ಏಷ್ಯಾ ಖಂಡದಲ್ಲೇ ಮೊಟ್ಟ ಮೊದಲ ವಿದ್ಯುತ್ ದಾರಿದೀಪ ಅಳವಡಿಸಲ್ಪಟ್ಟ ನಗರ ‘ನಮ್ಮ ಬೆಂಗಳೂರು’

Bengaluru

ಮೈಸೂರು ಅರಸರು(Mysuru Kings) ಕರುನಾಡಿಗೆ ಕೊಟ್ಟ ಕೊಡುಗೆ ಅಪಾರ. ಏಷ್ಯಾ ಖಂಡದಲ್ಲೇ(Asia Continent) ಮೊಟ್ಟ ಮೊದಲ ಬಾರಿಗೆ ಜಲವಿದ್ಯುತ್(Hydro Electricity) ಉತ್ಪಾದಿಸಿದ ಕೀರ್ತಿ ಮೈಸೂರು ಅರಸರಿಗೆ ಸಲ್ಲುತ್ತದೆ. ರಾಜಧಾನಿ ಬೆಂಗಳೂರಿಗೆ(Bengaluru) ವಿದ್ಯುತ್ ಕಲ್ಪಿಸಿದ ಹಿರಿಮೆಯೂ ಮೈಸೂರು ಮಹಾರಾಜರದ್ದೇ. ಶಿವನ ಸಮುದ್ರದಲ್ಲಿ(Shivanasammudra) ಉತ್ಪಾದನೆಯಾದ ವಿದ್ಯುತ್ ಹೇಗೆ ಬೆಂಗಳೂರಿನ ದೀಪಗಳನ್ನ ಬೆಳಗಿದವು ಎನ್ನುವ ಕಥೆಯೇ ರೋಚಕ.

ದೇಶದಲ್ಲಿ ಜಲವಿದ್ಯುತ್ ಪಡೆದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬೆಂಗಳೂರಿಗೆ ವಿದ್ಯುತ್ ಪೂರೈಕೆಯಾಗಿ ಬರೋಬ್ಬರಿ 117 ವರ್ಷಗಳು ಕಳೆದಿವೆ. ಶಿವನಸಮುದ್ರ ಜಲವಿದ್ಯುತ್ ಸ್ಥಾವರದಿಂದ ಬೆಂಗಳೂರಿಗೆ ಅಳವಡಿಸಲಾದ ಏಕ ಮಾರ್ಗದ ಮೂಲಕ 1905ರ ಆ.5 ರಂದು ಮೊಟ್ಟ ಮೊದಲು ವಿದ್ಯುತ್ ಪೂರೈಕೆಯಾಯಿತು. ಆರಂಭದಲ್ಲಿ ಜಲ ವಿದ್ಯುತ್ ಉತ್ಪಾದನೆಯಾದಾಗ ಕೋಲಾರ ಚಿನ್ನದ ಗಣಿಗೆ ಪೂರೈಕೆಯಾಗುತ್ತಿತ್ತು. ಎರಡನೇ ಹಂತದಲ್ಲಿ ವಿದ್ಯುತ್ ಉತ್ಪಾದನೆಯಾದಾಗ ಗಣಿಗೆ ಅಗತ್ಯವಿರುವ ಪ್ರಮಾಣಕ್ಕಿಂತ ಹೆಚ್ಚು ಪೂರೈಕೆಯಾಗುತ್ತಿತ್ತು.

ಹಾಗಾಗಿ ಅಂದಿನ ಮೈಸೂರು ಸರಕಾರದ ಉಪ ಮುಖ್ಯ ಎಂಜಿನಿಯರ್ ಎ.ಸಿ.ಜೆ.ಲಾಬಿನರ್ ಅವರು ಹೆಚ್ಚುವರಿ ವಿದ್ಯುತನ್ನು ಬೆಂಗಳೂರಿನ ಜನತೆಗೆ ಪೂರೈಸಲು ಅವಕಾಶ ನೀಡಬೇಕು ಎಂಬ ಕೋರಿಕೆ ಸಲ್ಲಿಸಿದರು. ಚಿನ್ನದ ಗಣಿ ವ್ಯವಹಾರ ಹೆಚ್ಚು ಕಾಲ ನಡೆಯದ ಕಾರಣ ಬೆಂಗಳೂರಿಗೆ ವಿದ್ಯುತ್ ನೀಡಿದರೆ ಕೈಗಾರಿಕೆಗಳು ಸ್ಥಾಪನೆಯಾಗಿ ಸರಕಾರಕ್ಕೆ ಆದಾಯ ಬರಲಿದೆ ಎಂದು ಪ್ರಸ್ತಾವ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಮೈಸೂರು ಮಹಾರಾಜರು 1904ರ ಮೇ 30 ರಂದು ಒಪ್ಪಿಗೆ ಸೂಚಿಸಿದರು.
ಅದರಂತೆ ಶಿವನಸಮುದ್ರ ಜಲವಿದ್ಯುತ್ ಘಟಕದಿಂದ ಬೆಂಗಳೂರಿಗೆ 35,000 ವೋಲ್ಟ್‌ನ 57 ಮೈಲಿ ಉದ್ದದ ಏಕಮಾರ್ಗ ನಿರ್ಮಿಸಲಾಯಿತು.

ಆ ಕಾಲದಲ್ಲಿ ಇದಕ್ಕೆ 7,46,000 ರೂ. ವೆಚ್ಚವಾಗಿತ್ತು. 1905ರ ಆ.5ರಂದು ಬೆಂಗಳೂರಿನಲ್ಲಿ ಜಲವಿದ್ಯುತ್ ಬೆಳಕು ಬೆಳಗಿತು. ವಿದ್ಯುತ್ ಸಂಪರ್ಕ ನೀಡಿದ ಮೊದಲ ವರ್ಷದ ವೆಚ್ಚ 5,86,120 ರೂ. ಆದರೆ ಸಂಗ್ರಹವಾದ ಆದಾಯ 36,476 ರೂ. ಮಾತ್ರ. ಆಗ ಮನೆಗಳಿಗೆ ಸಂಪರ್ಕ ಕಲ್ಪಿಸುವುದಕ್ಕಿಂತ ಮೊದಲು ಬೆಂಗಳೂರಿನ ರಸ್ತೆಗಳಿಗೆ ವಿದ್ಯುತ್ ದೀಪ ಹಾಕಲಾಯಿತು. ಬೆಂಗಳೂರಿಗೆ ವಿದ್ಯುತ್ ಪೂರೈಕೆಗೂ ಮೊದಲು ಸೀಮೆಎಣ್ಣೆ ಲಾಂದ್ರದ ಕಂಬಗಳಿದ್ದವು. ನಿತ್ಯ ಸಂಜೆ ಒಬ್ಬರು ದೀಪಗಳಿಗೆ ಎಣ್ಣೆ ಹಾಕುತ್ತಿದ್ದರೆ, ಮತ್ತೊಬ್ಬರು ಹಿಂದಿನಿಂದ ದೀಪ ಬೆಳಗಿಸುತ್ತಿದ್ದರು. ಲಾಂದ್ರ ದೀಪಗಳ ನಿರ್ವಹಣೆಗೆ ವರ್ಷಕ್ಕೆ 12,000 ರೂ. ವೆಚ್ಚವಾಗುತ್ತಿತ್ತು ಎನ್ನಲಾಗಿದೆ.

ಬೆಂಗಳೂರಿಗೆ ವಿದ್ಯುತ್ ಪೂರೈಕೆ ಜನರಲ್ಲಿ ಸಂತಸ ತಂದರೂ ಬೆಲೆ ದುಬಾರಿ ಎನಿಸಿತ್ತು. ಇಂದಿನ ಟ್ಯೂಬ್‌ಲೈಟ್ ಅಥವಾ 40 ವ್ಯಾಟ್‌ನ ಬಲ್ಬ್ ಬಳಕೆಗೆ ತಿಂಗಳಿಗೆ ಒಂದು ರೂಪಾಯಿ ಎರಡು ಆಣೆ ವ್ಯಯವಾಗುತ್ತಿತ್ತು. ದೀಪ ಉರಿಸಿದರೂ, ಉರಿಸದಿದ್ದರೂ ಶುಲ್ಕ ಪಾವತಿಸಬೇಕಿತ್ತು. 1905 ರಲ್ಲಿ ಬೆಂಗಳೂರಿನಲ್ಲಿ 1395 ಬೀದಿ ದೀಪಗಳಿದ್ದವು ಎಂಬ ದಾಖಲೆಯಿದೆ.

Exit mobile version