ಗುಡ್ಡಕ್ಕೆ ಬೆಂಕಿ ಹಚ್ಚುವ ಹುಚ್ಚು ಮನಸ್ಥಿತಿ ಇನ್ನು ನಮ್ಮಲ್ಲಿ ತಪ್ಪಿಲ್ಲ ; ಇದರ ಅನಾಹುತಗಳೇನು ಗೊತ್ತಾ?

fire

ಬೇಸಿಗೆ ಕಾಲ(Summer) ಬಂತೆಂದರೆ ಸಾಕು ಒಣ ಹುಲ್ಲಿಗೆ(Dry Grass) ಬೆಂಕಿ ಹಚ್ಚುವುದು ಸರ್ವೇ ಸಾಮಾನ್ಯ ಚಟವಾಗಿಬಿಟ್ಟಿದೆ. ಹುಲ್ಲು ಸುಡಲ್ಪಟ್ಟರೆ ಮುಂದಿನ ವರ್ಷ ಹುಲ್ಲು ಚೆನ್ನಾಗಿ ಬೆಳೆಯುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಆದರೆ ಬೆಂಕಿಯಲ್ಲಿ ಸುಡದಿದ್ದರು ಹುಲ್ಲು ಹಸಿರಾಗಿ ಚಿಗುರುತ್ತದೆ. ಮಾನವ ಈ ಭೂಮಿಯ ಮೇಲೆ ವಿಕಾಸವಾಗುವ ಮೊದಲಿನಿಂದಲೂ ಕೋಟ್ಯಾಂತರ ವರ್ಷಗಳಿಂದಲೂ ಹುಲ್ಲು ತನ್ನಷ್ಟಕ್ಕೆ ತಾನೇ ಬೆಳೆದು ಬಂದಿದೆ.

ಹುಲ್ಲಿಗೆ ಬೆಂಕಿ ಇಡುವುದರಿಂದ ಮಾನವನ ಜೊತೆಗೆ ಇಡೀ ಜೀವ ಸಂಕುಲಕ್ಕೆ ಅನಾಹುತಗಳು ಎದುರಾಗುತ್ತವೆ. ಗುಡ್ಡದಲ್ಲಿ ಅನೇಕ ಜೀವರಾಶಿಗಳು ಇದ್ದು ಅವು ಪರಿಸರ ಸಮತೋಲನ ಉಂಟುಮಾಡುತ್ತವೆ. ಹುಲ್ಲಿನಲ್ಲಿ ಅನೇಕ ಪಕ್ಷಿಗಳು,ಓತಿಗಳು, ಹಲ್ಲಿಗಳು, ಕೀಟಗಳು ಇಟ್ಟಿರುವ ಮೊಟ್ಟೆಗಳು, ಜೀವರಾಶಿಗಳು ಬೆಂಕಿಗೆ ಆಹುತಿಯಾಗಿ ನಾಶವಾಗುತ್ತವೆ. ಮೊಲ,ಇಲಿ, ಓತಿ, ಅಳಿಲು, ಜಿಂಕೆಯ ಮರಿಗಳು ಬೆಂಕಿಯಲ್ಲಿ ಬೆಂದು ಹೋಗುತ್ತವೆ.

ಉಳಿದ ಕೀಟಗಳು ಆಹಾರ ಸಿಗದೆ ಬೆಳೆಗಳಿಗೆ ದಾಳಿ ಇಡುತ್ತವೆ. ಪಕ್ಷಿಗಳು ತಂದು ಹಾಕಿದ ಅನೇಕ ವೈವಿಧ್ಯ ಸಸ್ಯ ಬೀಜಗಳು ಮಳೆಗಾಲದಲ್ಲಿ ಮೊಳಕೆಯಾಗಿ ಸಸಿಗಳಾಗಿರುತ್ತವೆ ಹಾಗೂ ಇತರೆ ಗಿಡಗಳು, ಮರಗಳು ಬೆಂಕಿಯಿಂದ ಸುಟ್ಟು ಹೋಗುವ ಮುಖೇನ ನಾಶವಾಗುತ್ತದೆ.
ಮರಗಿಡಗಳು ಕಡಿಮೆಯಾದರೆ, ನೀರಿನ ಹಿಂಗುವಿಕೆ ಕಡಿಮೆಯಾಗಿ ಭೂಗರ್ಭದ ನೀರಿನ ಮಟ್ಟ ಕಡಿಮೆಯಾಗುತ್ತದೆ. ಮಳೆ ಪ್ರಮಾಣ ಕಡಿಮೆಯಾಗುತ್ತದೆ, ಗುಡ್ಡಬೋಳಾಗಿ ಮಣ್ಣಿನ ಸವಕಳಿ ಉಂಟಾಗುತ್ತದೆ, ಸೌಂದರ್ಯ ಹಾಳಾಗುತ್ತದೆ.

ನಮ್ಮೂರಿನ ರಕ್ಷಾ ಕವಚದಂತಿರುವ ಬೆಟ್ಟದ ಸಾಲುಗಳಲ್ಲಿ ದಟ್ಟವಾದ ಕಾಡು ಇದ್ದಿದ್ದರೆ ನಮ್ಮೂರು ಹೇಗೆ ಕಾಣುತ್ತಿತ್ತು ಎಂದು ಊಹಿಸಿಕೊಳ್ಳಿ, ಕನಸು ಕಾಣಿರಿ. ದಯವಿಟ್ಟು ಬೆಂಕಿ ಹಚ್ಚುವ ಪ್ರವೃತ್ತಿಯನ್ನು ಇಂದೆಯೇ ತ್ಯಜಿಸಿಬಿಡಿ, ಯಾರೂ ಬೆಂಕಿ ಇಡಬೇಡಿ. ಬೆಂಕಿ ಇಡುವವರಿಗೆ ತಿಳುವಳಿಕೆ ಹೇಳಿ ಅವರಿಗೆ ಅರ್ಥೈಸಬೇಕು. “ಜೀವ ಸಂಕುಲಕ್ಕೆ ಬೆಂಕಿ ಇಟ್ಟರೆ ಮುಂದೆ ನಮ್ಮ ಬದುಕಿಗೇ ನಾವೇ ಕೊಳ್ಳಿ ಇಟ್ಟು ಕೊಂಡಂತೆ”

ಮಾಹಿತಿ ಕೃಪೆ : ಪರಿಸರ ಪರಿವಾರ

Exit mobile version