ಗಂಡಾಗಿ ಹುಟ್ಟಿ, ಹೆಣ್ಣಾಗಿ ಬದಲಾಗುವ ಮೂಲಕ ಅಚ್ಚರಿ ಮೂಡಿಸುವ ಕೋಡಂಗಿ ಮೀನು!

Clown Fish

ಮಹಾಭಾರತದಲ್ಲಿ(Mahabharatha) ಅರ್ಜುನ ಬೃಹನ್ನಳೆಯಾಗಿ ವೇಷ ಧರಿಸಿದ್ದು, ಮಹಾವಿಷ್ಣು ಮೋಹಿನಿಯಾಗಿ ರೂಪಾಂತರಗೊಳ್ಳುವುದು, ನಾರದ ಮುನಿ ಸುಂದರ ಸ್ತ್ರೀ ಆಗುವುದು, ಇವೆಲ್ಲವೂ ಪುರಾಣಗಳಲ್ಲಿನ ವೇಷ ಬದಲಾವಣೆಯ ಪ್ರಸಂಗಗಳು.

ಈ ರೂಪಾಂತರದ ಪ್ರಕ್ರಿಯೆ ಕೆಲವು ಮೀನುಗಳಲ್ಲೂ ನಡೆಯುತ್ತದೆ. ಕೆಲವು ಮೀನುಗಳು(clown fish) ಗಂಡಾಗಿ ಬದಲಾಗುತ್ತವೆ. ಗಂಡಾದ ಈ ಮೀನುಗಳು ತಂದೆಯ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸುತ್ತವೆ.

ಅದೇ ರೀತಿ, ಗಂಡಾಗಿ ಜನಿಸಿ, ಬೆಳೆದು, ಒಂದು ಹಂತದಲ್ಲಿ ಸಂಪೂರ್ಣವಾಗಿ ಹೆಣ್ಣಾಗಿ ಪರಿವರ್ತನೆಗೊಂಡು ತಾಯ್ತನದ ಪೂರ್ಣ ಸುಖವನ್ನು ಅನುಭವಿಸುವ ಮೀನುಗಳೂ ಇವೆ.

ಎರಡನೇ ವರ್ಗಕ್ಕೆ ಸೇರಿದ ಕ್ಲೌನ್ ಮೀನು(Clown Fish) ಅಥವಾ ಕೋಡಂಗಿ ಮೀನಿನ ಕುತೂಹಲದ ಕಥೆ ಇಲ್ಲಿದೆ. ಕ್ಲೌನ್ ಮೀನು ಸಮುದ್ರವಾಸಿಯಾದ ಲಿಲಿಪುಟ್ ಮೀನು. ಅಂದರೆ ಇದು ದೊಡ್ಡ ಗಾತ್ರಕ್ಕೆ ಬೆಳೆಯುವುದಿಲ್ಲ, ಇವುಗಳ ಗರಿಷ್ಠ ಉದ್ದ ಸುಮಾರು 18 ಸೆಂ.ಮೀ. ಅಂದರೆ ಬರೆಯುವ ಒಂದು ಪೆನ್‌ಗಿಂತ ಚೂರು ಹೆಚ್ಚು ಉದ್ದ ಅಷ್ಟೇ.

ಈ ಮೀನುಗಳು(clown fish) ಆಕರ್ಷಕ ಹಳದಿ, ಕಿತ್ತಳೆ, ಕೆಂಪು ಬಣ್ಣ ಹೊಂದಿರುತ್ತವೆ. ನಡುವೆ ಬಿಳಿ ಪಟ್ಟೆ ಇರುವುದು ಕ್ಲೌನ್‌ಗಳ ಸೌಂದರ್ಯ ಇಮ್ಮಡಿಗೊಳ್ಳಲು ಕಾರಣವಾಗಿದೆ. ಕೆಂಪು ಸಮುದ್ರ, ಮಹಾ ಹವಳ ದಿಬ್ಬ ಸೇರಿದಂತೆ ಹಿಂದು ಮಹಾಸಾಗರ, ಶಾಂತಿ ಸಾಗರಗಳಲ್ಲಿ ಹೆಚ್ಚು ಆಳವಿಲ್ಲದ ಹವಳ ಹಾಸುಗಳ ಮಧ್ಯೆ ಈ ಮೀನುಗಳು ಜೀವಿಸುತ್ತವೆ.

ನಮ್ಮ ದೇಶದ ತಮಿಳುನಾಡಿನ(Tamilnadu) ರಾಮೇಶ್ವರಂ(Rameshwaram) ಹತ್ತಿರ ಹಾಗೂ ಅಂಡಮಾನ್ ಸಮುದ್ರಗಳಲ್ಲಿ ಕೂಡ ಕ್ಲೌನ್ ಮೀನುಗಳನ್ನು ನೋಡಬಹುದು. 
ಕೋಡಂಗಿ ಮೀನುಗಳು ಹೆಚ್ಚಾಗಿ ‘ಸಿ ಅನೆಮೋನ್’(C Anomon) ಅನ್ನುವ ಇನ್ನೊಂದು ಸಾಗರ ಜೀವಿಯ ಜೊತೆ ಕ್ಲೌನ್ ಮೀನು ‘ಹೊಂದಾಣಿಕೆ’ಯ ಜೀವನ ನಡೆಸುತ್ತದೆ. ಸಿ ಅನೆಮೋನ್ ಅಚಲ ಜೀವಿಯೆಂದೇ ಹೇಳಬಹುದು, ಇದು ಚಲಿಸುವುದಿಲ್ಲ. ಇತರ ಭಕ್ಷಕ ಮೀನುಗಳಿಂದ ಕ್ಲೌನ್ ಮೀನಿಗೆ ಸಿ ಅನೆಮೋನ್ ರಕ್ಷಣೆ ಕೊಟ್ಟರೆ, ಕ್ಲೌನ್ ಮೀನು ತನ್ನ ರಂಗು ರಂಗಾದ ಬಣ್ಣದಿಂದ ಇತರ ಪುಟ್ಟ ಮೀನುಗಳನ್ನು ಹತ್ತಿರ ಸೆಳೆದು ಸಿ ಅನೆಮೋನ್‌ಗೆ ಆಹಾರ ಸರಬರಾಜು ಮಾಡುತ್ತದೆ. 
https://vijayatimes.com/siddaramaiah-statement-on-udaipur-incident/

ಇನ್ನು, ಕ್ಲೌನ್ ಮೀನು ‘ಕಾಲೊನಿ ಜೀವಿ’. ಒಂದು ಕಾಲೊನಿಯೆಂದರೆ ಒಂದು ಹೆಣ್ಣು, ಹಲವಾರು ಗಂಡು ಒಳಗೊಂಡಿರುವ ವ್ಯವಸ್ಥೆ. ಗಂಡುಗಳಲ್ಲಿ ಒಂದು ಮಾತ್ರ ಪ್ರೌಢವಾಗಿದ್ದು, ಉಳಿದವು ಕಿಶೋರ ಸ್ಥಿತಿಯಲ್ಲಿರುತ್ತವೆ. ಈ ಮೀನುಗಳಲ್ಲಿ ಶಿಸ್ತಿನ ವರ್ಗಶ್ರೇಣಿ ವ್ಯವಸ್ಥೆ ಕಂಡುಬರುತ್ತದೆ. ಗುಂಪಿನಲ್ಲಿ ದೊಡ್ಡ ಮತ್ತು ಪ್ರಬಲ ಮೀನೆಂದರೆ ಹೆಣ್ಣು. ಯಾವಾಗಲೂ ಕಾಲೊನಿಯ ಮೇಲ್ಭಾಗದಲ್ಲೇ ಇದರ ಸ್ಥಾನ. ಯಾವುದೇ ಕಾರಣದಿಂದ ಹೆಣ್ಣು ಮೀನು ಮರಣ ಹೊಂದಿದರೆ, ಕಾಲೊನಿಯ ಬಲಿಷ್ಠ ಗಂಡು ಮೀನು ಹೆಣ್ಣಾಗಿ ಪರಿವರ್ತನೆಗೊಂಡು ಆ ಸ್ಥಾನ ತುಂಬುತ್ತದೆ.

ಹುಣ್ಣಿಮೆ ಮತ್ತು ಅಮಾವಾಸ್ಯೆಯ ಆಸುಪಾಸು ದಿನಗಳಲ್ಲಿ ಮರಿಗಳು ಜನಿಸುವಂತೆ ಕ್ಲೌನ್ ಮೀನು ಮೊಟ್ಟೆಯಿಡುತ್ತದೆ. ಮೊಟ್ಟೆಯಿಟ್ಟ ನಂತರ ಹೆಣ್ಣು ಮೀನಿನ ಕರ್ತವ್ಯ ಮುಗಿದಂತೆ. ಗಂಡು ಮೀನು ಆರರಿಂದ ಹತ್ತು ದಿನ ಮೊಟ್ಟೆಗಳನ್ನು ನೋಡಿಕೊಂಡು, ತನ್ನ ಈಜು ರೆಕ್ಕೆಗಳನ್ನು ಚಾಮರದಂತೆ ಬೀಸುತ್ತ, ಮೊಟ್ಟೆಗಳ ಸುತ್ತ ನೀರು ಹರಿವು ಇರುವಂತೆ ನೋಡಿಕೊಳ್ಳುತ್ತದೆ. ಹುಟ್ಟುವ ಮೀನುಗಳೆಲ್ಲಾ ಗಂಡುಜಾತಿಗೆ ಸೇರಿರುತ್ತವೆ ಎಂಬುದು ಅಚ್ಚರಿಯೇ ಸರಿ! ಇನ್ನು, ಕ್ಲೌನ್ ಮೀನು ಆರರಿಂದ ಹತ್ತು ವರ್ಷಗಳ ಕಾಲ ಬದುಕುತ್ತದೆ.

ನೀರಿನಲ್ಲಿ ದೊರಕುವ ಸೂಕ್ಷ್ಮ ಸಸ್ಯ ಮತ್ತು ಪ್ರಾಣಿಗಳು ಇದರ ಆಹಾರ. ಜೊತೆಗೆ ಸಿ ಅನೆಮೋನ್ ತಿಂದುಳಿದ ಆಹಾರದ ತುಣುಕುಗಳನ್ನೂ ತಿನ್ನುತ್ತದೆ. ಅದೇ ರೀತಿ, ಕ್ಲೌನ್ ಮೀನು ಬಹು ಬೇಡಿಕೆಯಿರುವ ಅಲಂಕಾರಿಕ ಮೀನು ಕೂಡ ಹೌದು.
Exit mobile version