ಅಸ್ಸಾಂನಲ್ಲಿ ಮುಸ್ಲಿಂಮರು ಅಲ್ಪಸಂಖ್ಯಾತರಲ್ಲ : ಅಸ್ಸಾಂ ಸಿಎಂ!

assam

ಅಸ್ಸಾಂ(Assam) ರಾಜ್ಯದ(State) ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 35% ರಷ್ಟಿರುವ ಮುಸ್ಲಿಂ(Muslim) ಸಮುದಾಯದವರು(Community) ಅಸ್ಸಾಂ ರಾಜ್ಯದಲ್ಲಿ ಅಲ್ಪಸಂಖ್ಯಾತರಲ್ಲ ಎಂದು ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಹೇಳಿಕೆ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ. ಅಸ್ಸಾಂ ರಾಜ್ಯ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ಧನ್ಯವಾದ ಅರ್ಪಿಸಿ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಮುಸ್ಲಿಂ ಸಮುದಾಯದವರು ಶೇಕಡಾ 35% ರಷ್ಟಿದ್ದಾರೆ. ಹೀಗಾಗಿ ಅವರು ಅಲ್ಪಸಂಖ್ಯಾತರಲ್ಲ.

ಈಗ ಮುಸ್ಲಿಂ ಸಮುದಾಯದವರು ಇತರ ಅಲ್ಪಸಂಖ್ಯಾತರನ್ನು ರಕ್ಷಿಸಬೇಕಿದೆ. ಅಲ್ಪಸಂಖ್ಯಾತರನ್ನು ರಕ್ಷಿಸುವುದು ಅಸ್ಸಾಂ ರಾಜ್ಯದ ಮುಸ್ಲಿಂ ಸಮುದಾಯದ ಕರ್ತವ್ಯವಾಗಿದೆ. ಇನ್ನು ಅಸ್ಸಾಂನ ಅನೇಕ ಅಲ್ಪಸಂಖ್ಯಾತ ಸಮುದಾಯಗಳು ತಮ್ಮ ಸಂಸ್ಕೃತಿ ಮೇಲೆ ದಾಳಿಯಾಗಬಹುದು ಎಂಬ ಭೀತಿಯಲ್ಲಿದ್ದಾರೆ ಎಂದಿದ್ದಾರೆ. ಇನ್ನು ಸೌಹಾರ್ದತೆ ಎನ್ನುವುದು ಕೊಡು-ಕೊಳ್ಳುವಿಕೆಯಿಂದ ಬರುತ್ತದೆ. ಅಸ್ಸಾಂನಲ್ಲಿ ಸದ್ಯ ಸಂಕರಿ ಮತ್ತು ಸತ್ತಿರಿಯಾ ಸಮುದಾಯಗಳು ಭೀತಿಯಲ್ಲಿವೆ. ಹೀಗಾಗಿ ಮುಸ್ಲಿಂ ಸಮುದಾಯ ಅವರ ಬಗ್ಗೆ ಮಾತನಾಡಲಿ.

ಈ ಎರಡು ಸಮುದಾಯಗಳು 10 ವರ್ಷಗಳ ಹಿಂದೆ ಅಲ್ಪಸಂಖ್ಯಾತರಾಗಿರಲಿಲ್ಲ. ಆದರೆ ಈಗ ಅಲ್ಪಸಂಖ್ಯಾತರಾಗಿದ್ದೇವೆ ಎಂದು ಅವರು ಭೀತಿಯಲ್ಲಿದ್ದಾರೆ. ಇನ್ನು ನಮ್ಮ ರಾಜ್ಯದಲ್ಲಿ ಮುಸ್ಲಿಂ ಸಮುದಾಯದಿಂದ ಅನೇಕರು ಶಾಸಕರಾಗಿದ್ದಾರೆ. ಪ್ರತಿಪಕ್ಷದಲ್ಲಿಯೂ ಪ್ರಭಾವ ಹೊಂದಿದ್ದಾರೆ. ಅಧಿಕಾರವನ್ನು ಪಡೆದಿದ್ದಾರೆ. ಹೀಗಾಗಿ ಅಸ್ಸಾಂ ರಾಜ್ಯದ ಬುಡಕಟ್ಟು ಸಮುದಾಯಗಳ ಸಂಸ್ಕೃತಿಯನ್ನು ರಕ್ಷಣೆ ಮಾಡುವುದು ಅವರ ಜವಾಬ್ದಾರಿ ಎಂದು ಸಿಎಂ ಹಿಮಾಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಇನ್ನು ಹಿಮಾಂತ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರ ಅಸ್ಸಾಂನಲ್ಲಿ ಅಧಿಕಾರಕ್ಕೇರಿದಾಗಿನಿಂದ ಸಾಕಷ್ಟು ಬದಲಾವಣೆಗಳು ಅಸ್ಸಾಂನಲ್ಲಿ ಕಾಣಲಾಗುತ್ತಿದೆ.

ಅಕ್ರಮ ಬಾಂಗ್ಲಾ ವಲಸಿಗರನ್ನು ಗುರುತಿಸಿ ದೇಶದಿಂದ ಹೊರಹಾಕುವಲ್ಲಿ, ಅಸ್ಸಾಂನ ಮೂಲ ನಿವಾಸಿಗಳಾದ ಅನೇಕ ಬುಡಕಟ್ಟುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಿಮಾಂತ ಶರ್ಮಾ ಕೈಗೊಂಡಿದ್ದಾರೆ. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅಸ್ಸಾಂನಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿತ್ತು. ಇತ್ತೀಚಿನ ದಿನಗಳಲ್ಲಿ ಅಸ್ಸಾಂ ಸಿಎಂ ನಡೆಗಳು ಭಾರೀ ವಿವಾದಕ್ಕೆ ಕಾರಣವಾಗುತ್ತಿವೆ. ಆದರೆ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸಿಎಂ ಹಿಮಾಂತ ಶರ್ಮಾ ನಮ್ಮ ನಿಲುವುಗಳನ್ನು ಸಮರ್ಥಸಿಕೊಳ್ಳುತ್ತಲೇ ಮುನ್ನಡೆಯುತ್ತಿದ್ದಾರೆ.

Exit mobile version