ಇತಿಹಾಸ ಬರೆದ ದ್ರೌಪದಿ ಮುರ್ಮು ; ಭಾರತದ ಪ್ರಥಮ ಬುಡಕಟ್ಟು ರಾಷ್ಟ್ರಪತಿಯಾಗಿ ಆಯ್ಕೆ

New President

ಎನ್ಡಿಎ ಅಭ್ಯರ್ಥಿಯಾಗಿ(NDA Candidate) ರಾಷ್ಟ್ರಪತಿ ಚುನಾವಣಾ(President Election 2022) ಕಣಕ್ಕಿಳಿದ ಬುಡಕಟ್ಟು ಮಹಿಳೆ(Tribal Woman) ದ್ರೌಪದಿ ಮುರ್ಮು(Droupadi Murmu) ಅವರು ಬಹುಮತ ಪಡೆದು ಇಂದು ದೇಶದ ಪ್ರಥಮ ಬುಡಕಟ್ಟು ರಾಷ್ಟ್ರಪತಿಯಾಗಿ(President) ಹೊರಹೊಮ್ಮುವ ಮುಖೇನ ಇತಿಹಾಸ(History) ಸೃಷ್ಟಿಸಿದ್ದಾರೆ.

ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಿ, ಅಭಿನಂದಿಸುತ್ತಿರುವ ಅನೇಕರು ರಾಷ್ಟ್ರಪತಿಯಾದ ಬಳಿಕ ಅವರ ಕುರಿತು ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಡಿಶಾದ(Odisha) 64 ವರ್ಷದ ಬುಡಕಟ್ಟು ಮಹಿಳೆ ಗುರುವಾರ ಭಾರತದ ಮೊದಲ ಆದಿವಾಸಿ ರಾಷ್ಟ್ರಪತಿಯಾಗಿ ಆಯ್ಕೆಯಾದಾಗ ಇತಿಹಾಸವನ್ನು ನಿರ್ಮಿಸಿದರು, ವಿರೋಧ ಪಕ್ಷದ ಯಶವಂತ್ ಸಿನ್ಹಾ(Yashwant Sinha) ಅವರನ್ನು ಬಹುಮತಗಳಿಂದ ಮಣಿಸಿ ವಿಜಯದ ಪತಾಕೆಯನ್ನು ಹಾರಿಸಿದ್ದಾರೆ.

ಮುರ್ಮು ಅವರು ಭಾರತದ ಮೊದಲ ಪ್ರಜೆಯಾದ ಎರಡನೇ ಮಹಿಳೆ. ಅವರು ಸ್ವಾತಂತ್ರ್ಯದ ನಂತರ ಜನಿಸಿದ ಮೊದಲ ರಾಷ್ಟ್ರಪತಿ ಮತ್ತು ಉನ್ನತ ಹುದ್ದೆಯನ್ನು ಅಲಂಕರಿಸಿದ ಅತ್ಯಂತ ಕಿರಿಯ ವ್ಯಕ್ತಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ದೇಶದ ಮುಂದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ನಿಮಗೆ ತಿಳಿಯದ ಕೆಲ ಮಾಹಿತಿ ಇಲ್ಲಿದೆ.

ಆರಂಭಿಕ ಜೀವನ : ಜೂನ್ 20, 1958 ರಂದು ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಉಪರ್ಬೆಡಾ ಗ್ರಾಮದಲ್ಲಿ ಸಂತಾಲ್ ಕುಟುಂಬದಲ್ಲಿ ಜನಿಸಿದ ಮುರ್ಮು ಅವರ ಪ್ರಯಾಣವು, ಅನೇಕರಿಗೆ ಸ್ಪೂರ್ತಿದಾಯಕ ಕಥೆಯಾಗಿದೆ. ಬುಡಕಟ್ಟು ಸಮುದಾಯದಲ್ಲಿ ವಿದ್ಯಾಭ್ಯಾಸ ಏನು ಎಂಬುದರ ಬಗ್ಗೆ ಕಿಂಚಿತ್ತು ಅರಿವಿಲ್ಲದ ಸಮಯದಲ್ಲಿ, ತಮ್ಮ ಹಳ್ಳಿಯಲ್ಲಿ ಕಾಲೇಜಿಗೆ ಹೋದ ಮೊದಲ ಯುವತಿ ದ್ರೌಪದಿ ಮುರ್ಮು.

ರಾಜಕೀಯದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು, ದ್ರೌಪದಿ ಮುರ್ಮು ಅವರು ರಾಯರಂಗಪುರದ ಶ್ರೀ ಅರಬಿಂದೋ ಸಮಗ್ರ ಶಿಕ್ಷಣ ಕೇಂದ್ರದಲ್ಲಿ ಶಿಕ್ಷಕರಾಗಿದ್ದರು. ನಂತರ ಅವರು ಒಡಿಶಾ ಸರ್ಕಾರದ ನೀರಾವರಿ ಮತ್ತು ವಿದ್ಯುತ್ ಇಲಾಖೆಯಲ್ಲಿ ಕಿರಿಯ ಸಹಾಯಕರಾಗಿ ಕೆಲಸ ಮಾಡಿದರು.

ರಾಜಕೀಯ ಯಶಸ್ಸು :
ರಾಯರಂಗಪುರದಿಂದ ಅವರು ಬಿಜೆಪಿಗೆ(BJP) ಮೊದಲ ಹೆಜ್ಜೆ ಇಟ್ಟರು. ಅವರು 1997 ರಲ್ಲಿ ರಾಯರಂಗಪುರ ನಗರ ಪಂಚಾಯತ್ ಚುನಾವಣೆಯಲ್ಲಿ ಜಯಗಳಿಸಿದರು ಮತ್ತು ಕೌನ್ಸಿಲರ್(Councillor) ಆಗಿ ಸೇವೆ ಸಲ್ಲಿಸಿದರು.

ದ್ರೌಪದಿ ಮುರ್ಮು ಅವರು 2000 ರಲ್ಲಿ ಒಡಿಶಾ ವಿಧಾನಸಭೆಗೆ ಮೊದಲ ಬಾರಿಗೆ ಚುನಾಯಿತರಾದರು ಮತ್ತು ವಾಣಿಜ್ಯ ಮತ್ತು ಉದ್ಯಮದ ರಾಜ್ಯ (ಸ್ವತಂತ್ರ ಉಸ್ತುವಾರಿ) ಮತ್ತು BJD-BJP ಸಮ್ಮಿಶ್ರ ಸರ್ಕಾರದಲ್ಲಿ ಮೀನುಗಾರಿಕೆ ಮತ್ತು ಪ್ರಾಣಿ ಸಂಪನ್ಮೂಲ ಅಭಿವೃದ್ಧಿ ಸಚಿವರಾದರು.

2004 ರಲ್ಲಿ, ಅವರು ರಾಜ್ಯ ವಿಧಾನಸಭೆಯಲ್ಲಿ ಎರಡನೇ ಅವಧಿಗೆ ಗೆದ್ದರು. ಒಡಿಶಾದ ಸಾರಿಗೆ ಸಚಿವೆಯಾಗಿ, ರಾಜ್ಯದ ಎಲ್ಲಾ 58 ಉಪವಿಭಾಗಗಳಲ್ಲಿ ಸಾರಿಗೆ ಕಛೇರಿಗಳನ್ನು ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಜಾರ್ಖಂಡ್ ರಾಜ್ಯಪಾಲರಾಗಿ(Governor Of Jharkhand) ದ್ರೌಪದಿ ಮುರ್ಮು ಅವರು 2015 ರಲ್ಲಿ ಆಯ್ಕೆಯಾದರು. ಮುರ್ಮು ಅವರನ್ನು ಜಾರ್ಖಂಡ್‌ನ ಗವರ್ನರ್ ಆಗಿ ನೇಮಿಸಲಾದ ಬಳಿಕ 2021 ರವರೆಗೆ ಹುದ್ದೆಯಲ್ಲಿ ಇದ್ದು ಕಾರ್ಯ ನಿರ್ವಹಿಸಿದರು. ಇದರೊಟ್ಟಿಗೆ ರಾಜ್ಯದ ಮೊದಲ ಮಹಿಳಾ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು.

ಸಂತಾಲ್ ನಾಯಕರಾಗಿ ಮತ್ತು ಅವರ ಸಮುದಾಯಕ್ಕೆ ಮತ್ತು ಸಾಮಾನ್ಯವಾಗಿ ಮಹಿಳೆಯರಿಗೆ ಸ್ಪೂರ್ತಿದಾಯಕ ವ್ಯಕ್ತಿಯಾಗಿ, ದ್ರೌಪದಿ ಮುರ್ಮು ಅವರು ಕಾಣಿಸಿಕೊಂಡವರು. ಸದಾ ಬುಡಕಟ್ಟು ಸಮುದಾಯದ ಹಿತಾಸಕ್ತಿಗಳನ್ನು ಮುಂಚೂಣಿಯಲ್ಲಿಟ್ಟು ಅವರ ಅಭಿವೃದ್ಧಿಗಾಗಿ ಹೆಚ್ಚು ಶ್ರಮಿಸಿದರು.

ಬಿಜೆಪಿ ಸರ್ಕಾರವು ಜಾರ್ಖಂಡ್ ವಿಧಾನಸಭೆಯಲ್ಲಿ ಚೋಟಾ ನಾಗ್ಪುರ್ ಟೆನೆನ್ಸಿ ಮತ್ತು ಸಂತಾಲ್ ಪರಗಣಸ್ ಟೆನೆನ್ಸಿ ಕಾನೂನುಗಳನ್ನು ಅಂಗೀಕರಿಸಿದಾಗ, ದ್ರೌಪದಿ ಮುರ್ಮು ಅವರ ಒಪ್ಪಿಗೆಯನ್ನು ತಡೆಹಿಡಿದರು.

ಇದು ತಮ್ಮ ಭೂಮಿಯ ಹಕ್ಕನ್ನು ಮೊಟಕುಗೊಳಿಸುತ್ತದೆ ಎಂಬ ಭಯದಿಂದ ಆದಿವಾಸಿಗಳು ಇದನ್ನು ವಿರೋಧಿಸಿದ್ದರು. 2009-2015 ಆರು ವರ್ಷಗಳ ಅವಧಿಯಲ್ಲಿ ದ್ರೌಪದಿ ಮುರ್ಮು ಅವರು ತಮ್ಮ ಪತಿ, ತಾಯಿ, ಇಬ್ಬರು ಮಕ್ಕಳು ಹಾಗೂ ಸಹೋದರನನ್ನು ಕಳೆದುಕೊಂಡರು.

ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದರೂ ಕೂಡ ಛಲ ಬಿಡದೆ, ಶ್ರಮವಹಿಸಿ ಕೆಲಸ ಮಾಡಿ ಅಧಿಕಾರಕ್ಕೆ ಬಂದವರು ಎಂದು ಅವರನ್ನು ಹತ್ತಿರದಿಂದ ನೋಡಿದ ಜನಸಾಮಾನ್ಯರು ಕೊಂಡಾಡಿ ಹೇಳುತ್ತಾರೆ. ಇನ್ನು ಸಂತಾಲಿ ಭಾಷೆ(Santhali Language) ಹಾಗೂ ಓಡಿಯಾ ಭಾಷೆಯನ್ನು(Odia Language) ಸಲಿಸಾಗಿ, ಸ್ಪಷ್ಟವಾಗಿ ಮಾತನಾಡುತ್ತಾರೆ.

ದ್ರೌಪದಿ ಮುರ್ಮು ಅವರಿಗೆ ಸಿಹಿ ಎಂದರೆ ಅಚ್ಚುಮೆಚ್ಚು. ಸಿಹಿ ತಿಂಡಿಯನ್ನು ಬಹಳ ಆಸೆಯಿಂದ, ಇಷ್ಟಪಟ್ಟು ಸವಿಯುತ್ತಾರೆ. ಸಿಹಿಯಾದ ಚಾಕಲೇಟ್, ಲಡ್ಡೂ, ಸಿಹಿ ಪದಾರ್ಥಗಳನ್ನು ತಾವೊಬ್ಬರು ತಿನ್ನುವುದರ ಜೊತೆಗೆ ಸುತ್ತಮುತ್ತ ಇರುವ ಜನರಿಗೆ ತಿನ್ನಿಸುವುದು ಅವರ ಸ್ವಭಾವ.

ಒಟ್ಟಾರೆ ದ್ರೌಪದಿ ಮುರ್ಮು ಅವರು ಇಂದು ದೇಶದ ಪ್ರಥಮ ಬುಡಕಟ್ಟು ಮಹಿಳಾ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವುದು ದೇಶದ ಜನರಿಗೆ ಸಾಕಷ್ಟು ಸಂತಸ ತಂದಿದೆ. ಅವರು 5 ವರ್ಷಗಳ ಅವಧಿ ಪೂರ್ಣವಾಗಲಿ, ದೇಶಕ್ಕೆ ಉತ್ತಮ ಕೊಡುಗೆಗಳನ್ನು ನೀಡಲಿ ಎಂಬುದು ಭಾರತೀಯರ ಆಶಯ.
Exit mobile version