Bengaluru: ಕಳೆದ ಕೆಲ ವರ್ಷಗಳಿಂದ ಬೆಂಗಳೂರು (Bengaluru) ಸುತ್ತಮುತ್ತ ಅನಧಿಕೃತ ಲೇಔಟ್ಗಳು ಸದ್ದು ಮಾಡುತ್ತಿವೆ. ಈ ಹಿನ್ನೆಲೆ ಸಾರ್ವಜನಿಕರು ಮೋಸ ಹೋಗಬಾರದು ಎಂದು ಬಿಡಿಎ ಅಂತಹ ಬಡಾವಣೆಗಳ ಹೆಸರನ್ನು ಪಟ್ಟಿ ಮಾಡಿದೆ. ಮಾತ್ರವಲ್ಲದೇ, ನೋಂದಣಿ ಮಾಡಿಕೊಳ್ಳದಂತೆ ಸೂಚನೆಯನ್ನು ಸಹ ನೀಡಿದೆ. ಜನ ಸಾಮಾನ್ಯರಿಗೆ ಬಡಾವಣೆಗಳ ನಿವೇಶನಗಳನ್ನು ನೋಂದಣಿ ಮಾಡದಂತೆ ಸಬ್ ರಿಜಿಸ್ಟ್ರಾರ್ಗೆ (Sub-Register) ಪತ್ರ ಬರೆದಿದೆ. ಅನಧಿಕೃತ ಬಡಾವಣೆಗಳಲ್ಲಿ ಗ್ರಾಹಕರು ದುಬಾರಿ ಬೆಲೆಗೆ ನಿವೇಶನಗಳನ್ನು ಖರೀದಿಸಿ ಮುಂದೆ ಆಗಬಹುದಾದ ಮೋಸವನ್ನು ತಪ್ಪಿಸಲು ಬಿಡಿಎ ಈ ಕ್ರಮ ಕೈಗೊಂಡಿದೆ.
ಬೆಂಗಳೂರಿನ ನಗರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ತಲೆ ಎತ್ತಿರುವ ಅನಧಿಕೃತ ಬಡಾವಣೆಗಳನ್ನು ಗುರುತಿಸಿ ಪಟ್ಟಿ ಸಿದ್ಧಪಡಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ),ಯಲಹಂಕ, ಆನೇಕಲ್ (Yelahanka, Anekal) ಬೆಂಗಳೂರು ದಕ್ಷಿಣ ತಾಲೂಕು ಮತ್ತು ಬೆಂಗಳೂರು ಪೂರ್ವ ತಾಲೂಕು ವಲಯಗಳಲ್ಲಿನ ನೂರಾರು ಸರ್ವೆ ನಂಬರ್ಗಳಲ್ಲಿ ಲೇಔಟ್ (Layout) ರಚನೆಗೆ ಯಾವುದೇ ರೀತಿ ಅನುಮೋದನೆ ನೀಡಿಲ್ಲ.
ಹೀಗಿದ್ದರೂ ಕೆಲವು ಬಿಲ್ಡರ್ಗಳು ಕಾನೂನು ಉಲ್ಲಂಘಿಘಿಸಿ ಅಕ್ರಮವಾಗಿ ಬಡಾವಣೆಗಳನ್ನು ನಿರ್ಮಿಸಿದ್ದಾರೆ ಎಂಬುದಾಗಿ ಮಾಹಿತಿ ನೀಡಿದೆ. ಪರಿಷ್ಕೃತ ಮಾಸ್ಟರ್ ಪ್ಲಾನ್ ಪ್ರಕಾರ (RMP-2015), ಭೂ ಉಪಯೋಗದ ಉದ್ದೇಶವನ್ನು ಬಡಾವಣೆ ನಿರ್ಮಾಣ ಎಂದು ಪರಿವರ್ತನೆ ಮಾಡಿಸಿಕೊಳ್ಳದೆ ಬೃಹತ್ ಬಡಾವಣೆಗಳನ್ನು ನಿರ್ಮಿಸಲಾಗುತ್ತಿದೆ. ಲೇಔಟ್ ಮಾಡಿ ಮಾರಾಟ ಮಾಡಲಾಗುತ್ತಿದೆ.ಅದನ್ನು ಖರೀದಿಸಲು ಕೂಡಾ ಜನ ಆಸಕ್ತಿ ತೋರಿಸುತ್ತಿದ್ದಾರೆ.
ಈಗಾಗಲೇ ಅನಧಿಕೃತ ಬಡಾವಣೆ (Unauthorized layouts) ಗಳಲ್ಲಿ ಸುಮಾರು 27 ಸಾವಿರಕ್ಕೂ ಹೆಚ್ಚು ನಿವೇಶನಗಳಿವೆ. ಈ ಬಡಾವಣೆಗಳು ನಿರ್ಮಾಣವಾಗಿರುವ ಪ್ರದೇಶವನ್ನು ವ್ಯವಸಾಯ, ಕೈಗಾರಿಕೆ, ಸಾರಿಗೆ ಸಂಪರ್ಕ, ವಾಣಿಜ್ಯ, ಕಣಿವೆ ಬಫರ್ ಝೋನ್, ಅರಣ್ಯ ವಲಯ ವಾಗಿದ್ದು ಇದನ್ನು ಲೇಔಟ್ ಮಾಡಲು ಯಾವುದೇ ಅನುಮತಿ ಪಡೆದಿಲ್ಲ. ಮುಂದಿನ ದಿನಗಳಲ್ಲಿ ಏನೇ ತೊಂದರೆ ಅನುಭವಿಸುವ ಮುನ್ನ ಜಾಗದ ಕುರಿತಾಗಿ ಎಲ್ಲ ಮಾಹಿತಿ ಪಡೆಯುವುದು ಒಳ್ಳೆಯದು ಎಂದು ಬಿಡಿಎ (BDA) ತಿಳಿಸಿದೆ.