ಪಾಕ್‌ನಲ್ಲಿರುವ 1,200 ವರ್ಷಗಳ ಪ್ರಾಚೀನ ಹಿಂದೂ ದೇವಾಲಯ ಪುನಃಸ್ಥಾಪನೆ

Hindu Temple

ಇಸ್ಲಾಮಾಬಾದ್‌ : ಪಾಕಿಸ್ತಾನದ(Pakistan) ಲಾಹೋರ್(Lahore) ನಗರದಲ್ಲಿರುವ 1,200 ವರ್ಷಗಳಷ್ಟು ಹಳೆಯದಾದ ಹಿಂದೂ ದೇವಾಲಯವನ್ನು(Hindu Temple) ಅಕ್ರಮವಾಗಿ ವಶಕ್ಕೆ ಪಡೆದಿರುವ, ಅಕ್ರಮ ನಿವಾಸಿಗಳನ್ನು ಹೊರಹಾಕಿದ ನಂತರ ಅದನ್ನು ಪುನಃಸ್ಥಾಪಿಸಲಾಗುವುದು ಎಂದು ಪಾಕಿಸ್ತಾನದ ಅಲ್ಪಸಂಖ್ಯಾತರ ಪೂಜಾ ಸ್ಥಳಗಳ ಮೇಲ್ವಿಚಾರಣೆಯ ಫೆಡರಲ್ ಸಂಸ್ಥೆ ತಿಳಿಸಿದೆ.
ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ ಕಳೆದ ತಿಂಗಳು, ಲಾಹೋರ್ನ ಪ್ರಸಿದ್ಧ ಅನಾರ್ಕಲಿ ಬಜಾರ್ ಬಳಿ ಇರುವ ವಾಲ್ಮೀಕಿ ಮಂದಿರವನ್ನು ಕ್ರಿಶ್ಚಿಯನ್ ಕುಟುಂಬದಿಂದ ಹಿಂಪಡೆದಿದೆ.

ಇನ್ನು ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವುದಾಗಿ ಹೇಳಿಕೊಳ್ಳುವ ಕ್ರೈಸ್ತ ಕುಟುಂಬ, ಕಳೆದ ಎರಡು ದಶಕಗಳಿಂದ ವಾಲ್ಮೀಕಿ ಜಾತಿಯ ಹಿಂದೂಗಳಿಗೆ ಮಾತ್ರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಅನುಕೂಲ ಮಾಡಿಕೊಡುತ್ತಿತ್ತು. ಇನ್ನು ಕೃಷ್ಣ ದೇವಾಲಯದ ಜೊತೆಗೆ, ವಾಲ್ಮೀಕಿ ದೇವಾಲಯವು ಲಾಹೋರ್ನಲ್ಲಿರುವ ಏಕೈಕ ಹಿಂದೂ ದೇವಾಲಯವಾಗಿದೆ. ದೇವಸ್ಥಾನದ ಭೂಮಿಯನ್ನು ಕಂದಾಯ ದಾಖಲೆಯಲ್ಲಿ ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ಗೆ ವರ್ಗಾಯಿಸಲಾಗಿದೆ. ಆದರೆ ಕುಟುಂಬವು ನಾವು ಆಸ್ತಿಯ ಮಾಲೀಕರು ಎಂದು ಹೇಳಿಕೊಂಡು 2011 ರಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದೆ.

ಆದರೆ ನ್ಯಾಯಾಲಯವು ಸುಳ್ಳು ಹಕ್ಕುಗಳಿಗಾಗಿ ಅರ್ಜಿದಾರರಿಗೆ ಛೀಮಾರಿ ಹಾಕಿದೆ ಎಂದು ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ ಅಧಿಕಾರಿ ತಿಳಿಸಿದ್ದಾರೆ. ಇನ್ನು 1992 ರಲ್ಲಿ, ಭಾರತದಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ, ಕೋಪಗೊಂಡ ಜನಸಮೂಹವು ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸುತ್ತಾ ವಾಲ್ಮೀಕಿ ದೇವಸ್ಥಾನಕ್ಕೆ ನುಗ್ಗಿತು. ಕೃಷ್ಣ ಮತ್ತು ವಾಲ್ಮೀಕಿ ವಿಗ್ರಹಗಳನ್ನು ಒಡೆದು, ಪ್ರತಿಮೆಗಳಿಗೆ ಅಲಂಕರಿಸಿದ ಚಿನ್ನವನ್ನು ದೋಚಿದ್ದರು. ನಂತರ ದೇವಾಲಯವನ್ನು ಕೆಡವಲಾಯಿತು ಮತ್ತು ಕಟ್ಟಡಕ್ಕೆ ಬೆಂಕಿ ಹಚ್ಚಲಾಯಿತು.

ಇನ್ನು ವಿಭಜನೆಯ ನಂತರ ಭಾರತಕ್ಕೆ ವಲಸೆ ಬಂದ ಸಿಖ್ಖರು ಮತ್ತು ಹಿಂದೂಗಳು ಬಿಟ್ಟು ಹೋದ ದೇವಾಲಯಗಳು ಮತ್ತು ಭೂಮಿಯನ್ನು ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ ನೋಡಿಕೊಳ್ಳುತ್ತದೆ. ಇದು ಪಾಕಿಸ್ತಾನದಾದ್ಯಂತ 200 ಗುರುದ್ವಾರಗಳು ಮತ್ತು 150 ದೇವಾಲಯಗಳನ್ನು ನೋಡಿಕೊಳ್ಳುತ್ತಿದೆ.

Exit mobile version