ಲಸಿಕೆ ಪಡೆಯುವ ಮಕ್ಕಳಿಗೆ ಒಂದು ದಿನ ರಜೆ

ಬೆಂಗಳೂರು, ಜ 03 : ಒಮಿಕ್ರಾನ್‌ ಮತ್ತು ಕೊರೊನಾ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಭಾರತದಾದ್ಯಂತ ಇಂದಿನಿಂದ 15 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಅಭಿಯಾನ ನಡೆಯುತ್ತಿದೆ. ರಾಜ್ಯದಲ್ಲಿಯೂ ಮಕ್ಕಳಿಗೆ ಕೊರೊನಾ ಲಸಿಕೆಯನ್ನು ನೀಡಲಾಗುತ್ತದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬೆಂಗಳೂರಿನ ಮೂಡಲಪಾಳ್ಯದ ಬಿಬಿಎಂಪಿ ಶಾಲೆಯಲ್ಲಿ ಕೊರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ್ದು, ಲಸಿಕೆ ಪಡೆದ ಮಕ್ಕಳಿಗೆ ಒಂದು ದಿನದ ರಜೆಯನ್ನು ನೀಡಲು ರಾಜ್ಯ ಸರಕಾರ ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ

ಕರ್ನಾಟಕದಲ್ಲಿ 15 ರಿಂದ 18 ವರ್ಷ ವಯೋಮಿತಿಯ ಸುಮಾರು 31.75 ಲಕ್ಷ ಮಕ್ಕಳಿದ್ದು, ಎಲ್ಲರೂ ಕೂಡ ಕೊರೊನಾ ಲಸಿಕೆ ಪಡೆಯಲು ಅರ್ಹತೆ ಪಡೆದಿದ್ದಾರೆ. ರಾಜ್ಯದಲ್ಲಿ ಸದ್ಯ 16 ಲಕ್ಷ ಕೋವ್ಯಾಕ್ಸಿನ್ ಡೋಸ್ ಲಭ್ಯವಿದೆ. ಲಸಿಕೆ ಅಭಿಯಾನದ ಮೊದಲ ದಿನ ಸುಮಾರು 6ಲಕ್ಷ ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆಯನ್ನು ನೀಡಲು ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ರಾಜ್ಯದಲ್ಲಿನ ಶಾಲೆ ಹಾಗೂ ಕಾಲೇಜು ಮಟ್ಟದಲ್ಲಿ ಲಸಿಕೆ ಅಭಿಯಾನ ನಡೆಯಲಿದೆ ಎಂದು ರಾಜ್ಯ ಸರಕಾರ ಹೇಳಿದೆ.

ರಾಜ್ಯದಲ್ಲಿನ ಪ್ರತಿ ಶಾಲೆಯಲ್ಲಿಯೂ ವಿದ್ಯಾರ್ಥಿಗಳಿಗೆ ಲಸಿಕೆಯನ್ನು ನೀಡಲಾಗುತ್ತದೆ. ಮೊದಲ ದಿನ 50 ವಿದ್ಯಾರ್ಥಿಗಳಿಗೆ ಮಾತ್ರವೇ ಲಸಿಕೆ ನೀಡಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಕೊಡೊನಾ ಲಸಿಕೆ ನೀಡುವ ವೇಳೆಯಲ್ಲಿ ಶಾಲೆಯ ಬಳಿಯಲ್ಲಿ ಅಂಬ್ಯುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಒಂದೊಮ್ಮೆ ಅನಾರೋಗ್ಯ ಸಮಸ್ಯೆ ಕಂಡು ಬಂದ್ರೆ ಕೂಡಲೇ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಲಸಿಕೆ ಹಾಕಿಸಿಕೊಂಡ ಮಕ್ಕಳು ಒಂದು ದಿನಗಳ ಕಾಲ ರಜೆಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಮಕ್ಕಳಿಗೆ ಕೊರೊನಾ ಲಸಿಕೆಯನ್ನು ನೀಡುವ ಮೊದಲು ಪೋಷಕರಿಗೆ ಮಾಹಿತಿ ನೀಡುವಂತೆ ಸರಕಾರ ಹೇಳಿದೆ. ಈ ಹಿನ್ನೆಲೆಯಲ್ಲಿಂದು ಪ್ರತೀ ಶಾಲೆಯಲ್ಲಿಯೂ ಪೋಷಕರ ಸಭೆ ನಡೆಯಲಿದೆ. ಮಕ್ಕಳು ಲಸಿಕೆಯನ್ನು ಪಡೆಯಲು ನೋಂದಣಿ ಮಾಡಿಸುವುದು ಕಡ್ಡಾಯವಲ್ಯ ಐಡಿ ಕಾರ್ಡ್ ತೋರಿಸಿ ಸ್ಥಳದಲ್ಲಿಯೇ ಲಸಿಕೆಯನ್ನು ಹಾಕಿಸಿಕೊಳ್ಳಬಹುದಾಗಿದೆ ಎಂದು ಬೆಂಗಳೂರು ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್ ಅವರು ಸ್ಪಷ್ಟಪಡಿಸಿದ್ದಾರೆ.

Exit mobile version