ಗೋವಾ ಫಲಿತಾಂಶ ; ಎಂಜಿಪಿ ಮೇಲೆ ಕಾಂಗ್ರೆಸ್-ಬಿಜೆಪಿ ಕಣ್ಣು!

Uttarpradesh

ಗೋವಾ ವಿಧಾನಸಭಾ ಚುನಾವಣೆಯ ಮತಎಣಿಕೆ ಆರಂಭವಾಗಿದ್ದು, ಬಿಜೆಪಿ ಅಲ್ಪ ಮುನ್ನಡೆಯಲ್ಲಿದೆ. ಆದರೆ ಕಾಂಗ್ರೆಸ್-ಬಿಜೆಪಿ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಹೀಗಾಗಿ ಗೋವಾ ವಿಧಾನಸಭೆಯಲ್ಲಿ ಅತಂತ್ರ ಫಲಿತಾಂಶ ಬರುವ ಸೂಚನೆಗಳು ಲಭ್ಯವಾಗುತ್ತಿವೆ. ಈ ಹಿಂದೆ ಕೆಲ ಸಮೀಕ್ಷೆಗಳು ಕೂಡಾ ಗೋವಾದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ ಎಂದೇ ಭವಿಷ್ಯ ನುಡಿದಿದ್ದವು. ಹೀಗಾಗಿಯೇ ಕಾಂಗ್ರೆಸ್ ಮತ್ತು ಬಿಜೆಪಿ ಗೋವಾದಲ್ಲಿ ಪ್ರಾದೇಶಿಕ ಮತ್ತು ಪಕ್ಷೇತರ ಶಾಸಕರೊಂದಿಗೆ ಮೈತ್ರಿಮಾಡಿಕೊಳ್ಳಲು ಕಸರತ್ತು ನಡೆಸಿವೆ.

ಗೋವಾದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸೂಚನೆ ಸಿಗುತ್ತಿದ್ದಂತೆ ಈಗಾಗಲೇ ಎರಡು ಪಕ್ಷಗಳ ರಾಷ್ಟ್ರೀಯ ವೀಕ್ಷಕರು ಮೈತ್ರಿ ಲೆಕ್ಕಾಚಾರದ ತಂತ್ರ ಹೆಣೆಯುತ್ತಿದ್ದಾರೆ. ಈಗ ಎರಡು ಪಕ್ಷಗಳು ಗೋವಾದ ಅತ್ಯಂತ ಹಳೆಯ ಪ್ರಾದೇಶಿಕ ಶಕ್ತಿಯಾದ ‘ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ’ (ಎಂಜಿಪಿ)ದೊಂದಿಗೆ ಮೈತ್ರಿ ಮಾಡಿಕೊಳ್ಳಲು ಭಾರೀ ರಣತಂತ್ರ ಹೆಣೆಯುತ್ತಿವೆ. ಗೋವಾದಲ್ಲಿ ಬಿಜೆಪಿ ಉಸ್ತುವಾರಿಯಾಗಿರುವ ದೇವೇಂದ್ರ ಫಡ್ನವೀಸ್ “ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ, ನಮ್ಮ ನೈಸರ್ಗಿಕ ಮಿತ್ರ. ನಮಗೆ ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತ ದೊರೆಯದಿದ್ದರೆ, ನಾವು ಅವರೊಂದಿಗೆ ಮೈತ್ರಿಗೆ ಸಿದ್ದರಿದ್ದೇವೆ” ಎಂದಿದ್ದಾರೆ.


ಇನ್ನೊಂದೆಡೆ ಕಾಂಗ್ರೆಸ್ ಪಕ್ಷ ಕೂಡಾ ಎಂಜಿಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ. ಗೋವಾದಲ್ಲಿ ಕಾಂಗ್ರೆಸ್ ಚುನಾವಣಾ ವೀಕ್ಷಕರಾಗಿರುವ ದಿನೇಶ್ ಗುಂಡೂರಾವ್, “ಚುನಾವಣೆಯ ಪೂರ್ವದಿಂದಲೂ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ, ನಮ್ಮೊಂದಿಗೆ ಸಂಪರ್ಕದಲ್ಲಿದೆ. ಹೀಗಾಗಿ ಅತಂತ್ರ ವಿಧಾನಸಭೆ ನಿರ್ಮಾಣವಾದರೆ, ಅವರೊಂದಿಗೆ ನಾವು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುತ್ತೇವೆ” ಎಂದಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಗೋವಾದ ಪ್ರಾದೇಶಿಕ ಶಕ್ತಿಯಾದ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದೊಂದಿಗೆ ಮೈತ್ರಿಗೆ ಪೈಪೋಟಿ ನಡೆಸಿದ್ದಾರೆ. ಆದರೆ ಎಂಜಿಪಿ ಮಾತ್ರ ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ. ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದೆ. ಎಂಜಿಪಿ ಗೋವಾದಲ್ಲಿ ‘ಕಿಂಗ್ ಮೇಕರ್’ ಆಗುವ ಸಾಧ್ಯತೆ ಇದೆ. ಹೀಗಾಗಿಯೇ ತನ್ನ ನಿಲುವನ್ನು ಇದುವರೆಗೂ ಬಿಟ್ಟುಕೊಟ್ಟಿಲ್ಲ. ಆದರೆ ಎರಡು ರಾಷ್ಟ್ರೀಯ ಪಕ್ಷಗಳು ಮಾತ್ರ ಮೈತ್ರಿಗೆ ತೀವ್ರ ಪ್ರಯತ್ನ ನಡೆಸಿವೆ.

Exit mobile version