ಸರ್ಕಾರದ ಬೊಕ್ಕಸಕ್ಕೆ ಸಾರಾಯಿ, ಸೇಂದಿ ಗುತ್ತಿಗೆದಾರರಿಂದ 723.42 ಕೋಟಿ ಬಾಕಿ!

excise minister

`ದ ಫೈಲ್ಸ್’ ಪತ್ರಿಕೆಯ ವರದಿ ಅನುಸಾರ, ಸಾರಾಯಿ, ಸೇಂದಿ ಗುತ್ತಿಗೆದಾರರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಬೃಹತ್ ಮೊತ್ತವಾದ 723.42 ಕೋಟಿ ಮಾರ್ಚ್ ಕೊನೆಯ ವಾರದಲ್ಲಿ ಸರ್ಕಾರಕ್ಕೆ ತಲುಪಬೇಕಿತ್ತು. ಆದ್ರೆ ಈ ಕೋಟಿ ರೂ. ಹಾಗೆಯೇ ಬಾಕಿ ಇರುವುದು ಇದೀಗ ಬಟಾಬಯಲಾಗಿದೆ.

ಹೌದು, ಈ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಅಬಕಾರಿ ಸಚಿವ ಗೋಪಾಲಯ್ಯ ಅವರು ಮಾತನಾಡಿದ್ದು, ಅಬಕಾರಿ ಗುತ್ತಿಗೆದಾರರಿಂದ ಯಾವುದೇ ತೆರಿಗೆ ಮತ್ತು ದಂಡಗಳು ಬಾಕಿ ಇಲ್ಲ ಎಂದು ಹೇಳಿದ್ದೆಯಾದರೂ ಸಾರಾಯಿ, ಸೇಂದಿ ಗುತ್ತಿಗೆದಾರರಿಂದ 723.42 ಕೋಟಿ ರೂ. ಬಾಕಿ ಇದ್ದರೂ ವಸೂಲಿಗೆ ಬಿಗಿ ಕ್ರಮ ಕೈಗೊಳ್ಳದೆಯೇ ಕಾಲಹರಣ ಮಾಡುತ್ತಿರುವುದು ಸ್ಪಷ್ಟವಾಗಿದೆ. ಸಾರಾಯಿ ಅಥವಾ ಸೇಂದಿ ಬಾಡಿಗೆ, ನಷ್ಟ, ಬಡ್ಡಿ ಇತ್ಯಾದಿ ಮೂಲಗಳಿಂದ 2021ರ ಮಾರ್ಚ್ ಅಂತ್ಯಕ್ಕೆ ಒಟ್ಟು 607 ಗುತ್ತಿಗೆದಾರರಿಂದ 723.42 ಕೋಟಿ ರೂ. ಸರ್ಕಾರಕ್ಕೆ ಬರಬೇಕಿರುವ ಅಗತ್ಯ ಬಾಕಿಯಾಗಿದೆ.

ಈ ಮೊತ್ತದಲ್ಲಿ 173.49 ಕೋಟಿ ಅಸಲು ಮೊತ್ತವಾಗಿದ್ದು, ಬಡ್ಡಿ 549.93 ಕೋಟಿ ರೂ. ಇದೆ ಎಂದು ಅಂಕಿ ಅಂಶವನ್ನು ಒದಗಿಸಿರುವುದು ಉತ್ತರದಿಂದ ಗೊತ್ತಾಗಿದೆ. ಆದ್ರೆ ಬಾಕಿ ಉಳಿಸಿಕೊಂಡಿರುವ ಗುತ್ತಿಗೆದಾರರ ನಾಮವನ್ನು ಸದ್ಯ ಬಹಿರಂಗಗೊಳಿಸಿಲ್ಲ. ಸಾರಾಯಿ, ಸೇಂದಿ ಗುತ್ತಿಗೆದಾರರಿಂದ ಕೋಟ್ಯಾಂತರ ರೂಪಾಯಿನಷ್ಟು ಬಾಕಿ ಇರುವುದಕ್ಕೆ ಸರ್ಕಾರದ ನೀತಿ ಮತ್ತು ನಿಯಮಗಳಲ್ಲಿ ಇರುವ ನ್ಯೂನತೆಗಳೇ ಕಾರಣ ಎಂದು ಉತ್ತರದಲ್ಲಿ ವಿವರಿಸಲಾಗಿದೆ. ಮುಂಗಡ ಠೇವಣಿ ಹಣವನ್ನು ಪಾವತಿಸಿ ಯಾರು ಬೇಕಾದರೂ ಹರಾಜಿನಲ್ಲಿ ಭಾಗವಹಿಸಬಹುದಾಗಿತ್ತು.

ಇದನ್ನು ಬದಲಾವಣೆ ಮಾಡಿ ಅಬಕಾರಿ ಗುತ್ತಿಗೆದಾರರಾಗಿ ಹೆಸರನ್ನು ನೋಂದಾಯಿಸಿಕೊಳ್ಳುವ ಪ್ರಕ್ರಿಯೆಯನ್ನು ಜಾರಿಗೆ ತಂದಿದ್ದು, ಬಾಕಿ ಉಳಿಯಲು ಪ್ರಮುಖ ಕಾರಣ ಎಂದು ಹೇಳಲಾಗಿದೆ. ಜಿಲ್ಲೆಯ ತಾಲೂಕುಗಳ ಸಾರಾಯಿ ಹಾಗೂ ಸೇಂದಿಯ ಹಕ್ಕನ್ನು ಚಾಲ್ತಿ ವರ್ಷ ಪೂರ್ಣಗೊಳ್ಳುವ ಅಂದ್ರೆ 3-4 ತಿಂಗಳ ಹಿಂದೆಯೇ ಹರಾಜು ಪ್ರಕ್ರಿಯೇ ನಡೆಸುವ ಅನಿವಾರ್ಯವಾಗಿತ್ತು. ಈ ಕಾರಣ ಮುಂದಿನ ಅಬಕಾರಿ ವರ್ಷದ ರಾಜಸ್ವ ಖೋತಾ ಆಗುವ ಸಂಭವ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಚಾಲ್ತಿವರ್ಷ ಪೂರ್ಣಗೊಳ್ಳುವ ಮುಂಚೆಯೇ ಮುಂದಿನ ಅಬಕಾರಿ ವರ್ಷದ ಹರಾಜು ಪ್ರಕ್ರಿಯೆಯನ್ನು ನಡೆಸಲಾಗುತ್ತಿತ್ತು.

ಈ ಹಿನ್ನೆಲೆಯಲ್ಲಿ ಹಿಂದಿನ ವರ್ಷದ ಬಾಕಿ ಉಳ್ಳ ಗುತ್ತಿಗೆದಾರರು ಹೊಸ ಅಬಕಾರಿ ವರ್ಷಕ್ಕೆ ಹೆಸರುಗಳನ್ನು ನೋಂದಾಯಿಸಿ ಗುತ್ತಿಗೆಯನ್ನು ಪಡೆಯಬಹುದಾದ ಸಾಧ್ಯತೆ ಇರುತ್ತಿತ್ತು ಎಂದು ಗೋಪಾಲಯ್ಯ ಅವರು ತಮ್ಮ ಉತ್ತರದಲ್ಲಿ ವಿವರಣೆ ನೀಡಿದ್ದಾರೆ. ಈ ಎಲ್ಲಾ ಕ್ರಮಗಳು ಹಾಗೂ ಯೋಜನೆಗಳನ್ನು ಜಾರಿಗೆ ತಂದಿದಾಗ್ಯೂ ಇಲಾಖೆಯಲ್ಲಿ ವಸೂಲಾಗದೇ ಬಾಕಿ ಉಳಿದಿರುತ್ತದೆ.

ಈ ಹಣವನ್ನು ವಸೂಲು ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿರುತ್ತದೆ ಮತ್ತು ಇಲಾಖೆಯ ಮಾಸಿಕ ಪ್ರಗತಿ ಸಭೆಗಳಲ್ಲಿ ಬಾಕಿ ವಸೂಲಾತಿ ಬಗ್ಗೆ ಅಬಕಾರಿ ಜಂಟಿ ಆಯುಕ್ತರು, ಅಬಕಾರಿ ಉಪ ಆಯುಕ್ತರುಗಳೊಂದಿಗೆ ಚರ್ಚಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿಲಾಗಿರುತ್ತದೆ ಎಂದು ಗೋಪಾಲಯ್ಯನವರು ವಿವರಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

Exit mobile version