ಆಟೋ ಡ್ರೈವರ್‌ʼಅಘಾಡಿ ಸಕಾರʼ ಉರುಳಿಸಿದ ಕಥೆ

CM

ಏಕನಾಥ್‌ ಶಿಂಧೆ(Eknath Shinde), ಮಹಾರಾಷ್ಟ್ರದ ರಾಜಕೀಯದಲ್ಲಿ(Maharashtra Politics) ಸದ್ಯ ಸುದ್ದಿಯಲ್ಲಿರುವ ವಿಶಿಷ್ಟ ವ್ಯಕ್ತಿತ್ವದ ವ್ಯಕ್ತಿ. ಸಂಘಟನೆ, ಹೋರಾಟ, ಹಿಂದುತ್ವದ ಮೂಲಕ ತನ್ನದೇ ಆದ ರಾಜಕೀಯ(Political) ನೆಲೆ ಸ್ಥಾಪಿಸಿಕೊಂಡ ಸಾಮಾನ್ಯ ಆಟೋ ಡ್ರೈವರ್. ಮಹಾರಾಷ್ಟ್ರದ ಠಾಣೆ ವ್ಯಾಪ್ತಿಯಲ್ಲಿ ಏಕನಾಥ್ ಅವರೇ ಶಿವಸೇನೆಯ ಅಸಲಿ ನಾಯಕ. ದಶಕಗಳಿಂದಲೂ ಈ ಭಾಗದಲ್ಲಿ ಏಕನಾಥ್‌ ಏಕಚಕ್ರಾಧಿಪತ್ಯ ಹೊಂದಿದ್ದಾರೆ. ಬಾಳಾ ಸಾಹೇಬ್‌ ಠಾಕ್ರೆಯ(Bala Saheb Thackrey) ಬಲಗೈ ಬಂಟನಾಗಿ ಈತ ಬೆಳೆದದ್ದು, ರೋಚಕ ಇತಿಹಾಸ.


ಏಕನಾಥ ಶಿಂಧೆ ಅವರಿಗೇನೂ ರಾಜಕೀಯ ಕೌಟುಂಬಿಕ ಹಿನ್ನೆಲೆ ಇಲ್ಲ. ಈತ ಹುಟ್ಟಿದು, ಸಾತಾರಾ ಜಿಲ್ಲೆಯ ಜವಳಿ ಗ್ರಾಮದ ಮರಾಠ ಕುಟುಂಬದಲ್ಲಿ. ಹೊಟ್ಟೆ ಪಾಡಿಗಾಗಿ ಅವರ ಕುಟುಂಬ ಠಾಣೆಗೆ ಸ್ಥಳಾಂತರವಾಯಿತು. ಕುಟುಂಬಕ್ಕಾಗಿ ತಮ್ಮ ಶಿಕ್ಷಣವನ್ನು ತೊರೆದು, ದಿನಗೂಲಿ ಕೆಲಸಗಳನ್ನು ಮಾಡುತ್ತಾ, ಆಟೊರಿಕ್ಷಾ ಚಾಲಕರಾದರು. ಇದೇ ವೇಳೆ ೧೯೮೦ರ ದಶಕದಲ್ಲಿ ತಮ್ಮ ೧೮ನೇ ವಯಸ್ಸಿನಲ್ಲಿಯೇ ಶಿವಸೇನೆ(Shivsena) ಸೇರಿದರು. ಆ ವೇಳೆಗಾಗಲೇ ಮಹಾರಾಷ್ಟ್ರದಲ್ಲಿ ಶಿವಸೇನೆಯ ನಾಯಕರಾಗಿ ಹೆಚ್ಚು ಪ್ರಖ್ಯಾತಿ ಗಳಿಸಿದ್ದ ಆನಂದ್‌ ದಿಘೆ ಅವರ ಗರಡಿಯಲ್ಲಿ ಸಂಘಟನೆ ಮತ್ತು ಹೋರಾಟದ ಪಾಠಗಳನ್ನು ಕಲಿತರು.

ಕಠಿಣ ಪರಿಶ್ರಮ ಮತ್ತು ಹಿಂದುತ್ವದ ಪ್ರಖರ ಮಾತುಗಾರಿಕೆಯಿಂದ ಬಾಳಾಸಾಹೇಬ್‌ ಠಾಕ್ರೆ ಕಣ್ಣಿಗೂ ಬಿದ್ದರು. ಮುಂದೆ ಮಹಾರಾಷ್ಟ್ರದ ರಾಜಕೀಯದಲ್ಲಿ ಬಾಳಾಸಾಹೇಬ್‌ ಠಾಕ್ರೆ ಅವರ ಕಟ್ಟರ್‌ ಬೆಂಬಲಿಗನಾಗಿ ಏಕನಾಥ ಶಿಂಧೆ ರಾಜಕೀಯ ಪ್ರವೇಶಿಸಿದರು. 1997ರಲ್ಲಿ ಮಹಾರಾಷ್ಟ್ರದ ಠಾಣೆ ಮುನ್ಸಿಪಲ್‌ ಕಾರ್ಪೊರೇಷನ್‌ಗೆ ಆಯ್ಕೆಯಾಗುವ ಮೂಲಕ ತಮ್ಮ ರಾಜಕೀಯ ಪಯಣ ಪ್ರಾರಂಭಿಸಿದರು. ನಂತರ ೨೦೦೪ರಲ್ಲಿ ಕೋಪರಿ-ಪಾಚಪಾಖಾಡಿಧಿ ವಿಧಾನಸಭಾ ಕ್ಷೇತ್ರದಿಂದ ಶಿವಸೇನೆಯಿಂದ ಸ್ಪರ್ಧಿಸಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದರು.

ಆ ಬಳಿಕ ಸತತವಾಗಿ 2009, 2014 ಮತ್ತು 2019ರಲ್ಲಿ ಶಾಸಕರಾಗಿ ಆಯ್ಕೆಯಾದರು. 2014ರಲ್ಲಿ ಮಹಾರಾಷ್ಟ್ರ ವಿಧಾನಸಭೆಯ ಪ್ರತಿಪಕ್ಷ ನಾಯಕ ಹುದ್ದೆಗೇರಿದರು. ಮುಂದೆ ಶಿವಸೇನೆ-ಬಿಜೆಪಿ ಸರಕಾರದಲ್ಲಿ ಲೋಕೋಪಯೋಗಿ ಸಚಿವರಾದರು. ಹೀಗೆ ತಮ್ಮ ಪ್ರತಿಭೆ ಮೂಲಕ ಒಂದೊಂದೆ ಮೆಟ್ಟಿಲುಗಳನ್ನು ಏರುತ್ತಾ ಇದೀಗ ಮುಖ್ಯಮಂತ್ರಿ ಗದಿಗೇರಿದ್ದಾರೆ. ಉದ್ದವ್‌ ಠಾಕ್ರೆ(Uddhav Thackrey) ನೇತೃತ್ವದ ಶಿವಸೇನೆ, ಕಾಂಗ್ರೆಸ್‌(Congress) ಮತ್ತು ಎನ್‌ಸಿಪಿಯೊಂದಿಗೆ(NCP) ಸೇರಿ ಸರ್ಕಾರ ರಚಿಸಿದ್ದು, ಏಕನಾಥ್‌ ಶಿಂಧೆಗೆ ತೃಪ್ತಿ ನೀಡಲಿಲ್ಲ.

ಮಹಾರಾಷ್ಟ್ರ ಸರ್ಕಾರ ಹಿಂದುತ್ವದ ವಿಚಾರದಲ್ಲಿ ತೆಗೆದುಕೊಂಡ ನಿಲುವುಗಳು ಶಿಂಧೆ ಅಸಮಾಧಾನಕ್ಕೆ ಕಾರಣವಾದವು. ಬಾಳಾ ಸಾಹೇಬ್‌ ಅವರ ಆಶಯಗಳಿಗೆ ಧಕ್ಕೆಯಾಗುತ್ತಿದೆ ಎಂದು ಬಂಡಾಯವೆದ್ದು, ಇದೀಗ ಮೈತ್ರಿ ಸರ್ಕಾರವನ್ನೇ ಉರುಳಿಸಿದ್ದಾರೆ. 55 ಶಿವಸೇನೆ ಶಾಸಕರ ಪೈಕಿ ಸುಮಾರು 39 ಶಾಸಕರ ಬೆಂಬಲವನ್ನು ಶಿಂಧೆ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಶಿವಸೇನೆ ಪಕ್ಷವೂ ಶಿಂಧೆ ವಶವಾಗಲಿದೆ. ಈ ತಿಕ್ಕಾಟ ಇದೀಗ ನ್ಯಾಯಾಲಯದ ಮಟ್ಟಿಲೇರಿದೆ.

ಒಟ್ಟಾರೆಯಾಗಿ ಆಟೋ ಡ್ರೈವರ್‌ ಶಿಂಧೆ ಅಘಾಡಿ ಸರ್ಕಾರವನ್ನು ಉರುಳಿಸಿದ ಕತೆ, ಭಾರತದ ರಾಜಕೀಯ ಇತಿಹಾಸದಲ್ಲಿ ಹೊಸ ಮೈಲಿಗಲ್ಲಾಗಲಿದೆ.

Exit mobile version