ಕೊರೊನಾ ನಡುವೆ ಮೇ 26ರಂದು ರೈತರ ಪ್ರತಿಭಟನೆ: ಪ್ರತಿಪಕ್ಷಗಳ ಬೆಂಬಲಕ್ಕೆ ಬಿ.ವೈ.‌ವಿಜಯೇಂದ್ರ ಖಂಡನೆ

ಬೆಂಗಳೂರು, ಮೇ. 24: ದೇಶದೆಲ್ಲೆಡೆ ಕೊರೊನಾ ಸೋಂಕಿತ ಆತಂಕ‌ ಎದುರಾಗಿರುವ ನಡುವೆಯೇ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಮೇ 26ರಂದು ಪ್ರತಿಭಟನೆ ನಡೆಸುತ್ತಿರುವುದನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಖಂಡಿಸಿದ್ದಾರೆ.

ಇಡೀ ದೇಶದ ಜನರು ಕೊರೋನಾ ಸಾಂಕ್ರಾಮಿಕದ 2ನೇ ಅಲೆಯನ್ನು ಒಗ್ಗಟ್ಟಿನಿಂದ ಎದುರಿಸುತ್ತಿರುವಾಗ, ರೈತರ ಪ್ರತಿಭಟನೆಗೆ ಬೆಂಬಲ ನೀಡುವುದು ಬೇಜವಾಬ್ದಾರಿತನ ಮಾತ್ರವಲ್ಲ, ಜನರಿಗೆ, ಅನ್ನದಾತರಿಗೆ ಅಪಾಯ ತಂದೊಡ್ಡುವಂಥದ್ದಾಗಿದೆ. ದುರ್ದೈವವೆಂದರೆ, ವಿಪಕ್ಷಗಳಿಗೆ ಸಾರ್ವಜನಿಕರ ಆರೋಗ್ಯ, ಕ್ಷೇಮಕ್ಕಿಂತ ತಮ್ಮ ಸ್ವಾರ್ಥ ರಾಜಕೀಯವೇ ಮುಖ್ಯವಾಗಿದೆ ಎಂದು ಟೀಕಿಸಿದ್ದಾರೆ.

ಇಂತಹ ಸಂದರ್ಭಗಳಲ್ಲಿ ಜವಾಬ್ದಾರಿಯುತ ರಾಜಕೀಯ ಪಕ್ಷ, ರೈತರಿಗೆ ತಿಳಿಹೇಳುವ, ಮನವೊಲಿಸುವ ಕೆಲಸ ಮಾಡುತ್ತಿತ್ತು, ದಾರಿ ತಪ್ಪಿಸುತ್ತಿರಲಿಲ್ಲ. ಈಗಲಾದರೂ ವಿಪಕ್ಷಗಳು, ರೈತರ, ಅವರ ಕುಟುಂಬ ಸದಸ್ಯರ ಹಿತದೃಷ್ಟಿಯಿಂದ, ಸಾಂಕ್ರಾಮಿಕ ವೇಗವಾಗಿ ಹರಡುವಂತಹ ಪ್ರತಿಭಟನೆಗಳಿಗೆ ಬೆಂಬಲಿಸಿರುವುದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಟ್ವೀಟ್ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಕೃಷಿ‌ ಕಾಯ್ದೆ ತಿದ್ದುಪಡಿ ಮಸೂದೆ ವಿರೋಧಿಸಿ‌ ದೇಶದಲ್ಲಿ ರೈತ ಸಂಘಟನೆಗಳು ನಡೆಸಿದ ಹೋರಾಟ 6 ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ಮೇ 26ರಂದು ಪ್ರತಿಭಟನೆಗೆ ಕರೆ ನೀಡಿದೆ.‌ ಈ ಹೋರಾಟಕ್ಕೆ ಕಾಂಗ್ರೆಸ್, ಜೆಡಿಎಸ್, ಎನ್.ಸಿ.ಪಿ, ಟಿಎಂಸಿ, ಡಿಎಂಕೆ ಸೇರಿದಂತೆ 12 ವಿರೋಧ ಪಕ್ಷಗಳು ಈಗಾಗಲೇ ಬೆಂಬಲ ಸೂಚಿಸಿವೆ.

Exit mobile version