ರೌಡಿಸಂ ತೋರಿಸಿ ಏನ್ ಸಾಧಿಸ್ತೀರಿ, ಅದು ಕನ್ನಡದ ಹೆಮ್ಮೆಯಲ್ಲ : ಭಾಸ್ಕರ್ ರಾವ್ !

yash

‘ರೌಡಿಸಂ’ ಆಧಾರಿತ ಸಿನಿಮಾಗಳನ್ನು ನಾನು ಎಂದಿಗೂ ಒಪ್ಪುವುದಿಲ್ಲ. ಕೆಲ ರಾಜಕಾರಣಿಗಳು ರೌಡಿಸಂ ಕಥಾಹಂದರವಿರುವ ಸಿನಿಮಾಗಳನ್ನು ಚೆನ್ನಾಗಿವೆ ಎಂದು ಹೊಗಳುತ್ತಾರೆ. ನಾನೆಂದಿಗೂ ರೌಡಿಸಂ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ. ಅದರಿಂದ ಏನೂ ಪ್ರಯೋಜನವಿಲ್ಲ ಎಂದು ಮಾಜಿ ಐಪಿಎಸ್ ಅಧಿಕಾರಿ(IPS Officer) ಮತ್ತು ಎಎಪಿ ನಾಯಕ(AAP Leader) ಭಾಸ್ಕರ್‍ರಾವ್(Bhaskar Rao) ಪರೋಕ್ಷವಾಗಿ ಕೆ.ಜಿ.ಎಫ್(KGF 2) ಚಿತ್ರಕ್ಕೆ ಟಾಂಗ್ ನೀಡಿದ್ದಾರೆ.

ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ರೌಡಿಸಂ ಆಧಾರಿತ ಸಿನಿಮಾಗಳಿಂದ ಏನು ಸಾಧಿಸಲು ಸಾಧ್ಯ? ವಿಚಿತ್ರವಾಗಿ ಗಡ್ಡ ಬಿಟ್ಟು, ಕ್ರೂರವಾಗಿ ವರ್ತಿಸುವ, ದೇಹವನ್ನು ತೋರಿಸುವ ಸಿನಿಮಾಗಳು ಕನ್ನಡದ ಹೆಮ್ಮೆಯಲ್ಲ. ಉತ್ತಮ ಸಾಧಕರ ಕತೆಗಳನ್ನು ಸಿನಿಮಾ ಮಾಡಬೇಕು. ಕರ್ನಾಟಕದಲ್ಲಿ ಅಸಂಖ್ಯಾತ ಸಾಧಕರಿದ್ದಾರೆ. ಅನೇಕ ಬಡಮಕ್ಕಳು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಅನೇಕರು ಅದ್ಭುತವಾದ ಸಾಧನೆಗಳನ್ನು ಮಾಡಿದ್ದಾರೆ. ವಿದೇಶಗಳಲ್ಲೂ ಕನ್ನಡಿಗರು ಜಗತ್ತು ಮೆಚ್ಚುವಂತ ಸಾಧನೆಗಳನ್ನು ಮಾಡಿದ್ದಾರೆ. ಅವರ ಸಾಧನೆಗಳನ್ನು ಸಿನಿಮಾ ಮಾಡಬೇಕು.

ಅದೆಲ್ಲವನ್ನೂ ಬಿಟ್ಟು, ರೌಡಿಸಂ ಆಧಾರಿತ ಕತೆಗಳನ್ನು ಸಿನಿಮಾ ಮಾಡಲಾಗುತ್ತಿದೆ. ಅದರಿಂದ ಯುವಜನತೆ ದಾರಿ ತಪ್ಪುತ್ತಿದ್ದಾರೆ. ಹೀರೋಯಿಸಂ ಮತ್ತು ರೌಡಿಸಂನಿಂದ ಏನೂ ಸಾಧಿಸಲು ಸಾಧ್ಯವಿಲ್ಲ. ನೋಡುಗರಿಗೆ ಒಂದು ಒಳ್ಳೆಯ ಸಂದೇಶವನ್ನು ನೀಡುವುದು ಮುಖ್ಯವಾಗುತ್ತದೆ ಎಂದರು. ಇನ್ನು ಇತ್ತೀಚೆಗೆ ಮಲೆಯಾಳಿ ಮತ್ತು ತಮಿಳು ಸಿನಿಮಾಗಳಲ್ಲಿ ಸಾಮಾಜಿಕ ಘಟನೆಯಾಧಾರಿತ ಕಥೆಗಳನ್ನೇ ಸಿನಿಮಾ ಮಾಡಲಾಗುತ್ತಿದೆ. ಇದರಿಂದ ಯುವಜನತೆಗೆ ಒಂದೊಳ್ಳೆ ಸಂದೇಶ ಸಿಗುತ್ತದೆ. ಯುವಜನತೆಗೆ ಏನನ್ನಾದರೂ ಸಾಧಿಸಲು ಪ್ರೇರಣೆ ಸಿಗುತ್ತದೆ.

ಅದನ್ನೆಲ್ಲಾ ಬಿಟ್ಟು ರೌಡಿಸಂ ಆಧಾರಿತ ಸಿನಿಮಾಗಳನ್ನು ಮಾಡಿದರೆ ಸಮಾಜದಲ್ಲಿ ಕ್ರೈಮ್‍ರೇಟ್ ಹೆಚ್ಚಾಗುತ್ತದೆ. ಯುವಜನರು ದಾರಿ ತಪ್ಪುತ್ತಾರೆ. ದಂಡುಪಾಳ್ಯ ಸಿನಿಮಾ ನೋಡಿ ಕೆಲ ಹಂತಕರು ಕತ್ತು ಕೊಯ್ಯುವುದನ್ನು ಅನೇಕರ ಮೇಲೆ ಪ್ರಯೋಗ ಮಾಡಿದ್ದನ್ನು ನಾನು ಕಂಡಿದ್ದೇನೆ. ಆ ರೀತಿಯ ಸಿನಿಮಾಗಳನ್ನು ಜನರು ಒಪ್ಪಿಕೊಳ್ಳಬಾರದು. ಪೋಲಿಸ್ ಅಧಿಕಾರಿಯಾಗಿದ್ದ ಅವಧಿಯಲ್ಲಿ ನಾನು ಗಮನಿಸಿರುವ ಪ್ರಮುಖ ಸಂಗತಿಯೆಂದರೆ, ರೌಡಿಸಂ ಆಧಾರಿತ ಸಿನಿಮಾಗಳಿಂದ ಯುವಜನತೆ ದಾರಿ ತಪ್ಪುತ್ತಾರೆ ಎಂಬುದನ್ನು ನಾನು ಗಮನಿಸಿದ್ದೇನೆ ಎಂದರು.

Exit mobile version