ಲಾಕ್‍ಡೌನ್ ಕರಾಳತೆ: ಹಣಕ್ಕಾಗಿ ಮಗುವನ್ನೇ ಮಾರಾಟ ಮಾಡಿ ಸಿಕ್ಕಿಬಿದ್ದ ತಂದೆ

Image : TimesNewsNow.com

ಮಹಾಮಾರಿ ಕೊರೋನಾ ವಕ್ಕರಿಸಿದಾಗಿನಿಂದಲೂ ದೇಶದೆಲ್ಲೆಡೆ ಜನರು ಕಂಗಾಲಾಗಿದ್ದಾರೆ. ಅಲ್ಲದೆ ಲಾಕ್ ಡೌನಿಂದಾಗಿ ಜನ ಜೀವನ ಕೂಡ ಅಸ್ತವ್ಯಸ್ತವಾಗಿದೆ.

ಉಳ್ಳವರು ಜೀವ ಉಳಿದರೆ ಸಾಕಪ್ಪ ಇರುವ ಹಣದಲ್ಲಿ ಜೀವನ ನಡೆಸಬಹುದು ಎಂದು ಯೋಚಿಸಿದರೆ, ಇತ್ತ ದಿನ‌ಗೂಲಿ ಕಾರ್ಮಿಕರು ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಇದಕ್ಕೆ ಉತ್ತಮ ನಿದರ್ಶನದಂತೆ ಅಸ್ಸಾಂನ ಕೊಕ್ರಜಾರ್ ಜಿಲ್ಲೆಯ ಒಂದು ಸಣ್ಣ ಕುಗ್ರಾಮದಲ್ಲಿ ಲಾಕ್ ಡೌನ್ ತನ್ನ ಕರಾಳ ಮುಖ ತೋರಿದೆ.

ಜೀವನಕ್ಕಾಗಿ ಗುಜರಾತ್ ನಲ್ಲಿ ದಿನಗೂಲಿ ನೌಕರನಾಗಿ ದುಡಿಯುತ್ತಿದ್ದ ದೀಪಕ್ ಬ್ರಹ್ಮ ಕೋವಿಡ್ 19 ಬಿಕ್ಕಟ್ಟಿನಿಂದಾಗಿ ಕೆಲಸ ಕಳೆದುಕೊಂಡು ತನ್ನ ಹುಟ್ಟೂರಾದ ಅಸ್ಸಾಂನ ಕೊಕ್ರಜಾರ್ ಜಿಲ್ಲೆಯಲ್ಲಿರುವ ತನ್ನ ಅಜ್ಜಿಯ ಮನೆಗೆ ಹೆಂಡತಿ ರೇಖಾ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮರಳಿದ್ದರು.

ಇದಾದ ಕೆಲವು ದಿನಗಳ ಬಳಿಕ ಮನೆಯಲ್ಲಿದ್ದ ನಾಲ್ಕು ತಿಂಗಳ ಹೆಣ್ಣು ಮಗುವನ್ನು ಕೊಕ್ರಜಾರ್ ನಿವಾಸಿ ಪ್ರಣೀತಾ ನರ್ಜ಼ರಿಯಾ ಹಾಗೂ ಮಗುವಿನ ತಂದೆ ದೀಪಕ್ ಬ್ರಹ್ಮ ಮಗುವನ್ನು ಮನೆಯಿಂದ ಹೊತ್ತೊಯ್ದಿದ್ದಾರೆ. ಬಳಿಕ 460 ಕೀ.ಮಿ ದೂರದ ಕರ್ಬಿ ಎಂಬಲ್ಲಿ ವಾಸವಿದ್ದ ತಮ್ಮ ಸಂಬಂಧಿಯೊಬ್ಬರಿಗೆ ಕಾನೂನು ಬಾಹಿರವಾಗಿ 45 ಸಾವಿರ ರೂ.ಗಳಿಗೆ ಮಗುವನ್ನು ದತ್ತು ನೀಡಿರುತ್ತಾರೆ.

ಈ ನಡುವೆ ಮನೆಯಿಂದ ಕಳುವಾಗಿದ್ದರಿಂದ ಕಂಗಾಲಾದ ರೇಖಾ, ಮಗುವಿಗಾಗಿ ಹುಡುಕಾಟ ನಡೆಸಿ, ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಕಾಣೆಯಾದ ತನ್ನ ಮಗುವನ್ನು ನೆನೆಯುತ್ತಲೇ ಕಣ್ಣೀರಿಡುತ್ತಾ ದಿನ ಕಳೆಯುತ್ತಿದ್ದಳು. ಆದರೆ ತನ್ನ ಮಗು ಕಾಣೆಯಾದ ಘಟನೆ ಹಿಂದೆ ತನ್ನ ಪತಿಯ ಕೈವಾಡ ಇದೆ ಎಂಬ ಸುಳಿವೇ ರೇಖಾಳಿಗೆ ಇರಲಿಲ್ಲ.

ಇದಾದ ಕೆಲವು ದಿನಗಳ ಮಗು ಕಾಣೆಯಾದ ವಿಷಯ ತಿಳಿದ ಗ್ರಾಮಸ್ಥರು, ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದಾದ ಬಳಿಕ ಪ್ರಕರಣದ ಕುರಿತು ಎಫ್. ಐ.ಆರ್. ದಾಖಲಿಸಿಕೊಂಡ ಪೊಲೀಸರು, ಪ್ರಕರಣದ ತನಿಖೆ ಆರಂಭಿಸಿದರು.

ಈ ವೇಳೆ, ಪೊಲೀಸರು ಮಗು ಕಾಣೆಯಾದ ಬಗ್ಗೆ ದೀಪಕ್ ಬ್ರಹ್ಮನನ್ನು ವಿಚಾರಣೆ ನಡೆದ ಸಂದರ್ಭ ಸತ್ಯ ಹೊರಬಿದ್ದಿದೆ. ಈ ಮಾಹಿತಿ ಆಧಾರದ ಮೇಲೆ ಮಗುವಿನ ‌ತಂದೆ ದೀಪಕ್ ಬ್ರಹ್ಮ, ಆತನೊಂದಿಗೆ ಕೈಜೋಡಿಸಿದ ಪ್ರಣೀತ ನರ್ಜ಼ರಿಯಾ ಹಾಗೂ ಮಗುವನ್ನು ದತ್ತು ಪಡೆದ ವ್ಯಕ್ತಿಯನ್ನ ಬಂಧಿಸಿದ್ದಾರೆ. ಅಲ್ಲದೇ ಮಗುವನ್ನು ಅದರ ತಾಯಿ ರೇಖಾ ಅವರಿಗೆ ಹಸ್ತಾಂತರಿಸಿದ್ದಾರೆ.

Exit mobile version