New Delhi: ಇತ್ತೀಚಿಗಷ್ಟೆ ನಡೆದ ಸಂದರ್ಶನ ಒಂದರಲ್ಲಿ ಪ್ರಧಾನಿ ಮೋದಿ (Modi) ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದವನ್ನು ತುರ್ತಾಗಿ ಪರಿಹರಿಸುವ ಅಗತ್ಯತೆಯ ಬಗ್ಗೆ ಮಾತನಾಡಿದ್ದಾರೆ. ಭಾರತಕ್ಕೆ, ಚೀನಾದೊಂದಿಗಿನ ಸಂಬಂಧವು ಅನಿವಾರ್ಯದ್ದಾಗಿದೆ ಮತ್ತು ಮಹತ್ವದ್ದಾಗಿದೆ.
ಉಭಯ ದೇಶಗಳ ಗಡಿಯಲ್ಲಿನ ದೀರ್ಘಕಾಲದ ಪರಿಸ್ಥಿತಿಯನ್ನು ತುರ್ತಾಗಿ ಪರಿಹರಿಸಬೇಕಾಗಿದೆ. ಇದರಿಂದಾಗಿ ನಮ್ಮ ದ್ವಿಪಕ್ಷೀಯ ಮಾತುಕತೆಗಳಲ್ಲಿನ ಆತಂಕಗಳನ್ನು ತೊಡೆದುಹಾಕಬಹುದು ಹಾಗೂ ದೇಶದ ಜನತೆ ನೆಮ್ಮದಿಯಿಂದ ಜೀವಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಜೂನ್ 2020 ರಲ್ಲಿ ಗಾಲ್ವಾನ್ ಕಣಿವೆಯಲ್ಲಿ (Galvan Valley) ನಡೆದ ಘರ್ಷಣೆಯ ನಂತರ ಪೂರ್ವ ಲಡಾಖ್ನ ಕೆಲವು ಘರ್ಷಣೆಯ ಸ್ಥಳಗಳಲ್ಲಿ ಸುಮಾರು ನಾಲ್ಕು ವರ್ಷಗಳಿಂದ ಭಾರತ ಮತ್ತು ಚೀನಾ ನಡುವೆ ಗಡಿ ವಿವಾದ ಇದೆ. ಭಾರತ ಮತ್ತು ಚೀನಾ (India And China) ನಡುವಿನ ಸ್ಥಿರ ಮತ್ತು ಶಾಂತಿಯುತ ಸಂಬಂಧಗಳು ಕೇವಲ ನಮ್ಮ ಎರಡು ದೇಶಗಳಿಗೆ ಮಾತ್ರವಲ್ಲದೆ ಜಗತ್ತಿಗೆ ಮುಖ್ಯವಾಗಿದೆ ಹಾಗಾಗಿ ಭಾರತಕ್ಕೆ ಚೀನಾದೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಅಗತ್ಯತೆಯಿದೆ ಎಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ್ದಾರೆ.
ಇನ್ನು ಲೋಕಸಭಾ ಚುನಾವಣೆಯ (Loksabha Election) ಹಿನ್ನೆಲೆ ಇತರ ಪಕ್ಷಗಳ ನಾಯಕರ ಅಲ್ಪ ಸಂಖ್ಯಾತರ ಬಗ್ಗೆ ತಾರತಮ್ಯದ ಆರೋಪಗಳನ್ನು ಅವರು ತಳ್ಳಿಹಾಕಿದ್ದಾರೆ. ಮುಸ್ಲಿಮರು, ಕ್ರಿಶ್ಚಿಯನ್ನರು (Muslims, Christians), ಬೌದ್ಧರು, ಸಿಖ್ಖರು, ಜೈನರು ಮತ್ತು ಪಾರ್ಸಿಗಳಂತಹ ಅಲ್ಪಸಂಖ್ಯಾತರು ಭಾರತದಲ್ಲಿ ಸಂತೋಷದಿಂದ ಇದ್ದಾರೆ ಮತ್ತು ಅಭಿವೃದ್ಧಿ ಹೊಂದುತ್ತಿದ್ದಾರೆ ಎಂದು ಹೇಳಿದ್ದಾರೆ.ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದಲ್ಲಿ ಧನಾತ್ಮಕ ಮತ್ತು ರಚನಾತ್ಮಕ ದ್ವಿಪಕ್ಷೀಯ ನೀತಿಯ ಮೂಲಕ, ನಾವು ನಮ್ಮ ಗಡಿಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಪುನಃಸ್ಥಾಪಿಸಲು ಶ್ರಮಿಸುತ್ತಿದ್ದೇವೆ ಎಂದಿದ್ದಾರೆ.