ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹಿಜಾಬ್‍ಗೆ ಅವಕಾಶ ಇಲ್ಲ : ಬಿಸಿ ನಾಗೇಶ್!

hijab

ಮಾರ್ಚ್ 28ರಿಂದ ಪ್ರಾರಂಭವಾಗುವ ಎಸ್‍ಎಸ್‍ಎಲ್‍ಸಿ(SSLC Exam) ಪರೀಕ್ಷೆಯಲ್ಲಿ ಹಿಜಾಬ್(Hijab) ಧರಿಸಿ ಬರಲು ಅವಕಾಶವಿಲ್ಲ ಎಂದು ರಾಜ್ಯ(State) ಶಿಕ್ಷಣ ಸಚಿವ(Education Minister) ಬಿ.ಸಿ ನಾಗೇಶ್(BC Nagesh) ತಿಳಿಸಿದ್ದಾರೆ.

ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಸದ್ಯ ನಾವು ಹೈಕೋರ್ಟ್‍ನ ತ್ರಿಸದಸ್ಯರ ನೇತೃತ್ವದ ಸಾಂವಿಧಾನಿಕ ಪೀಠ ನೀಡಿರುವ ತೀರ್ಪನ್ನು ಪಾಲನೆ ಮಾಡಬೇಕಿದೆ. ಹೈಕೋರ್ಟ್ ಹಿಜಾಬ್ ಧರಿಸಿ ಶಾಲೆಗೆ ಬರಲು ಅವಕಾಶ ನೀಡಿಲ್ಲ. ಹೀಗಾಗಿ ಪರೀಕ್ಷೆ ಹಾಜರಾಗಲು ಎಲ್ಲ ವಿದ್ಯಾರ್ಥಿಗಳು ಯಾವುದೇ ಧಾರ್ಮಿಕ ವಸ್ತ್ರವನ್ನು ಧರಿಸದೇ ಹಾಜರಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೈಕೋರ್ಟ್ ಆದೇಶವನ್ನು ಯತಾವತ್ತಾಗಿ ಪಾಲಿಸಲಿದೆ ಎಂದರು.

ಇನ್ನು ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೋರಿ ಸುಪ್ರೀಂಕೋರ್ಟ್‍ಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಹಿಜಾಬ್ ಪ್ರಕರಣದ ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‍ನ ಸಿಜೆಐ ತಿರಸ್ಕರಿಸಿದ್ದಾರೆ. ಹಿಜಾಬ್‍ಗೂ, ಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ. ಈ ಪ್ರಕರಣವನ್ನು ಸೂಕ್ಷ್ಮಗೊಳಿಸಬೇಡಿ ಎಂದು ವಿದ್ಯಾರ್ಥಿನಿಯರ ಪರ ವಕೀಲರಿಗೆ ಮುಖ್ಯನ್ಯಾಯಾಧೀಶರು ಖಾರವಾಗಿ ಪ್ರತಿಕ್ರಿಯಿಸಿದ್ದರು.

ಇನ್ನು ಮಾರ್ಚ್ 28ರ ಸೋಮವಾರದಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಪ್ರಾರಂಭವಾಗಲಿದ್ದು, ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಪರೀಕ್ಷೆಗೆ ಹಾಜರಾಗುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಆದರೆ ರಾಜ್ಯ ಸರ್ಕಾರ ಮಾತ್ರ ಹೈಕೋರ್ಟ್ ಆದೇಶವನ್ನು ನಾವು ಪಾಲನೆ ಮಾಡುತ್ತೇವೆ ಎಂದಿದೆ. ಇನ್ನು ಈ ಪರೀಕ್ಷೆಯಿಂದ ವಂಚಿತರಾದರೇ ಅವರಿಗೆ ಮರಳಿ ಪರೀಕ್ಷೆ ನಡೆಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಈಗಾಗಲೇ ಕಾನೂನು ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಇನ್ನು ಅನೇಕ ಮುಸ್ಲಿಂ ಮುಖಂಡರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಕೇಳಿಕೊಂಡಿದ್ದಾರೆ. ಹೀಗಾಗಿಯೇ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಹಿಜಾಬ್ ವಿಷಯವನ್ನು ಪ್ರಸ್ತಾಪಿಸಿದ್ದರು. ಆದರೆ ಸರ್ಕಾರ ಮಾತ್ರ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ, ಹಿಜಾಬ್‍ಗೆ ಅವಕಾಶ ನೀಡಿದರೆ, ರಾಜ್ಯ ಸರ್ಕಾರ ನ್ಯಾಯಾಂಗ ನಿಂಧನೆಯನ್ನು ಎದುರಿಸಬೇಕಾಗುತ್ತದೆ ಎಂದಿದೆ.

Exit mobile version