ದೂರದೃಷ್ಟಿ, ಹಣಕಾಸಿನ ಬಲವಿಲ್ಲದ ಜನರನ್ನು ವಂಚಿಸುವ ಬಜೆಟ್: ಮಾಜಿ ಸಚಿವ ಮಹದೇವಪ್ಪ ಟೀಕೆ

ಮೈಸೂರು, ಮಾ. 09: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದ ರಾಜ್ಯ ಬಜೆಟ್, ದೂರದೃಷ್ಟಿ ಇಲ್ಲದ, ಹಣಕಾಸಿನ ಬಲವಿಲ್ಲದೇ ಹಾಗೂ ಜನರನ್ನು ವಂಚಿಸುವ ಬಜೆಟ್ ಎಂದು ಮಾಜಿ ಸಚಿವ ‌ಡಾ.ಎಚ್.ಸಿ. ಮಹದೇವಪ್ಪ ಟೀಕಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯ ಸರ್ಕಾರವು 2021ನೇ ಸಾಲಿನ ತನ್ನ ಬಜೆಟ್ ಅನ್ನು ಮಂಡಿಸಿದ್ದು ರಾಜ್ಯವನ್ನು ಮತ್ತಷ್ಟು ಸಾಲದ ಸುಳಿಗೆ ಸಿಲುಕಿಸಿ ಜನರಿಂದ ಬೆಲೆ ಏರಿಕೆ ಮೂಲಕ ಮತ್ತಷ್ಟು ತೆರಿಗೆ ವಸೂಲಿ ಮಾಡುತ್ತೇವೆ ಎಂಬ ಸಂದೇಶವನ್ನು ನೀಡಿದೆ. ಅಲ್ಲದೆ, ಈಗಾಗಲೇ ಇರುವ ವೆಚ್ಚದ ಪ್ರಮಾಣವು ಹೆಚ್ಚಾಗಿದ್ದರೂ ಕೂಡಾ ಜಾತಿ ಸಮೂಹಗಳನ್ನು ತೃಪ್ತಿಪಡಿಸಲು ಬೇಕಾಬಿಟ್ಟಿ ಅನುದಾನವನ್ನು ಮಂಜೂರು ಮಾಡುವ ಮೂಲಕ ಹಣಕಾಸಿನ ಶಕ್ತಿ ಇಲ್ಲದಿದ್ದರೂ ಕೂಡಾ ತನ್ನ ಭಂಡತನವನ್ನು ಪ್ರದರ್ಶಿಸಿದೆ ಎಂದು ಕಿಡಿಕಾರಿದರು.

ಇನ್ನೂ, SCP/ STP ಹಣವನ್ನು ಕಡಿತಗೊಳಿಸಿರುವ ಬಿಜೆಪಿ ಸರ್ಕಾರವು ತನ್ನ ಬಳಿ ಹಣಕಾಸು ಬಲ ಇಲ್ಲದಿದ್ದರೂ ಕೂಡಾ ಬಾಹ್ಯ ಹೂಡಿಕೆ ನೀತಿಯ ಮೂಲಕ ಆದಾಯ ಸಂಗ್ರಹಣೆ ಮಾಡದೇ ಮತ್ತೆ ಬಜೆಟ್‌ನಲ್ಲಿ ವೆಚ್ಚವನ್ನೇ ಪ್ರಧಾನವಾಗಿಸಿಕೊಂಡಿದ್ದು ಎಲ್ಲವನ್ನೂ ಒಳಗೊಳ್ಳುವಂತಹ ಅಭಿವೃದ್ಧಿಯ ಕಲ್ಪನೆಗೆ ಎಳ್ಳು ನೀರು ಬಿಟ್ಟಿದೆ. ಇನ್ನು ದರ ಏರಿಕೆಯ ದುಷ್ಪರಿಣಾಮ ಗೊತ್ತಿದ್ದರೂ ಬೆಲೆ ಇಳಿಕೆ ಬಗ್ಗೆ ಮಾತನಾಡದ ಸರ್ಕಾರ ಬಜೆಟ್ ಗಾತ್ರ 2 ಲಕ್ಷ ಕೋಟಿಯಿದ್ದರೂ ಸಾಲ ಮಾಡುವುದಕ್ಕಾಗಿಯೇ 4 ಲಕ್ಷ ಕೋಟಿಗೂ ಅಧಿಕ ಗಾತ್ರದ ಬಜೆಟ್ ಮೂಲಕ ರಾಜ್ಯವನ್ನು ಸಾಲದ ಸುಳಿಗೆ ನೂಕಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಈಗಾಗಲೇ ಕರೋನಾ ಹಾಗೂ ಅಗತ್ಯ ವಸ್ತುಗಳಾದ ತೈಲ ಮತ್ತು ಅಡುಗೆ ಅನಿಲ ಹಾಗೂ ಇನ್ನಿತರೆ ವಸ್ತುಗಳ ಬೆಲೆ ಇಳಿಕೆ ಪ್ರಸ್ತಾಪವೇ ಮಾಡದೇ ಮಂಡಿಸಲಾದ ಈ ಬಜೆಟ್ ವರ್ಣಮಯವಾಗಿ ಕಂಡರೂ ಇದರಲ್ಲಿ ಜನರಿಗೆ ಸಹಾಯ ಆಗುವಂತಹ ಯಾವುದೇ ಹೂರಣ ಇಲ್ಲ. ಕಾರಣ ಬಿಜೆಪಿ ಸರ್ಕಾರದ ಬಳಿ ಈ ಬಜೆಟ್ ಅನ್ನು ಸಾಕಾರಗೊಳಿಸುವಷ್ಟು ಹಣಕಾಸಿನ ಬಲವೇ ಇಲ್ಲ. ಈ ಹಿನ್ನೆಲೆಯಲ್ಲಿ ಇಂದಿನ ಬಜೆಟ್, ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ 20 ಲಕ್ಷ ಕೋಟಿ ಕೋವಿಡ್ ಪ್ಯಾಕೇಜ್ ಬಾಯಿ ಮಾತಲ್ಲೇ ಬಂದು ಹೋದ ಹಾಗೆ ಯಾವುದೇ ದೂರದೃಷ್ಟಿ ಇಲ್ಲದ ಮತ್ತು ಹಣಕಾಸಿನ ಬಲವೇ ಇಲ್ಲದೇ ಜನರನ್ನು ವಂಚಿಸುವ ಬಜೆಟ್ ಅಷ್ಟೇ ಎಂದಿದ್ದಾರೆ.

Exit mobile version