ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ನಂ 1

ನವದೆಹಲಿ ಅ 8 : ಅಮೆರಿಕದ ಫೋರ್ಬ್ಸ್ ಮ್ಯಾಗಜಿನ್‌ ಭಾರತದ 100 ಶ್ರೀಮಂತರ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ರಿಲಯನ್ಸ್‌ ಸಮೂಹದ ಮುಖ್ಯಸ್ಥ ಮುಕೇಶ್‌ ಅಂಬಾನಿ 6.85 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ಸತತ 14ನೇ ವರ್ಷ ಮೊದಲ ಸ್ಥಾನ ಕಾಪಾಡಿಕೊಂಡಿದ್ದಾರೆ. ಉಳಿದಂತೆ ಅದಾನಿ ಸಮೂಹದ ಗೌತಮ್‌ ಅದಾನಿ  5.53 ಲಕ್ಷ ಕೋಟಿ ರು.ನೊಂದಿಗೆ 2ನೇ ಸ್ಥಾನ ಮತ್ತು ಎಚ್‌ಸಿಎಲ್‌ ಗ್ರೂಪ್‌ನ ಶಿವ ನಾಡಾರ್‌ 2.29 ಲಕ್ಷ ಕೋಟಿ ರು. ಆಸ್ತಿಯೊಂದಿಗೆ 3ನೇ ಸ್ಥಾನ ಪಡೆದಿದ್ದಾರೆ.

ಈ ಟಾಪ್‌ 100 ಶ್ರೀಮಂತರು ಒಟ್ಟು 57 ಲಕ್ಷ ಕೋಟಿ ರು. ಆಸ್ತಿ ಹೊಂದಿದ್ದಾರೆ. ಕಳೆದ ವರ್ಷ ಇಡೀ ದೇಶ ಕೋವಿಡ್‌ನಿಂದಾಗಿ ನಾನಾ ರೀತಿಯ ಸಮಸ್ಯೆ ಎದುರಿಸುತ್ತಿದ್ದರೂ, ಈ 100 ಜನರ ಆಸ್ತಿಗೆ ಮತ್ತೆ ಒಟ್ಟಾರೆ 19 ಲಕ್ಷ ಕೋಟಿ ರು. ಸೇರ್ಪಡೆಯಾಗಿದೆ ಎಂದು ವರದಿ ಹೇಳಿದೆ. 100 ಜನರಲ್ಲಿ 6 ಮಹಿಳೆಯರು ಕೂಡಾ ಸ್ಥಾನ ಪಡೆದಿದ್ದಾರೆ. ಸಾವಿತ್ರಿ ಜಿಂದಾಲ್‌ ಟಾಪ್‌ 10ರಲ್ಲಿ ಸ್ಥಾನ ಪಡೆದುಕೊಂಡ ಏಕೈಕ ಮಹಿಳೆ.

 ಮುಕೇಶ್‌ ಅಂಬಾನಿ ಸತತ 14ನೇ ವರ್ಷ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ 1 ವರ್ಷದಲ್ಲಿ ಅವರ ಆಸ್ತಿಯಲ್ಲಿ 29600 ಕೋಟಿ ರು.ನಷ್ಟುಹೆಚ್ಚಳವಾಗಿ 6.85 ಲಕ್ಷ ಕೋಟಿ ರು.ಗೆ ತಲುಪಿದೆ. ಇನ್ನು 2ನೇ ಸ್ಥಾನದಲ್ಲಿರುವ ಗೌತಮ್‌ ಅದಾನಿ ಆಸ್ತಿ ಕಳೆದೊಂದು ವರ್ಷದಲ್ಲಿ 3.70 ಲಕ್ಷ ಕೋಟಿ ರು.ನಷ್ಟುಹೆಚ್ಚಾಗಿ 5.53 ಲಕ್ಷ ಕೋಟಿ ರು.ಗೆ ತಲುಪಿದೆ. ಇನ್ನು 3ನೇ ಸ್ಥಾನದಲ್ಲಿರುವ ಶಿವ ನಾಡಾರ್‌ ಆಸ್ತಿ ಕಳೆದ 1 ವರ್ಷದಲ್ಲಿ 78440 ಕೋಟಿ ರು.ನಷ್ಟುಹೆಚ್ಚಾಗಿ 2.29 ಲಕ್ಷ ಕೋಟಿ ರು. ತಲುಪಿದೆ.

ಕಿರಿ, ಹಿರಿಯ ಸಿರಿವಂತರು:

2020ರ ಪಟ್ಟಿಯಲ್ಲಿದ್ದ 11 ಶ್ರೀಮಂತರು ಬಾರಿ ಹೊರಬಿದ್ದಿದ್ದಾರೆ. 6 ಜನರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಇವರಲ್ಲಿ ಮೂವರು ಔಷಧ ವಲಯಕ್ಕೆ ಸೇರಿದವರು. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಟಾಪ್‌ 100ರ ಪಟ್ಟಿಯಲ್ಲಿ ಅತ್ಯಂತ ಕೆಳಗಿನ ಸ್ಥಾನ ಪಡೆದವರ ಆಸ್ತಿಯೇ 2 ಶತಕೋಟಿ ಡಾಲರ್‌ (ಅಂದಾಜು 14500 ಕೋಟಿ ರು.) ತಲುಪಿದೆ. ಇನ್ನು ಬೈಜೂಸ್‌ನ ದಿವ್ಯಾ ಗೋಕುಲ್‌ನಾಥ್‌ (35) ಮತ್ತು ಝೀರೋದಾ ನಿಖಿಲ್‌ ಕಾಮತ್‌ (35) ಪಟ್ಟಿಯಲ್ಲಿ ಸ್ಥಾನ ಪಡೆದ ಅತಿ ಕಿರಿಯ ಮತ್ತು ಪಲ್ಲೋನ್‌ಜೀ ಮಿಸ್ತ್ರಿ (92) ಮತ್ತು ದೇವೇಂದ್ರ ಜೈನ್‌ (92) ಅತಿ ಹಿರಿಯ ಶ್ರೀಮಂತರು ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

ಟಾಪ್‌ 10 ಶ್ರೀಮಂತರು

ಮುಕೇಶ್‌ ಅಂಬಾನಿ 6.85 ಲಕ್ಷ ಕೋಟಿ

ಗೌತಮ್‌ ಅದಾನಿ 5.53 ಲಕ್ಷ ಕೋಟಿ

ಶಿವ ನಾಡಾರ್‌ 2.29 ಲಕ್ಷ ಕೋಟಿ

ರಾಧಾಕೃಷ್ಣ ಧಮಾನಿ 2.17 ಲಕ್ಷ ಕೋಟಿ

ಸೈರಸ್‌ ಪೂನಾವಾಲಾ 1.40 ಲಕ್ಷ ಕೋಟಿ

ಲಕ್ಷ್ಮೀ ನಿವಾಸ್‌ ಮಿತ್ತಲ್‌ 1.39 ಲಕ್ಷ ಕೋಟಿ

ಸಾವಿತ್ರಿ ಜಿಂದಾಲ್‌ 1.33 ಲಕ್ಷ ಕೋಟಿ

ಉದಯ್‌ ಕೋಟಕ್‌ 1.22 ಲಕ್ಷ ಕೋಟಿ

ಪಲ್ಲೋನ್‌ ಜಿ ಮಿಸ್ತ್ರೀ 1.21 ಲಕ್ಷ ಕೋಟಿ

ಕುಮಾರ ಮಂಗಲಂ ಬಿರ್ಲಾ 1.16 ಲಕ್ಷ ಕೋಟಿ

ಇವರು ಈ ಸಾಲಿನ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

Exit mobile version