ಕಳೆದ ವರ್ಷ ದೆಹಲಿ(Delhi) ಸುತ್ತಮುತ್ತ ನಡೆದ ರೈತರ ಪ್ರತಿಭಟನೆ ದೇಶ(Country) ಮತ್ತು ಅಂತರಾಷ್ಟ್ರೀಯ(International) ಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು. ಮೋದಿ(Modi) ನೇತೃತ್ವದ ಕೇಂದ್ರ ಸರ್ಕಾರ(Central Government) ರೈತರಿಗೆ(Farmers) ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮೂರು ಹೊಸ ಕೃಷಿ ಕಾನೂನುಗಳನ್ನು ಜಾರಿಗೊಳಿತ್ತು. ಆದರೆ ಕೆಲ ರೈತ ಸಂಘಟನೆಗಳು ಈ ಕಾಯ್ದೆಗಳಿಗೆ ವಿರೋಧ ವ್ಯಕ್ತಪಡಿಸಿದ್ದವು. ಭಾರೀ ಪ್ರತಿರೋಧದ ನಂತರ ಕೇಂದ್ರ ಸರ್ಕಾರ ಮೂರು ಕಾಯ್ದೆಗಳನ್ನು ಹಿಂಪಡೆದಿತ್ತು. ಆದರೆ ಇದೀಗ ಸುಪ್ರೀಂಕೋರ್ಟ್ ನೇಮಿಸಿದ್ದ ಸಮಿತಿ ನೀಡಿದ ವರದಿ ಎಲ್ಲರನ್ನು ಅಚ್ಚರಿಗೊಳಿಸಿದೆ.
ಸುಪ್ರೀಂಕೋರ್ಟ್ ನೇಮಿಸಿದ್ದ ಮೂವರು ಸದಸ್ಯರ ಸಮಿತಿ ನೀಡಿದ ವರದಿ ಪ್ರಕಾರ, ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳಿಗೆ ದೇಶದ ಶೇಕಡಾ 86ರಷ್ಟು ರೈತರ ಬೆಂಬಲವಿತ್ತು. ಮೂರು ಕೋಟಿ ರೈತರು ತಮ್ಮ ಸಂಘಟನೆಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಬೆಂಬಲವನ್ನು ನೀಡಿದ್ದರು. ಹೀಗಾಗಿ ದೇಶದ ಹೆಚ್ಚಿನ ಸಂಖ್ಯೆಯ ರೈತರಿಗೆ ಕಾಯ್ದೆಯಿಂದ ಅನುಕೂಲವಾಗಲಿದ್ದು, ಅವುಗಳನ್ನು ಜಾರಿಗೊಳಿಸಬೇಕೆಂದು ಸುಪ್ರೀಂಕೋರ್ಟ್ ನೇಮಿಸಿದ್ದ ಸಮಿತಿ ಸುಪ್ರೀಂಕೋರ್ಟ್‍ಗೆ ಶಿಪಾರಸ್ಸು ಮಾಡಿತ್ತು.
ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ಹಿಂಪಡೆದು ಬಹುಸಂಖ್ಯಾತ ರೈತರಿಗೆ ಅನ್ಯಾಯ ಮಾಡಿದೆ. ಕೆಲವೇ ಕೆಲ ಸಂಘಟನೆಗಳು ದೆಹಲಿ ಸುತ್ತಮುತ್ತ ಮಾತ್ರ ಪ್ರತಿಭಟನೆಯ ಮೂಲಕ ದೇಶದ ಗಮನ ಸೆಳೆದಿದ್ದವು. ಆದರೆ ಬಹುಸಂಖ್ಯಾತ ರೈತರು ಕಾಯ್ದೆಗೆ ಬೆಂಬಲ ನೀಡಿದ್ದು, ಹೆಚ್ಚು ಪ್ರಚಾರವಾಗಲಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇನ್ನು ಈ ಕಾಯ್ದೆಯಲ್ಲಿನ ಕೆಲ ಅಂಶಗಳ ಬದಲಾವಣೆಗೂ ಸಮಿತಿ ಶಿಫಾರಸು ಮಾಡಿದೆ. ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ನೀಡುವ ಸ್ವಾತಂತ್ರ್ಯವನ್ನು ರಾಜ್ಯಗಳಿಗೆ ನೀಡಬೇಕೆಂದು ಸಮಿತಿ ಹೇಳಿದೆ.
ಇನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆಗಳಿಗೆ ತಡೆ ನೀಡಿ, 2020ರ ಜನವರಿಯಲ್ಲಿ ಸುಪ್ರೀಂಕೋರ್ಟ್ ಮೂವರು ಸದಸ್ಯರ ಸಮಿತಿ ರಚಿಸಿತ್ತು. ಅಂತರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ ಪ್ರಮೋದ್ ಕುಮಾರ್, ಕೃಷಿ ಅರ್ಥಶಾಸ್ತ್ರಜ್ಞ ಅಶೋಕ ಗುಲಾಟಿ ಮತ್ತು ಶೆಟ್ಕರಿ ಸಂಘಟನೆಯ ಅಧ್ಯಕ್ಷ ಅನಿಲ್ ಗಣಾವತ್ ಈ ಸಮಿತಿಯಲ್ಲಿದ್ದರು.
ಕಳೆದ 2021ರ ಮಾರ್ಚ್ 19ರಂದು ಸಮಿತಿ ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ಸುಪ್ರೀಂಕೋರ್ಟ್‍ಗೆ ಸಲ್ಲಿಸಿತ್ತು. ಆದರೆ ಇದುವರೆಗೂ ಸುಪ್ರೀಂಕೋರ್ಟ್ ವರದಿಯ ಅಂಶಗಳನ್ನು ಬಹಿರಂಗಗೊಳಿಸಿರಲಿಲ್ಲ. ಆದರೆ ಕೇಂದ್ರ ಸರ್ಕಾರ ಕಾಯ್ದೆ ಹಿಂಪಡೆದಿರುವುದರಿಂದ ಮೂವರು ಸದಸ್ಯರು ವರದಿ ಬಹಿರಂಗ ಪಡಿಸುವಂತೆ ಸುಪ್ರೀಂಕೋರ್ಟ್‍ಗೆ ಅನೇಕ ಬಾರಿ ಪತ್ರ ಬರೆದಿದ್ದರು. ಆದರೆ ಸುಪ್ರೀಂ ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಸಮಿತಿಯ ಸದಸ್ಯ ಅನಿಲ್ ಗಣಾವತ್ ವರದಿಯ ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ.