ಹೋಗಿದ್ದು ಕೊರೊನಾ ಲಸಿಕೆ ಪಡೆಯೋಕ್ಕೆ; ಕೊಟ್ಟಿದ್ದು ಮಾತ್ರ ಹುಚ್ಚುನಾಯಿ ಇಂಜೆಕ್ಷನ್

ಉತ್ತರ ಪ್ರದೇಶ, ಏ. 09: ಲಸಿಕೆ ಪಡೆಯಲು ಹೋದ ವೃದ್ಧೆಯರಿಗೆ ಹುಚ್ಚುನಾಯಿ ಇಂಜೆಕ್ಷನ್‌ ನೀಡಿ ಅವಾಂತರ ಸೃಷ್ಟಿಸಿರುವ ಘಟನೆ ಇಲ್ಲಿನ ಶಾಮ್ಲಿ ಆಸ್ಪತ್ರೆಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

ಸ್ಥಳೀಯರಾದ ಸರೋಜಾ (70), ಅನಾರ್ಕಲಿ (72), ಸತ್ಯವತಿ (60) ಶಾಮ್ಲಿಯ ಕಂದಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್‌ ಲಸಿಕೆ ಪಡೆಯಲು ತೆರಳಿದ್ದರು. ಈ ವೇಳೆ ಆರೋಗ್ಯ ಕೇಂದ್ರಕ್ಕೆ ಹೋದವರಿಂದ ಹೊರಗಿನಿಂದ 10 ರೂ.ಗೆ ಸಿರಿಂಜ್‌ ಅನ್ನು ತರಿಸಿಕೊಂಡು ನಂತರ ಆರೋಗ್ಯ ಸಿಬ್ಬಂದಿ ಲಸಿಕೆ ಬದಿಲಿಗೆ ಹುಚ್ಚುನಾಯಿ ಇಂಜೆಕ್ಷನ್‌ ನೀಡಿದ್ದಾರೆ.

ಮನೆಗೆ ಹಿಂತಿರುಗಿದಾಗ ವೃದ್ಧೆಯೊಬ್ಬರಿಗೆ ತಲೆ ತಿರುಗುವಿಕೆಯಾಗಿ, ಆರೋಗ್ಯದಲ್ಲಿ ಏರುಪೇರಾಗಿದೆ. ಸ್ಥಳೀಯರು ತಕ್ಷಣ ಆಕೆಯನ್ನು ಖಾಸಗಿ ಆಸ್ಪತ್ರೆಯೊಂದರಲ್ಲಿ ತೋರಿಸಿದಾಗ ವಿಚಾರ ಗೊತ್ತಾಗಿದೆ. ಆರೋಗ್ಯ ಸಿಬ್ಬಂದಿ ಯಡವಟ್ಟಿನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಆಸ್ಪತ್ರೆಯ ಸಿಎಂಇ ಶಾಮ್ಲಿ ಅಗರವಾಲ್‌ ಅವರಿಗೆ ಒತ್ತಾಯಿಸಿದ್ದಾರೆ.

ಹುಚ್ಚುನಾಯಿ ಇಂಜೆಕ್ಷನ್‌ ಕೊಟ್ಟ ಪರಿಣಾಮ ವೃದ್ಧೆಯೊಬ್ಬರ ಸ್ಥಿತಿ ಗಂಭೀರವಾಗಿದೆ. ಘಟನೆಗೆ ಕಾರಣರಾದ ವೈದ್ಯಾಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ವೃದ್ಧೆ ಸಂಬಂಧಿಕರು ಒತ್ತಾಯಿಸಿದ್ದಾರೆ. ಅಲ್ಲದೇ ಈ ಅಚಾತುರ್ಯ ನಡೆದ ನಂತರ ಘಟನೆಯನ್ನು ಮುಚ್ಚಿಹಾಕಲು ಇಂಜೆಕ್ಷನ್‌ಗೆ ಸಂಬಂಧಿಸಿದ ಉಪಕರಣವನ್ನು ಕಾರ್ಪೆಟ್‌ ಅಡಿಯಲ್ಲಿ ಬಚ್ಚಿಡಲು ಪ್ರಯತ್ನಿಸಿದೆ. ಆದರೆ, ಈ ವಿಚಾರ ಎಲ್ಲ ಕಡೆ ಗೊತ್ತಾಗಿದೆ. ಜನರಿಗೆ ಸೂಕ್ತವಾಗಿ ಲಸಿಕೆ ನೀಡುವಲ್ಲಿ ಕಂದಾಲ ಆರೋಗ್ಯ ಇಲಾಖೆ ವಿಫಲವಾಗಿದೆ ಎಂದು ಎಲ್ಲೆಡೆ ವಿರೋಧ ವ್ಯಕ್ತವಾಗಿದೆ.

Exit mobile version