿ.ಎಂ.ಕೃಷ್ಣನ್ (T.M. Krishnan) ಗೆ ಪ್ರಶಸ್ತಿ ಅವರಿಗೆ ಮದ್ರಾಸ್ ಸಂಗೀತ ಅಕಾಡೆಮಿ ನೀಡಿರುವ ಪ್ರಶಸ್ತಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್ (Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಪೆರಿಯಾರ್ ಅಥವಾ ಕೃಷ್ಣನ್ ರ ಖಡಾಖಂಡಿತ ನಿಲುವು ವೈದಿಕರ ಪ್ರಚೋದನೆಯಿಲ್ಲದೇ ಬಂದದ್ದೇನು? ಅವರು ಖಂಡಿಸಿದ್ದೂ ದಲಿತರ ಮೇಲೆ ದೌರ್ಜನ್ಯ ಮಾಡಲು ಪ್ರೇರೇಪಿಸುವ ಹುಟ್ಟಿನಿಂದ ಸಿಕ್ಕ ವೈದಿಕನೆಂಬ ಶ್ರೇಷ್ಠತೆಯ ಪರಿಕಲ್ಪನೆಯನ್ನಲ್ಲವೇನು? ಆ ರೋಗವನ್ನೇ ತಮ್ಮ ಕೆಳಜಾತಿಯವರಿಗೂ ಹರಿಸಿ ದಲಿತರ ತಲೆಯ ಮೇಲೆ ಅವರ ಹೇಲು ಹೊರೆಸಿ ಮೆರೆದದ್ದು ವೈದಿಕ ಮಡಿವಂತಿಕೆಗೆ ಅಷ್ಟು ಬೇಗ ಮರೆತು ಹೋಯ್ತೇನು? ಎಂದು ಪ್ರಶ್ನಿಸಿದ್ದಾರೆ.

ಇನ್ನೊಂದು ಪೋಸ್ಟ್ನಲ್ಲಿ, ಇಂದಿಗೂ ದಲಿತರ ಆದಿವಾಸಿಗಳ ತಲೆಯ ಮೇಲೆ ಬಾಯಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಕೃತತೆ ಕಾಣದೇನು? ಅಂದಿನಿಂದ ಇಂದಿನವರೆಗೆ ಮಡಿವಂತಿಕೆಯ ಹೆಸರಲ್ಲಿ ದೇವಾಲಯಗಳಿಂದ ಹೊರಗೇ ನಿಂತಿಲ್ಲವೇನು? ಅಂಗಿ ಕಳೆದು ಜನಿವಾರವಿದೆಯೊ ಇಲ್ಲವೊ ತೋರುತ್ತಲೇ ಇಲ್ಲವೇನು? ಇದು ನೂರಾರು ವರ್ಷಗಳ ತುಳಿತದ ನಂತರವೂ ತುಳಿತಕ್ಕೊಳಗಾದವರು ಬಾಯಿ ಬಿಡಲಾಗದಷ್ಟು ಅನಾಗರೀಕ ಆಜ್ಞಾಧಾರಕ ಸಮಾಜವೇನು? ಸಂಗೀತವನ್ನು ಸಮಾಜದ ಕೊಳಕಿನ ವಿರುದ್ಧ ಅಭಿವ್ಯಕ್ತಿಯ ಮಾಧ್ಯಮವಾಗಿಸಿಕೊಳ್ಳಬಾರದೇನು?

ಇವರ ಪ್ರಕಾರ ಸಂಗೀತವನ್ನು ಸಮಾಜ ಸುಧಾರಣೆಯ ಸಾಧನವಾಗಿಸಿಕೊಂಡ ಕರ್ನಾಟಕ (Karntaka) ಸಂಗೀತದ ಪಿತಾಮಹ ಪುರಂದರ ಮತ್ತಿತರ ದಾಸರೂ , ಶರಣರೂ ಮೂರ್ಖರೇನು? ಸಂಗೀತದ ಶುದ್ಧ ಸಂಸ್ಕೃತಿಯ ಹೆಸರಲ್ಲಿ ತಮ್ಮಊಹೆಯ ಶ್ರೇಷ್ಠತೆಯ ವಿರುದ್ಧದ ದನಿಯನ್ನು ಹತ್ಕಿಕ್ಕುವ ಈ ಪ್ರಯತ್ನ ಅದೇ ವರ್ಣ ವ್ಯವಸ್ಥೆಯ ಪುನರ್ ಪ್ರತಿಷ್ಠಾಪನೆಯಲ್ಲವೇನು? ಮನುಷ್ಯನನ್ನು ಮನುಷ್ಯನಂತೆ ಕಾಣದ ಈ ವೈದಿಕ ಮಡಿವಂತಿಕೆಯ ಹಠಾತ್ ಬೊಬ್ಬೆಯ ಹಿಂದೆ ಕೊಳಕು ಧರ್ಮಾಂಧ ರಾಜಕಾರಣದ ಚಾಣಕ್ಯರು ಕಾಣುವುದಿಲ್ಲವೇನು?? ಎಂದು ಟೀಕಿಸಿದ್ದಾರೆ.

Exit mobile version