ಸಹಕಾರಿ ಸಂಘಗಳಿಗೆ ಹೊಸ ಸಹಕಾರಿ ನೀತಿ – ಅಮಿತ್ ಶಾ

ನವದೆಹಲಿ ಸೆ 25 : ದೇಶಾದ್ಯಂತ ಇರುವ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸರ್ಕಾರವು ಸೂಕ್ತ ಬದಲಾವಣೆಗಳೊಂದಿಗೆ ಹೊಸ ಸಹಕಾರಿ ನೀತಿಯನ್ನು ತರಲಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.ಈ ವರ್ಷದ ಅಂತ್ಯದೊಳಗೆ ಹೊಸ ನೀತಿಯನ್ನು ಜಾರಿಗೆ ತರಲಾಗುವುದು ಎಂದಿದ್ದಾರೆ.

ಮೊದಲ ಕೋ ಅಪರೇಟಿವ್ ಕಾನ್ಫರೆನ್ಸ್ ಅನ್ನು ಉದ್ದೇಶಿಸಿ ಮಾತನಾಡಿದ ಅವರು, ಸಹಕಾರಿ ಕ್ಷೇತ್ರವನ್ನು ಬಲಪಡಿಸುವ ಅಗತ್ಯವಿದೆ ಮತ್ತು ಸಂಪೂರ್ಣ ನೆಟ್‌ವರ್ಕ್‌ನಲ್ಲಿರುವ ಎಲ್ಲಾ ಪ್ರಮುಖ ಘಟಕಗಳು ಶೀಘ್ರದಲ್ಲೇ ಕಂಪ್ಯೂಟರೀಕೃತಗೊಳ್ಳಲಿವೆ ಎಂದು ಹೇಳಿದರು.

ಸಹಕಾರಿ ರಾಜ್ಯಕ್ಕೆ ಸಂಬಂಧಿಸಿದ ವಿಷಯ ಎಂದು ಅನೇಕ ಜನರು ಹೇಳುತ್ತಾರೆ. ಆದರೆ ನಾವು ರಾಜ್ಯಗಳೊಂದಿಗೆ ಯಾವುದೇ ಮುಖಾಮುಖಿ ನಡೆಸುವುದಿಲ್ಲ ಮತ್ತು ಬಡತನ ನಿವಾರಣೆಯಲ್ಲಿ ಅವರೊಂದಿಗೆ ಕೆಲಸ ಮಾಡುತ್ತೇವೆ ಮತ್ತು ಸಹಕಾರದ ವಿಷಯದಲ್ಲಿ ಅವರಿಗೆ ಸಹಾಯ ಮಾಡುತ್ತೇವೆ ಎಂದು ಶಾ ಹೇಳಿದ್ದಾರೆ.

ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ಪಿಎಸಿ), ಜಿಲ್ಲಾ ಸಹಕಾರಿ ಬ್ಯಾಂಕುಗಳು, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಮತ್ತು ಇತರ ಪ್ರಮುಖ ಹಣಕಾಸು ಸಂಸ್ಥೆಗಳನ್ನು ಹೊಸ ಸಾಫ್ಟ್‌ವೇರ್ ವ್ಯವಸ್ಥೆಯೊಂದಿಗೆ ನವೀಕರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಜೊತೆಗೆ ದೇಶದ ಮೀನುಗಾರರಿಗಾಗಿ ಹೊಸ ಸಹಕಾರವನ್ನು ರಚಿಸಲಾಗುವುದು ಎಂದು ಶಾ ಘೋಷಿಸಿದರು, ಇದು ಅವರ ವ್ಯವಹಾರದಲ್ಲಿ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತದೆ ಎಂದಿದ್ದಾರೆ. 2025 ರ ವೇಳೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯನ್ನು ಸಾಧಿಸುವಲ್ಲಿ ಸಹಕಾರಿ ವಲಯವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಮಿತ್ ಶಾ ತಿಳಿಸಿದ್ದಾರೆ

Exit mobile version